ನೂತನ ನಾಯಕತ್ವಕ್ಕೆ ಬಿಜೆಪಿ ಸರ್ಚಿಂಗ್..! ಸಿಎಂ ಯಡಿಯೂರಪ್ಪ ಡಲ್..?

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ಪಕ್ಷದ ಸ್ಟ್ರಾಟಜಿಯೇ ಸ್ವಲ್ಪ ಡಿಫರೆಂಟ್. ಸಂಘ ಪರಿವಾರವನ್ನೇ ಮಾತೃ ಸಂಸ್ಥೆ ಆಗಿಸಿಕೊಂಡಿರುವ ಬಿಜೆಪಿ, ತನ್ನ ಎಲ್ಲಾ ನಿರ್ಧಾರಗಳಲ್ಲೂ ಸಂಘದ ಛಾಯೆ ಇರುವುದನ್ನು ತೋರ್ಪಡಿಸಿಕೊಳ್ಳುತ್ತದೆ. ಅದರಲ್ಲೂ ಹಿಂದಿ ಭಾಷಿಕ ರಾಜ್ಯಗಳಲ್ಲಿ ಸಂಘ ಪರಿವಾರದ ಪ್ರಭಾವ ತುಸು ಹೆಚ್ಚಾಗಿಯೇ ಇರುತ್ತದೆ. ಇದೀಗ ದಕ್ಷಿಣ ಭಾರತದಲ್ಲೂ ಸಂಘ ಪರಿವಾರದ ನಿರ್ಧಾರಗಳು ನಿಧಾನಗತಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ಪ್ರಬಲ ನಾಯಕ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿ ಇದ್ದರೂ ಹೊಸ ನಾಯಕತ್ವಕ್ಕೆ ವೇದಿಕೆ ಸಜ್ಜಾಗುತ್ತಿದ್ಯಾ ಅನ್ನೋ ಅನುಮಾನ ಶುರುವಾಗುತ್ತಿದೆ.

2014 ರಲ್ಲಿ ಬಿಜೆಪಿ ಪಕ್ಷ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವಿಸ್ ಅವರನ್ನು ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಆದರೆ ಸಂಘ ಪರಿವಾರದ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದ ಸಂಘಪರಿವಾರ ನಾಯಕರ ನೀಲಿಗಣ್ಣಿನ ಯುವಕ ದೇವೇಂದ್ರ ಫಡ್ನವಿಸ್ ಅವರನ್ನು ಮುಖ್ಯಮಂತ್ರಿ ಆಬ್ಯರ್ಥಿಯಾಗಿ‌ ಆಯ್ಕೆ ಮಾಡಲಾಗಿತ್ತು. ಅದೇ ರೀತಿ ಬೆಂಗಳೂರಿನಲ್ಲೂ ತನ್ನ ಅಚ್ಚರಿ ಆಯ್ಕೆ ಮಾಡಿದ ಸಂಘ ಪರಿವಾರದ ನಾಯಕರು, ಮೇಯರ್ ಆಗಿ ಗೌತಮ್ ಕುಮಾರ್ ಜೈನ್ ಅವರನ್ನು ಆಯ್ಕೆ ಮಾಡಿ ಮೇಯರ್ ಆಗುವಂತೆ ನೋಡಿಕೊಂಡರು. ಸ್ಥಳೀಯರ ನಾಯಕರಿಗೆ ಗೌತಮ್ ಕುಮಾರ್ ಜೈನ್ ಮೇಯರ್ ಅಭ್ಯರ್ಥಿ, ಅವರನ್ನು ಮೇಯರ್ ಮಾಡಬಹುದು ಎಂದು ಕನಿಷ್ಠ ಊಹೆಯೂ ಇರಲಿಲ್ಲ. ತಮ್ಮ ತಮ್ಮ ಹಿಂಬಾಲಕರನ್ನು ಮೇಯರ್ ಮಾಡಬೇಕು ಎಂದು ಪಟ್ಟಿ ಹಿಡಿದು ಕುಳಿತಿದ್ದರು. ಅಂತಿಮವಾಗಿ ಅಖಾಡಕ್ಕೆ ಇಳಿದ ಬಿಜೆಪಿ‌ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಪಕ್ಷದ ಆಯ್ಕೆ ಇದು‌ ಎಂದು ಗೌತಮ್ ಕುಮಾರ್ ಜೈನ್ ಅವರನ್ನು ಘೋಷಣೆ ಮಾಡಿದ್ದರು. ಮೊದಲಿಗೆ ಪ್ರತಿರೋಧ ಕಾಣಿಸಿದರೂ ವಿರೋಧಿಸುವ ದಾರ್ಶ್ಯತನ ಯಾರಲ್ಲೂ ಇರಲಿಲ್ಲ. ಇದಕ್ಕೆ ಕಾರಣ ಗೌತಮ್ ಕುಮಾರ್ ಜೈನ್ ಸಂಘ ಪರಿವಾರದಿಂದ ಆಯ್ಕೆಯಾದ ಮೇಯರ್ ಆಗಿದ್ದರು.

