ಯಡಿಯೂರಪ್ಪ ವಿರುದ್ಧ ಸಿಕ್ಕಿರೋ ಬ್ರಹ್ಮಾಸ್ತ್ರವನ್ನು ಬಿಜೆಪಿ ಹೈಕಮಾಂಡ್ ಬಿಡೋದುಂಟೆ!

ಸೋಮಶೇಖರ್ ಪಿ. ಭದ್ರಾವತಿ

ರಾಜಕೀಯ ಚದುರಂಗದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಪೈಪೋಟಿ ಹೇಗೆ ಸಹಜವೋ ಅದೇ ರೀತಿ ಪಕ್ಷದೊಳಗಿನ ನಾಯಕರ ನಡುವಣ ತಿಕ್ಕಾಟವೂ ಅಷ್ಟೇ ಸರ್ವೆ ಸಾಮಾನ್ಯ.

ಆದರೆ, ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದು, ಪಕ್ಷದೊಳಗೆ ರಾಜ್ಯ ಮತ್ತು ಕೇಂದ್ರ ನಾಯಕತ್ವದ ನಡುವೆ ತಿಕ್ಕಾಟ ಆರೋಗ್ಯಕರ ಬೆಳವಣಿಗೆ ಅಲ್ಲ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಈ ಎರಡು ನಾಯಕರುಗಳ ನಡುವಣ ತಿಕ್ಕಾಟದಲ್ಲಿ ರಾಜ್ಯ ಕಷ್ಟ ಅನುಭವಿಸುತ್ತಿರೋದು ರಾಜ್ಯದ ಜನ ಎಂಬುದು ದುರ್ದೈವ.

ಆಪರೇಷನ್ ಕಮಲದಿಂದ ಮೈತ್ರಿ ಸರ್ಕಾರ ಬಿದ್ದ ನಂತರ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಇನ್ನುಮುಂದೆ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ. ಇಷ್ಟು ವರ್ಷಗಳ ಕಾಲ ಕಾಯುವಿಕೆ ನಂತರ ಎರಡೂ ಕಡೆ ಒಂದೇ ಪಕ್ಷ ಅಧಿಕಾರಕ್ಕೆ ಬಂದಿದೆ. ರಾಜ್ಯದ ಸಮಸ್ಯೆಗಳು ದೂರವಾಗುತ್ತವೆ, ಕೇಂದ್ರದಿಂದ ಹೆಚ್ಚಿನ ಅನುದಾನ ಸಿಗುತ್ತದೆ, ಕರ್ನಾಟಕಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತದೆ ಎಂಬ ಬೆಟ್ಟದಷ್ಟು ನಿರೀಕ್ಷೆಗಳಿದ್ದವು.

ಈ ಎಲ್ಲ ನಿರೀಕ್ಷೆಗಳನ್ನು ಹುಸಿ ಮಾಡಿರೋದು ಯಡಿಯೂರಪ್ಪ ವರ್ಸಸ್ ಬಿಜೆಪಿ ಹೈಕಮಾಂಡ್ ನಡುವಣ ತೆರೆಮರೆಯ ಪ್ರತಿಷ್ಠೆ ಕದನ.

ಹೌದು, ಮತ್ತೊಮ್ಮೆ ಸಿಎಂ ಕುರ್ಚಿ ಮೇಲೆ ಕೂತು ರಾರಾಜಿಸಬೇಕು ಎಂಬ ಕನಸಿನೊಂದಿಗೆ ಹಗಲು ರಾತ್ರಿ ಎನ್ನದೇ ಆಪರೇಷನ್ ಕಮಲ ಮಾಡಿ ಮೈತ್ರಿ ಸರ್ಕಾರ ಬೀಳಿಸಿದ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಹಾಗೂ ಕೇಂದ್ರದಿಂದ ಕನಿಷ್ಠ ಸಹಕಾರವೂ ಸಿಗುತ್ತಿಲ್ಲ.

