ಛೇ… ನನ್ನ ಮಗಳ ಸಾವಲ್ಲೂ ರಾಜಕೀಯ! ನಿರ್ಭಯಾ ಸಂತ್ರಸ್ತೆ ತಾಯಿಯ ನೋವಿನ ನುಡಿ

ಡಿಜಿಟಲ್ ಕನ್ನಡ ಟೀಮ್:

2012ರಲ್ಲಿ ನನ್ನ ಮಗಳ ಮೇಲೆ ಅತ್ಯಾಚಾರವಾದಾಗ ಕಪ್ಪು ಪಟ್ಟಿ ಕಟ್ಟಿಕೊಂಡು, ತಿರಾಂಗ ಹಿಡಿದು ಬೀಡಿಗಿಳಿದು ಹೋರಾಟ ಮಾಡಿದವರೇ ಇಂದು ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ… ಇದು ನಿರ್ಭಯಾ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ತಾಯಿ ಆಶಾ ದೇವಿ ಅವರ ನೋವಿನ ನುಡಿ.

ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಬೇಕು ಎಂದು ಎಲ್ಲರೂ ಮಾತನಾಡುವವರೆ. ಆದರೆ ಕಾರ್ಯರೂಪದಲ್ಲಿ ಮಾಡಿ ತೋರಿಸುವವರು ಯಾರೂ ಇಲ್ಲ. ಇದು ಸದ್ಯ ನಿರ್ಭಯಾ ಅತ್ಯಾಚಾರ ಪ್ರಕರಣದ ಬೆಳವಣಿಗೆಗಳು ನಮ್ಮ ಸಮಾಜದ ನ್ಯೂನ್ಯತೆಯನ್ನು ಬಟಾಬಯಲು ಮಾಡಿದೆ.

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಎಂಬ ಕೂಗು ಎಲ್ಲೆಡೆ ಕೇಳುತ್ತಲೇ ಬರುತ್ತಿದೆ. ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಜನರ ಬೇಡಿಕೆಗೆ ಪೂರಕವಾಗಿ ತೀರ್ಪು ಕೊಟ್ಟಿದೆ. ಆದರೆ ಈ ತಾರ್ಪು ಪಾಲಿಸಬೇಕಾದವರು ಮಾತ್ರ ಈಗ ರಾಜಕೀಯ ಕೆಸರೆರೆಚಾಟ ಮಾಡುತ್ತಿದ್ದಾರೆ. ದೆಹಲಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಈ ಪ್ರಕರಣವನ್ನೇ ನೇಗಿಲು ಮಾಡಿಕೊಂಡು ರಾಜಕೀಯ ಫಸಲು ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ದೆಹಲಿಯಲ್ಲಿ ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ನಂತರ ಅವರ ಸರ್ಕಾರ ಪತನಕ್ಕೆ ಪ್ರಮುಖ ಕಾರಣವಾಯಿತು. ಆಗ ಬೀದಿಗಳಿದು ಹೋರಾಟ ಮಾಡಿದ್ದು, ಇದೇ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹಾಗೂ ಬಿಜೆಪಿ ನಾಯಕರು. ಈಗ ಇದೇ ಎರಡು ಪಕ್ಷಗಳು ಕ್ರಮವಾಗಿ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಈ ಪ್ರಕರಣದಲ್ಲಿ ರಾಜಕೀಯ ಹಗ್ಗಜಗ್ಗಾಟ ನಡೆಸುತ್ತಿವೆ.

ಸುದ್ದಿ ಸಂಸ್ಥೆಗೆ ನೀಡಿರುವ ಹೇಳಿಕೆಯಲ್ಲಿ ಆಶಾ ದೇವಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದು ಹೀಗೆ…

