ಯಡಿಯೂರಪ್ಪ ಜೊತೆ ಅಮಿತ್ ಶಾ ಚರ್ಚಿಸಲಿಲ್ಲ..! ಯಾಕೆ ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್:

“ಕಾಂಗ್ರೆಸ್ ಹಾಗು ಜೆಡಿಎಸ್‌ ಪಕ್ಷದಿಂದ ಆಯ್ಕೆಯಾಗಿದ್ದ ಶಾಸಕರು ಮೈತ್ರಿ ಸರ್ಕಾರದ ಕೆಟ್ಟ ಆಡಳಿತ ತೊಲಗಿಸಿ, ರಾಜ್ಯದ ಅಭಿವೃದ್ಧಿಗಾಗಿ ತ್ಯಾಗ ಮಾಡಿದ್ದಾರೆ, ಅವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ” ಇದು ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಸಿ.ಎಂ ಯಡಿಯೂರಪ್ಪ ಹೇಳಿದ ಮಾತು.

ಆ ಬಳಿಕ ಉಪಚುನಾವಣೆ ಪ್ರಚಾರದ ವೇಳೆ ಗೆದ್ದ ಮರುದಿನವೇ ಸಚಿವರಾಗ್ತಾರೆ ಎಂದು ಮತದಾರರ ಎದುರು ಘೋಷಣೆ ಮಾಡಿದ್ರು. ಡಿಸೆಂಬರ್ ಅಂತ್ಯಕ್ಕೆ ವಿಸ್ತರಣೆ ಎಂದಿದ್ರು, ಸಾಧ್ಯವಾಗಲಿಲ್ಲ. ಆಮೇಲೆ ಸಂಕ್ರಾಂತಿಗೆ ಎಂದರು, ದೆಹಲಿಗೆ ಹೊರಟಿದ್ದ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಭೇಟಿಗೆ ಸಮಯವನ್ನೇ ಕೊಡಲಿಲ್ಲ. ಬೆಂಗಳೂರು, ಹುಬ್ಬಳ್ಳಿ ಪ್ರವಾಸದ ವೇಳೆ ಚರ್ಚಿಸೋಣ ಎಂದಿದ್ದ ಅಮಿತ್ ಶಾ, ನಿನ್ನೆ ಹಿಂದೆ ಹಿಂದೆ ಸುತ್ತಿದರೂ ಸಂಪುಟ ವಿಸ್ತರಣೆ ಬಗ್ಗೆ ಚಕಾರ ಎತ್ತಲು ಬಿಡಲಿಲ್ಲ. ಅಂತಿಮವಾಗಿ ಹುಬ್ಬಳ್ಳಿಯ ಹೋಟೆಲ್‌ಗೆ ಅಮಿತ್ ಶಾ ತೆರಳುತ್ತಿದ್ದ ಹಾಗೆ ಯಡಿಯೂರಪ್ಪ ಬೇಸರದಲ್ಲೇ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದರು.

ಅಮಿತ್ ಶಾ ಯಡಿಯೂರಪ್ಪ ಜೊತೆ ಯಾಕೆ ಚರ್ಚೆ ನಡೆಸಲಿಲ್ಲ..? ಅನ್ನೋ ಪ್ರಶ್ನೆ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಇಡೀ ರಾಜ್ಯದ ಜನರ ಮನಸ್ಸಿಲ್ಲಿ ಉದ್ಬವಿಸಿದೆ.