ಒಂದು ರೀತಿಯಲ್ಲಿ ಹೇಳಬೇಕಾದರೆ ಸದ್ಯ ಯಡಿಯೂರಪ್ಪ ಅವರು ಅನುಭವಿಸುತ್ತಿರೋದು ಕರ್ಮದ ಫಲ! ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೊದಲ ದಿನದಿಂದ ಹೇಗೆ ಆಪರೇಷನ್ ಕಮಲ ಪ್ರಯತ್ನದಿಂದ ದೋಸ್ತಿ ಸರ್ಕಾರ ಕಾರ್ಯನಿರ್ವಹಿಸಲು ಯಡಿಯೂರಪ್ಪ ಅವರು ಬಿಡಲಿಲ್ಲವೋ, ಅದೇ ಕರ್ಮ ಬೆನ್ನಿಗೆ ಬಿದ್ದ ಬೇತಾಳದಂತೆ ಕಾಡುತ್ತಿದೆ. ಆದ್ರೆ ಇಲ್ಲಿ ವಿರೋಧ ಪಕ್ಷಗಳ ಬದಲು ತಮ್ಮ ಪಕ್ಷದ ಹೈಕಮಾಂಡ್ ನಾಯಕರೇ ಯಡಿಯೂರಪ್ಪ ಅವರ ಪಾಲಿಗೆ ವಿಲನ್ ಆಗಿರೋದು ವಿಶೇಷ.

ರಾಜ್ಯದಲ್ಲಿ ಯಡಿಯೂರಪ್ಪ ಅವರ ಏಕಾಧಿಪತ್ಯಕ್ಕೆ ಬ್ರೇಕ್ ಹಾಕಬೇಕು, ಅವರ ಸ್ಥಾನಕ್ಕೆ ತಮ್ಮ ತಾಳಕ್ಕೆ ಕುಣಿಯುವ ನಿಷ್ಠರನ್ನು ಕೂರಿಸಬೇಕು, ಸರ್ಕಾರದ ಮೇಲೆ ಸಂಪೂರ್ಣ ಬಿಗಿ ಹಿಡಿತ ಸಾಧಿಸಬೇಕು ಎಂಬ ಸಂಕಲ್ಪ ಮಾಡಿರುವ ಹೈಕಮಾಂಡ್ ಗೆ ಯಡಿಯೂರಪ್ಪ ಮಗ್ಗಲ ಮುಳ್ಳಾಗಿದ್ದಾರೆ.

ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಲ್ಲಿ ಕೂತಿರುವುದನ್ನು ಸಹಿಸಿಕೊಳ್ಳಲಾಗದ ದೆಹಲಿ ನಾಯಕರು ಅವರನ್ನು ನೇರವಾಗಿ ಕಿತ್ತು ಹಾಕಲು ಸಾಧ್ಯವಾಗದೇ ಮುಂದುವರಿಸಲು ಇಷ್ಟವಿಲ್ಲದೆ ಒಳಗೊಳಗೆ ಕೊತ ಕೊತ ಕುದಿಯುತ್ತಿದ್ದಾರೆ.

ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ವಿಚಾರದಿಂದ ಆರಂಭವಾದ ಹೈಕಮಾಂಡ್ ನ ತೆರೆಮರೆಯ ಅಸಹಕಾರ ಚಳುವಳಿ, ಮಂತ್ರಿ ಮಂಡಲ ರಚನೆ, ಪ್ರವಾಹ ಪರಿಹಾರ, ಉಪ ಚುನಾವಣೆ ದಿನಾಂಕ ನಿಗದಿ, ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಎಲ್ಲ ವಿಚಾರದಲ್ಲೂ ಕಾಡಿಸಿಯೇ ಒಪ್ಪಿಗೆ ನೀಡಿದೆ.

ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ವಿರುದ್ಧ ಬ್ರಹ್ಮಾಸ್ತ್ರವಾಗಿ ಸಿಕ್ಕಿರೋದು ಸಂಪುಟ ವಿಸ್ತರಣೆ ವಿಚಾರ.