‘ಇಷ್ಟು ದಿನಗಳ ಕಾಲ ನಾನು ರಾಜಕೀಯದ ಬಗ್ಗೆ ಮಾತನಾಡುತ್ತಿರಲಿಲ್ಲ. ಕೇವಲ ನನ್ನ ಮಗಳ ಮೇಲೆ ದಾಳಿ ನಡೆಸಿದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದೆ. ಆದರೆ ಇಂದು ಒಂದು ವಿಚಾರ ಹೇಳಲೇಬೇಕು. 2012ರಲ್ಲಿ ಈ ಘಟನೆ ನಡೆದಾಗ ಯಾರೆಲ್ಲ ಕಪ್ಪುಪಟ್ಟಿ ಧರಿಸಿ, ರಾಷ್ಟ್ರಧ್ವಜ ಹಿಡಿದು ಬೀದಿಗಿಳಿದು ಮಹಿಳೆಯರ ರಕ್ಷಣೆಗಾಗಿ ಹೋರಾಟ ಮಾಡಿದ್ದರೋ, ಇಂದು ಅದೇ ಜನರು ನನ್ನ ಮಗಳ ಸಾವಿನ ಪ್ರಕರಣವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಕೆಲವರು ಆಪ್ ಸರ್ಕಾರ ಶಿಕ್ಷೆ ವಿಳಂಬ ಮಾಡುತ್ತಿದೆ ಎಂದರೆ ಮತ್ತೆ ಕೆಲವರು ನಮ್ಮ ಕೈಗೆ ಅಧಿಕಾರ ಕೊಡಿ ಎರಡೇ ದಿನದಲ್ಲಿ ಶಿಕ್ಷೆ ನೀಡುತ್ತೇವೆ ಎಂದು ರಾಜಕೀಯ ಟೀಕೆ ಮಾಡುತ್ತಿದ್ದಾರೆ. ಇವರಿಬ್ಬರ ಮಧ್ಯೆ ನಾವು ನರಳುತ್ತಿದ್ದೇವೆ. ನಮಗೆ ನ್ಯಾಯಬೇಕು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳಲ್ಲಿ ಒಂದು ಮನವಿ ಮಾಡಿಕೊಳ್ಳುತ್ತೇನೆ. 2014ರಲ್ಲಿ ನೀವು ಅಬ್ ಬಹುತ್ ಹುವಾ ನಾರಿ ಪೆ ಭಾರಿ, ಅಬ್ ಕಿ ಬಾರ್ ಮೋದಿ ಸರ್ಕಾರ್ ಎಂದು ಹೇಳಿ ಅಧಿಕಾರಕ್ಕೆ ಬಂದಿರಿ. ಈಗ ಎರಡನೇ ಬಾರಿಯೂ ಅಧಿಕಾರಕ್ಕೆ ಬಂದಿದ್ದೀರಿ. ನೀವು ಅಧಿಕಾರಕ್ಕೆ ಬಂದಾಗಿನಿಂದ ತ್ರಿವಳಿ ತಲಾಕ್ ವಿರುದ್ಧ ಸೇರಿದಂತೆ ಅನೇಕ ನಿರ್ಣಯ ಕೈಗೊಂಡಿದ್ದೀರಿ. ಅದೇ ರೀತಿ ಅತ್ಯಾಚಾರ ವಿರುದ್ಧದ ಕಾನೂನನ್ನು ಪರಿಶೀಲಿಸಿ. ನಮ್ಮ ವ್ಯವಸ್ಥೆಯನ್ನು ಸುಧಾರಿಸಿ. ಈ ಪ್ರಕರಣಗಳನ್ನು ರಾಜಕೀಯ ಅಸ್ತ್ರವಾಗದಂತೆ ನೋಡಿಕೊಳ್ಳಿ. ಅಪರಾಧಿಗಳನ್ನು ಗಲ್ಲಿಗೇರಿಸಿ ಸಮಾಜಕ್ಕೆ ಒಂದು ಸಂದೇಶ ರವಾನಿಸಿ ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ.’

ಇಂದಿರಾ ಜೈಸಿಂಗ್ ವಿರುದ್ಧ ಕಿಡಿ

ಇನ್ನು ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆ ತಾಯಿ ಅಪರಾಧಿಗಳನ್ನು ಕ್ಷಮಿಸಬೇಕು ಎಂದು ಸಲಹೆ ನೀಡಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಿರುದ್ಧವೂ ಆಶಾ ದೇವಿ ಅವರು ಕಿಡಿ ಕಾರಿದ್ದಾರೆ.

ಇಂದಿರಾ ಜೈಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಉದಾಹರಣೆಯಾಗಿ ಬಳಸಿಕೊಂಡು, ‘ಸೋನಿಯಾ ಗಾಂಧಿ ಅವರು ಹೇಗೆ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ ಅವರನ್ನು ಕ್ಷಮಿಸಿದ್ದಾರೋ ಅದೇ ರೀತಿ ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆ ತಾಯಿ ಕೂಡ ಅಪರಾಧಿಗಳನ್ನು ಕ್ಷಮಿಸಬೇಕು’ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಶಾ ದೇವಿ, ‘ಈ ವಿಚಾರದಲ್ಲಿ ನನಗೆ ಸಲಹೆ ನೀಡಲು ಇಂದಿರಾ ಜೈಸಿಂಗ್ ಯಾರು? ಇಡೀ ದೇಶವೇ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಬಯಸುತ್ತಿದೆ. ಇಂತಹ ಸಂದರ್ಭದಲ್ಲಿ ಇಂದಿರಾ ಜೈಸಿಂಗ್ ಅವರು  ಸಲಹೆ ನೀಡಲು ಧೈರ್ಯ ಮಾಡಿದ್ದಾದರೂ ಹೇಗೆ? ಕಳೆದ ಅನೇಕ ವರ್ಷಗಳಿಂದ ನಾನು ವರನ್ನು ಸುಪ್ರೀಂ ಕೋರ್ಟ್ ನಲ್ಲಿ ಹಲವು ಭಾರಿ ಭೇಟಿಯಾಗಿದ್ದಾನೆ. ಒಂದು ಬಾರಿಯು ನನ್ನ ಯೋಗಕ್ಷೇಮ ವಿಚಾರಿಸಿಲ್ಲ. ಆದರೆ ಇಂದು ಅಪರಾಧಿಗಳ ಪರವಾಗಿ ಮಾತನಾಡುತ್ತಿದ್ದಾರೆ. ಇಂತಹವರು ಅತ್ಯಾಚಾರಿಗಳನ್ನು ಬೆಂಬಲಿಸಿಯೇ ಜೀವನ ನಡೆಸುತ್ತಿದ್ದಾರೆ’ ಎಂದು ಟೀಕಿಸಿದರು.

Leave a Reply