ಅಮಿತ್ ಶಾ ಬರ್ತಾರೆ, ಆದ್ರೆ ಮಾತನಾಡ್ತಾರಾ..? ಇದೇ ಸಿಎಂ ಚಿಂತೆ!

ಡಿಜಿಟಲ್ ಕನ್ನಡ ಟೀಮ್:

ಅಮಿತ್ ಶಾ ಬರ್ತಾರೆ ಸಚಿವ ಸಂಪುಟದ ಬಗ್ಗೆ ಚರ್ಚೆ ಆಗಿ ನಾವು ಮಂತ್ರಿ ಆಗ್ತೇವೆ ಅಂತಾ ಅರ್ಹ ಶಾಸಕರು ಕಾಯುತ್ತಾ ಕೂತಿದ್ದಾರೆ, ಅಮಿತ್ ಶಾ ಬರ್ತಾರೆ ನಿಜ, ಆದರೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುತ್ತಾರಾ, ಅದಕ್ಕೆ ಒಪ್ಪಿಗೆ ಕೊಡ್ತಾರಾ ಅನ್ನೋದು ಸದ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕಾಡುತ್ತಿರುವ ಪ್ರಶ್ನೆ.

ಶಾ ಆಗಮನದ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲು ಸಿಎಂ ಯಡಿಯೂರಪ್ಪ ತಮ್ಮ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದು ಮಾಡಿಕೊಂಡು ಕಾಯುತ್ತಾ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ.

ಆದ್ರೆ ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾವುದಕ್ಕೂ ನಾವು ಜಗ್ಗಲ್ಲ ಎನ್ನುವ ಸ್ಪಷ್ಟ ಸಂದೇಶ ಬಿಜೆಪಿ ಹೈಕಮಾಂಡ್‌ನಿಂದ ರವಾನೆಯಾಗಿದೆ. ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆಗೆ ಮುಂದಾಗಿದ್ದ ಯಡಿಯೂರಪ್ಪ, ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಲು ಮುಂದಾಗಿದ್ರು.

ಆದ್ರೆ ನೀವು ಬೆಂಗಳೂರಿನಲ್ಲೇ ಇರಿ, ದೆಹಲಿಗೆ ಬರುವುದು ಬೇಡ ಎನ್ನುವ ಸಂದೇಶದಿಂದ ಸಿಎಂ ಕಂಗಾಲಾಗಿದ್ರು. ಆ ಬೇಸರದಲ್ಲೇ ಇರುವ ಮುಖ್ಯಮಂತ್ರಿ ಯಡಿಯೂರಪ್ಪ, ಅಮಿತ್ ಷಾ ಎರಡು ದಿನಗಳ ರಾಜ್ಯಪ್ರವಾಸ ಕೈಗೊಳ್ಳುತ್ತಿದ್ದು, ಆ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಲಾಗುವುದು ಎಂದಿದ್ದರು.

ಇದೀಗ ರಾಜ್ಯಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಎರಡು ದಿನಗಳ ಪ್ರವಾಸ ಮೊಟಕುಗೊಳಿಸಿ‌ ಒಂದು ದಿನಕ್ಕೆ ಇಳಿಕೆ ಮಾಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ವಿವೇಕಾದಿಪಿನಿ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಹುಬ್ಬಳ್ಳಿಗೆ ತೆರಳಲಿರುವ ಅಮಿತ್ ಷಾ, ಹುಬ್ಬಳ್ಳಿಯಲ್ಲಿ ನಡೆಯಲಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ನಡೆಯುತ್ತಿರುವ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಲ್ಲಿಂದಲೇ ದೆಹಲಿಗೆ ತೆರಳಲಿದ್ದಾರೆ.

ಈ ಸಮಯದಲ್ಲಿ‌ ಅಮಿತ್ ಷಾ ಜೊತೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಲು ಸಾಧ್ಯವೇ ಎನ್ನುವ ಚಿಂತೆಯಲ್ಲಿ ಸಿಎಂ ಮುಳುಗಿದ್ದಾರೆ.

ಒಂದು ವೇಳೆ ಅಮಿತ್ ಷಾ ಜೊತೆ ಮಾತನಾಡಲು ಅವಕಾಶ ಸಿಗದಿದ್ರೆ ಏನು ಮಾಡೋದು ಅನ್ನೋ ಚಿಂತೆ ಯಡಿಯೂರಪ್ಪ ಅವರನ್ನು ಕಾಡುತ್ತಿದೆ ಎನ್ನಲಾಗಿದೆ.

Leave a Reply