ಇದೀಗ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ‌ ಅಧಿಕಾರ ನಡೆಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಆಗಿರುವ ಯಡಿಯೂರಪ್ಪ ಅವರಿಗಿಂತಲೂ ಹೆಚ್ಚಿನ ಪ್ರಾಶಸ್ತ್ಯ ಬೇರೆ ನಾಯಕರ ಪಾಲಾಗಿದೆ. ಅಂದರೆ ಯಡಿಯೂರಪ್ಪ ಅವರನ್ನು ಕಡೆಗಣಿಸಿರುವ ಬಿಜೆಪಿ, ಪರೋಕ್ಷವಾಗಿ ನಿಮಗಿಂತಲೂ ಇವರೇ ಮುಖ್ಯ ಎನ್ನುವ ಸಂದೇಶ ರವಾನಿಸಿದೆ.  ಈ ನಿರ್ಧಾರ ಹೊಸ ನಾಯಕನ ಅನ್ವೇಷಣೆಯಲ್ಲಿ ಬಿಜೆಪಿ ಮಗ್ನವಾಗಿದೆಯಾ ಅನ್ನೋ ಅನುಮಾನವನ್ನು ಹುಟ್ಟು ಹಾಕುತ್ತಿದೆ. ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಲು ಕಳೆದೊಂದು ವಾರದಿಂದಲೂ ಹೈಕಮಾಂಡ್ ಬೆನ್ನು ಹತ್ತಿದ್ದಾರೆ. ಆದರೆ ಇಲ್ಲೀವರೆಗೂ ಬಿಜೆಪಿ‌ ನಾಯಕರು ಭೇಟಿಗೆ ಅವಕಾಶ ನೀಡಿಲ್ಲ.‌ ಇಂದು ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಕಾರ್ಯಕ್ರಮ ಪಟ್ಟಿಯಲ್ಲೂ ಸಿಎಂ ಯಡಿಯೂರಪ್ಪ ಜೊತೆ ಮಾತುಕತೆ ಎಂದು ಕನಿಷ್ಠಪಕ್ಷ 10 ನಿಮಿಷವೂ ಮೀಸಲಿಟ್ಟಿಲ್ಲ. ಆದರೆ ಈ ನೂತನ ನಾಯಕನಿಗಾಗಿ ಅಮಿತ್ ಷಾ ಸಮಯ ಮೀಸಲಿಟ್ಟಿದ್ದಾರೆ. ಇದನ್ನು ನೋಡಿದ್ರೆ ಯಡಿಯೂರಪ್ಪ ಬಿಜೆಪಿಯಲ್ಲಿ‌ ಸೈಡ್‌ಲೈನ್ ಆಗ್ತಿದ್ದಾರೆ‌ ಅನ್ನೋ ವಾದಕ್ಕೆ ಪುಷ್ಟಿ ನೀಡಿದಂತಾಗಿದೆ.

ನೂತನವಾಗಿ ಬಿಜೆಪಿ ಸಂಸದನಾಗಿ ಆಯ್ಕೆಯಾಗಿರುವ ತೇಜಸ್ವಿ ಸೂರ್ಯ ಆರ್‌ಎಸ್‌ಎಸ್ ಆಯ್ಕೆಯ ನೂತನ ಮುಖ ಎಂದರೆ ಸುಳ್ಳಲ್ಲ. ಉತ್ತಮ ವಾಗ್ಮಿ ಆಗಿರುವ ತೇಜಸ್ವಿ ಸೂರ್ಯ ಇನ್ನು ಚಿಕ್ಕ ವಯ್ಯಸ್ಸಿನ ಯುವಕನಾಗಿದ್ದು, ಪಕ್ಷದಲ್ಲಿ‌ ಇನ್ನೂ ಸಾಕಷ್ಟು ವರ್ಷಗಳ ಕಾಲ‌ ಹಲವು ಹುದ್ದೆಗಳನ್ನು ಪಡೆಯಲಿದ್ದಾರೆ. ಈ ಯುವ ನಾಯಕನಿಗೆ ಅಮಿತ್ ಷಾ ಸಯಕ ಕೊಟ್ಟಿದ್ದಾರೆ. ಅಮಿತ್ ಷಾ ಅವರ ಅಧಿಕೃತ ಕಾರ್ಯಕ್ರಮ ಪಟ್ಟಿಯಲ್ಲೇ ತೇಜಸ್ವಿ ಸೂರ್ಯ ಕಚೇರಿ ಉದ್ಘಾಟನಾ ಕಾರ್ಯಕ್ರಮವಿದೆ. ಬೆಂಗಳೂರಿಗೆ ಆಗಮಿಸಿರುವ ಅಮಿತ್ ಷಾ, ಪ್ಯಾಲೇಸ್ ಗ್ರೌಂಡ್‌ನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಜಯನಗರಕ್ಕೆ ತೆರಳಿ ತೇಜಸ್ವಿ ಸೂರ್ಯ ಅವರ ಅಧಿಕೃತ ಕಚೇರಿ ಉದ್ಘಾಟನೆ ಮಾಡಲಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು ಸಿಎಂಗೆ ಸಮಯ ಕೊಡದ ಅಮಿತ್ ಷಾ, ಯುವ ನಾಯಕ ತೇಜಸ್ವಿ ಸೂರ್ಯ ಅವರ ಕಚೇರಿ ಉದ್ಘಾಟನೆಗೆ ಪ್ರಾಶಸ್ತ್ಯ ನೀಡಿರೋದು, ಬಿಜೆಪಿ ನಾಯಕರಲ್ಲೇ ಅಚ್ಚರಿಗೆ ಕಾರಣವಾಗಿದೆ.

Leave a Reply