ಅಮಿತ್ ಶಾ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌‌ನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಹಾಜರಾಗಿದ್ರು. ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿ ಉದ್ಘಾಟಿಸಿದರು. ಬಳಿಕ ಪೇಜಾವರ ಮಠ ವಿಶ್ವೇಶತೀರ್ಥ ಸ್ವಾಮೀಜಿ ಬೃಂದಾವನಕ್ಕೆ ಭೇಟಿ ಕೊಟ್ಟರು. ನಂತರ ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ, ನೆಹರು ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಕಾರ್ಯಕ್ರಮ, ಆ ಬಳಿಕ ರಾತ್ರಿ ಹೋಟೆಲ್‌ನಲ್ಲಿ ತಂಗಿದ್ದ ಅಮಿತ್ ಶಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನಿವಾಸದಲ್ಲಿ ಉಪಹಾರ ಸೇವಿಸಿ ದೆಹಲಿಯತ್ತ ತೆರಳಿದ್ದಾರೆ. ಇಷ್ಟರ ನಡುವೆ ಅಮಿತ್ ಶಾ, ಯಡಿಯೂರಪ್ಪ ಜೊತೆಗೆ 10 ನಿಮಿಷವಾದರೂ ಮಾತನಾಡುವ ಮನಸ್ಸು ಮಾಡಲಿಲ್ಲ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದರು ಎನ್ನುವುದನ್ನು ಬಿಟ್ಟರೆ, ಬೇರೆಲ್ಲೂ ಅಮಿತ್ ಶಾ ಪ್ರತ್ಯೇಕವಾಗಿ ಮಾತನಾಡಲು ಸಿಗಲಿಲ್ಲ. ಮಾಧ್ಯಮಗಳ ಮುಂದೆ ಕೆಟ್ಟ ಸಂದೇಶ ಹೋಗಬಾರದು ಎಂದಾದರೂ ಇಬ್ಬರು ಮಾತನಾಡಿದಂತೆ ನಟಿಸಬಹುದಿತ್ತು. ಆದರೆ ಅಮಿತ್ ಶಾ, ಅದಕ್ಕೂ ಅವಕಾಶ ಕೊಟ್ಟಿಲ್ಲ. ಇದಕ್ಕೆ ಕಾರಣ ಒಂದೆ ಅದು ಯಡಿಯೂರಪ್ಪ ಎನ್ನುವ ರೇಸಿನ ಕುದುರೆ.

ಬಿ.ಎಸ್ ಯಡಿಯೂರಪ್ಪ ಹುಟ್ಟು ಹೋರಾಟಗಾರ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಹೋರಾಟಗಳ ಮೂಲಕ ಸ್ಥಾನಮಾನ ಪಡೆದವರು. ಇದೀಗ ಯಡಿಯೂರಪ್ಪ ಅವರಿಗೆ 76 ವರ್ಷ ವಯಸ್ಸು. ಇದೇ ಕಾರಣದಿಂದಾಗಿ ಆಪರೇಷನ್ ಕಮಲದ ಬಳಿಕ ಯಡಿಯೂರಪ್ಪ ಅವರಿಗೆ ಸಿಎಂ ಆಗೋದು ಬೇಡ. ರಾಜ್ಯಪಾಲರಾಗಿ ಮಾಡ್ತೇವೆ ಎಂದು ಹೈಕಮಾಂಡ್ ಭರವಸೆ ಕೊಟ್ಟಿತ್ತಂತೆ. ಆದ್ರೆ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡುವ ಮೊದಲೇ ಯಡಿಯೂರಪ್ಪ ಅಧಿಕಾರ ರಚನೆಗೆ ಹಕ್ಕು ಮಂಡಿಸಿದರು ಎನ್ನಲಾಗಿತ್ತು. ಅಂದಿನಿಂದ ಶುರುವಾದ ಹೈಕಮಾಂಡ್ ಜೊತೆಗಿನ ವಾರ್ ಇನ್ನೂ ನಿಂತಿಲ್ಲ. ಬಿಎಸ್ ಯಡಿಯೂರಪ್ಪ ಇರೋದ್ರಿಂದ ಕೇಂದ್ರ ಸರ್ಕಾರ ಹಾಗು ಕೇಂದ್ರ ಬಿಜೆಪಿ ಅಸಹಕಾರ ತೋರಿಸುತ್ತಿದೆ. ಸ್ವತಃ ಬಿ.ಎಸ್ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಹುದ್ದೆ ಬಿಟ್ಟು ಹೋಗಬೇಕು ಅನ್ನೋ ಉದ್ದೇಶ ಸ್ಪಷ್ಟವಾಗಿ ಕಾಣಿಸುತ್ತಿದೆ. ಒಂದು ವೇಳೆ ಯಡಿಯೂರಪ್ಪ ಅವರನ್ನು ಕೆಳಕ್ಕಿಳಿಸಿ ಬೇರೊಬ್ಬರನ್ನು ಆಯ್ಕೆ ಮಾಡೋದು ಬಿಜೆಪಿ ಹೈಕಮಾಂಡ್‌ಗೆ ಬಹುದೊಡ್ಡ ಸಾಹಸ ಏನಲ್ಲ. ಆದ್ರೆ ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಂಡು ಬಿಜೆಪಿಯನ್ನು ಉಳಿಸಿಕೊಳ್ಳೋದು ಅಷ್ಟೊಂದು ಸುಲಭ ಅಲ್ಲ ಅನ್ನೋ ಕಾರಣಕ್ಕೆ ಈ ರೀತಿಯ ನಡೆ ಅನುಸರಿಸುತ್ತಿದೆ ಎನ್ನಲಾಗಿದೆ. ಇದರ ಜೊತೆಗೆ ಆಪರೇಷನ್ ಕಮಲದಲ್ಲಿ ಪಕ್ಷ ಸೇರ್ಪಡೆ ಆದವರಿಗೆ ಇನ್ನೂ ಕೂಡ ಬಿಜೆಪಿ, ಅದರ ಮಾತೃ ಸಂಸ್ಥೆ ಆರ್‌ಎಸ್‌ಎಸ್ ಬಗ್ಗೆ ಇನ್ನೂ ಮಾಹಿತಿ ಇಲ್ಲ.

