ರಾಹುಲ್ ಗೆಲ್ಲಿಸಿದ್ದು ಕೇರಳಿಗರ ದೊಡ್ಡ ತಪ್ಪು; ರಾಮಚಂದ್ರ ಗುಹಾ ಅವರ ಮಾತಿನ ಮರ್ಮವೇನು?

ಡಿಜಿಟಲ್ ಕನ್ನಡ ಟೀಮ್:

‘ರಾಹುಲ್ ಗಾಂಧಿಯನ್ನು ಗೆಲ್ಲಿಸಿದ್ದು, ಕೇರಳಿಗರು ಮಾಡಿದ ದೊಡ್ಡ ತಪ್ಪು. 2024ರ ಚುನಾವಣೆಯಲ್ಲಿ ರಾಹುಲ್ ರನ್ನು ಗೆಲ್ಲಿಸಿದರೆ ಮೋದಿಗೇ ಲಾಭ…’ ಇದು ಇತಿಹಾಸಕಾರ, ಚಿಂತಕ ರಾಮಚಂದ್ರ ಗುಹಾ ಅವರು ಕೇರಳದಲ್ಲಿ ಆಡಿರುವ ಮಾತು.

ಕಳೆದ ತಿಂಗಳಷ್ಟೇ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾಗಿದ್ದ ರಾಮಚಂದ್ರ ಗುಹಾ ವರು ಇಂತಹ ಹೇಳಿಕೆ ಕೊಟ್ಟಿದ್ದೇಕೆ ಎಂಬ ಅಚ್ಚರಿ ಮೂಡುತ್ತದೆ. ಕೇರಳದಲ್ಲಿ ನಡೆಯುತ್ತಿರುವ 2 ದಿನಗಳ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಿದ ಅವರು ಹೇಳಿದ್ದಿಷ್ಟು…

‘ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರತದ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಇಂದು ಹೀನಾಯ ಸ್ಥಿತಿ ತಲುಪಿರುವುದಕ್ಕೆ ಕುಟುಂಬ ರಾಜಕಾರಣವೇ ಕಾರಣ. ಕಾಂಗ್ರೆಸ್ ನ ಈ ನಡೆಯಿಂದ ಇಂದು ರಾಷ್ಟ್ರದಲ್ಲಿ ಹಿಂದುತ್ವ ಮತ್ತು ಉಗ್ರ ರಾಷ್ಟ್ರೀಯತೆ ತಲೆಯೆತ್ತಿದೆ. ರಾಹುಲ್ ಗಾಂಧಿ ನೆಹರೂ ಕುಟುಂಬದ 5ನೇ ತಲೆಮಾರಿನ ನಾಯಕ. ಕುಟುಂಬದ ಹೆಸರು ಬಳಸಿಕೊಂಡು ಬಂದಿರುವ ರಾಹುಲ್ ಗಾಂಧಿ ಅವರು ಸ್ವಂತ ವರ್ಚಸ್ಸಿನಿಂದ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ಜತೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ.

ರಾಹುಲ್ ಗಾಂಧಿ ಕುರಿತು ನನಗೆ ವೈಯಕ್ತಿಕವಾಗಿ ಯಾವುದೇ ಬೇಸರ, ಭಿನ್ನಾಭಿಪ್ರಾಯವಿಲ್ಲ. ಆತ ಸಭ್ಯ ಎಂಬುದರಲ್ಲಿ ಎರಡು ಮಾತಲ್ಲ. ಹೊಸ ತಲೆಮಾರಿನ ಭಾರತಕ್ಕೆ ಐದನೇ ತಲೆಮಾರಿನ ಕುಟುಂಬದ ರಾಜಕೀಯ ಬೇಕಿಲ್ಲ. ಹೀಗಾಗಿ ದೇಶದ ಜನ ಕಾಂಗ್ರೆಸ್ ಅನ್ನು ತಿರಸ್ಕರಿಸುತ್ತಿದ್ದಾರೆ. ಒಂದುವೇಳೆ 2024ರಲ್ಲೂ ಕೇರಳಿಗರು ರಾಹುಲ್ ಗಾಂಧಿ ಅವರನ್ನು ಗೆಲ್ಲಿಸಿದರೆ ಅದು ನೇರವಾಗಿ ಮೋದಿ ಅವರಿಗೆ ಲಾಭ ತಂದುಕೊಡಲಿದೆ. ಮೋದಿಗೆ ಯಾವುದೇ ಕುಟುಂಬ ರಾಜಕಾರಣದ ಹಿನ್ನೆಲೆಯಿಲ್ಲ.

ಮೋದಿ 15 ದಿನ ರಜೆ ಹಾಕಿ ಯುರೋಪ್ ಸುತ್ತಲು ಹೋಗುವುದಿಲ್ಲ. ಹೀಗಾಗಿ ಅವರು ಶ್ರಮಜೀವಿ. ಈ ಎಲ್ಲ ವಿಚಾರಗಳು ಮೋದಿಗೆ ಪ್ಲಸ್ ಪಾಯಿಂಟ್ ಆಗುತ್ತಿವೆ. ಆದರೆ ರಾಹುಲ್ ಗೆ ವೈಯಕ್ತಿಕ ವರ್ಚಸ್ಸಿಲ್ಲ, ಇರುವುದು ಕೇವಲ ಕುಟುಂಬದ ವರ್ಚಸ್ಸು. ಅದೇ ಅವರ ಪಾಲಿಗೆ ಮುಳ್ಳಾಗಿದೆ. ಇದು ತಮಾಷೆಯ ವಿಚಾರವಲ್ಲ. ಬಹಳ ಗಂಭೀರ ವಿಚಾರ. ಈ ವಿಚಾರವನ್ನೇ ಮುಂದಿಟ್ಟುಕೊಂಡು ಮೋದಿ ಅವರು ದೇಶದ ಯಾವುದೇ ಮೂಲೆಗೆ ಹೋದರೂ ಈ ದೇಶವನ್ನು, ಕಾಶ್ಮೀರವನ್ನು ನೆಹರೂ ಹಾಳು ಮಾಡಿದರು, ನೆಹರೂ ಹಾಗೆ ಮಾಡಿದರು, ಹೀಗೆ ಮಾಡಿದರು ಎಂದು ಆರೋಪಿಸುತ್ತಲೇ ದೂರುತ್ತಾರೆ. ಯಾಕೆಂದರೆ ರಾಜಕೀಯದಲ್ಲಿ ರಾಹುಲ್ ಗಾಂಧಿ ಇದ್ದಾರೆ. ಒಂದುವೇಳೆ ರಾಹುಲ್ ಗಾಂಧಿ ರಾಜಕೀಯದಲ್ಲಿ ಇರದಿದ್ದರೆ ಮೋದಿಯ ತಾವು ಜಾರಿಗೆ ತಂದ ನೀತಿಗಳ ಬಗ್ಗೆ ಮಾತನಾಡಬೇಕಾಗುತ್ತಿತ್ತು. ಅವು ಯಾಕೆ ವಿಫಲವಾದವು ಎಂದು ಹೇಳಬೇಕಾಗುತ್ತಿತ್ತು, ಜನರಿಗೆ ಉತ್ತರ ಕೊಡಬೇಕಾಗುತ್ತಿತ್ತು. ಆದರೆ, ರಾಹುಲ್ ಗಾಂಧಿ ಕುಟುಂಬವನ್ನು ಜರಿಯುತ್ತಾ ಮೋದಿ ಜಾಣತನದ ಆಟವಾಡುತ್ತಿದ್ದಾರೆ.’

Leave a Reply