ಮಂತ್ರಿಗಿರಿಯ ಮೇಲಿಸ ವ್ಯಾಮೋಹದಿಂದ ತಮ್ಮನ್ನು ಬೆಳಸಿದ ಪಕ್ಷವನ್ನೇ ಅಧಿಕಾರದಿಂದ ಕೆಳಗಿಳಿಸಿದ ಸ್ವಾರ್ಥಿಗಳು ಈಗ ತಮಗೆ ಮಂತ್ರಿ ಸ್ಥಾನ ನೀಡದಿದ್ದರೆ ಯಡಿಯೂರಪ್ಪರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅರಿತಿರುವ ಅಮಿತ್ ಶಾ, ಯಡಿಯೂರಪ್ಪ ವಿರುದ್ಧ ಈಗ ಸಿಕ್ಕಿರುವ ಬ್ರಹ್ಮಾಸ್ತ್ರವನ್ನು ಬಿಡಲು ಬಿಲ್ ಕುಲ್ ಸಿದ್ಧರಿಲ್ಲ.

ಯಡಿಯೂರಪ್ಪರನ್ನು ಕೆಳಗಿಳಿಸಬೇಕು, ಆಮೂಲಕ ಪರ್ಯಾಯ ನಾಯಕತ್ವಕ್ಕೆ ಮುನ್ನುಡಿ ಬರೆಯಬೇಕು ಎಂದು ದೆಹಲಿ ನಾಯಕರು ಪಣ ತೊಟ್ಟಿದ್ದಾರೆ. ಯಡಿಯೂರಪ್ಪ ಅವರ ನಿರಂತರ ಪ್ರಬಲ ಪ್ರತಿರೋಧದಿಂದ ಮತ್ತಷ್ಟು ಬೇಸತ್ತಿರುವ ಹೈಕಮಾಂಡ್ ತಮ್ಮ ಗುರಿ ಸಾಧಿಸಲು ಈ ಸರ್ಕಾರವನ್ನು ಬಲಿ ಕೊಡಲು ಸಿದ್ಧರಾಗಿದ್ದಾರೆ.

ಆದರೆ, ತಾವು ನೇರವಾಗಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಲಿಂಗಾಯತರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಆಗ ಪಕ್ಷದಲ್ಲಿ ಪರ್ಯಾಯ ನಾಯಕತ್ವ ಇರಲಿ ರಾಜ್ಯದಲ್ಲಿ ತಮ್ಮ ಅಸ್ತಿತ್ವವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂಬುದನ್ನು ಅರಿತಿದ್ದಾರೆ. ಇದೇ ಕಾರಣಕ್ಕೆ ಯಡಿಯೂರಪ್ಪ ವಿಚಾರದಲ್ಲಿ ಹಲ್ಲುಗಚ್ಚಿಕೊಂಡು ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಅವಕಾಶ ನೀಡದಿದ್ದರೆ, ನೂತನ ಶಾಸಕರ ಪ್ರಬಲ ವಿರೋಧದಿಂದ ಸರ್ಕಾರ ಬಿದ್ದರೆ ಆಗ ಲಿಂಗಾಯತರ ಕೋಪದಿಂದಲೂ ಪಾರಾಗಬಹುದು, ಯಡಿಯೂರಪ್ಪ ಅವರನ್ನು ಪಕ್ಕಕ್ಕೆ ತಳ್ಳಿ ಬೇರೊಬ್ಬ ನಾಯಕನನ್ನು ಅಲ್ಲಿ ಪ್ರತಿಷ್ಠಾಪನೆ ಮಾಡಬಹುದು. ಆಗ ಸಂಪುಟ ವಿಸ್ತರಣೆ ಎಂಬ ಒಂದು ಕಲ್ಲಲ್ಲಿ 3 ಕಾಯಿ ಉದುರಿಸುವ ಲೆಕ್ಕಾಚಾರ ಬಿಜೆಪಿ ನಾಯಕರ ತಲೆಯಲ್ಲಿ ಈಜುತ್ತಿದೆ.

Leave a Reply