ಪಕ್ಷಕ್ಕೂ ಎಷ್ಟು ಮಹತ್ವ ಕೊಡಬೇಕು ಅನ್ನೋದು ಇನ್ನು ಮನವರಿಕೆ ಆಗಿಲ್ಲ. ಆ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ಆಗದಂತೆ ನೋಡಿಕೊಳ್ಳುವ ಮೂಲಕ ಹೈಕಮಾಂಡ್ ದಾಳ ಉರುಳಿಸುತ್ತಿದೆ ಎನ್ನಲಾಗಿದ್ದೆ. ಇನ್ನು ಸಂಘ ಪರಿವಾರದ ನಾಯಕರಿಗೆ ಯಡಿಯೂರಪ್ಪ ಸಲಾಂ ಹಾಕುವ ವ್ಯಕ್ತಿ ಅಲ್ಲವೇ ಅಲ್ಲ. ನೇರಾನೇರ ಮಾತುಗಳನ್ನಾಡುವ ಯಡಿಯೂರಪ್ಪ ಕೇಶವಕೃಪಾದಿಂದ ಸ್ವಲ್ಪ ದೂರವೇ ಉಳಿಯುತ್ತಾರೆ. ಆದ್ರೆ ಇದೀಗ ಉತ್ತರ ಭಾರತ ಬಳಿಕ ದಕ್ಷಿಣ ಭಾರತದಲ್ಲೂ ಆರ್‌ಎಸ್‌ಎಸ್ ಪ್ರಬಾವ ಹೆಚ್ಚಿಸಿಕೊಂಡಿದ್ದು ಪಕ್ಷದ ಮೇಲೆ ಹಿಡಿತ ಸಾಧಿಸುತ್ತಿದೆ ಎನ್ನುವ ಮಾಹಿತಿ ಹರಿದಾಡ್ತಿದೆ.

ಸರ್ಕಾರವನ್ನು ಯಡಿಯೂರಪ್ಪ ನಡೆಸಿದ್ರೆ, ಪಕ್ಷ ಸಂಪೂರ್ಣವಾಗಿ ಆರ್‌ಎಸ್ಎಸ್ ನೀತಿ ನಿರೂಪಣೆಯಂತೆ ನಡೆಯುತ್ತಿದೆ ಎನ್ನಲಾಗಿದೆ. ಒಟ್ಟಾರೆ ಅಮಿತ್ ಷಾ ಯಡಿಯೂರಪ್ಪ ಜೊತೆ ಮಾತನಾಡಿಲ್ಲ. ಸೋಮವಾರ ಜೆಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಮುಂದಿನ ದಿನಗಳಲ್ಲಿ ಏನು ನಡೆಯಲಿದೆ ಅನ್ನೋ ಕುತೂಹಲ ರಾಜ್ಯದ ಜನರಲ್ಲಿದೆ.

Leave a Reply