ಯಡಿಯೂರಪ್ಪ ನಿವೃತ್ತಿ ಬಗ್ಗೆ ಆರೆಸ್ಸೆಸ್ ತೀರ್ಮಾನ! ಕುದಿಯುತ್ತಿದೆ ಬಿಎಸ್ ವೈ ಆಪ್ತ ಬಳಗ!

ಡಿಜಿಟಲ್ ಕನ್ನಡ ಟೀಮ್:

‘ಬಿ.ಎಸ್.ಯಡಿಯೂರಪ್ಪ ನಿಜವಾದ ಮಣ್ಣಿನ ಮಗ. ಸೊನ್ನೆಯಿಂದ ಅಧಿಕಾರದವರೆಗೂ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ರಾಜ್ಯದಲ್ಲಿ ಮಾದರಿ ಆಡಳಿತ ನೀಡುವುದಾಗಿ ಹೇಳಿದ್ದಾರೆ. ಮುಂದಿನ ಮೂರೂವರೆ ವರ್ಷಗಳ ಕಾಲ ಸಿಎಂ ಆಗಿ ಯಡಿಯೂರಪ್ಪ‌ ಅವರೇ ಇರ್ತಾರೆ. ಆನಂತರ ಬಿ.ಎಸ್. ಯಡಿಯೂರಪ್ಪ ಚುನಾವಣೆಗೆ ನಿಲ್ಲುವುದಿಲ್ಲ…’ ಇದು ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರಕಟಿಸಿರುವ ತೀರ್ಮಾನ.

ಕಲ್ಲಡ್ಕ ಪ್ರಭಾಕರ ಭಟ್ ಅವರ ಹೇಳಿಕೆ ಕುರಿತು ಈಗ ಬಿಎಸ್ ಯಡಿಯೂರಪ್ಪ ಆಪ್ತಬಣ ಕೊತಕೊತ ಕುದಿಯಲು ಶುರು ಮಾಡಿದೆ.

ಹಾಸನದಲ್ಲಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ‘ಮೂರೂವರೆ ವರ್ಷದ ಬಳಿಕ ಸಿಎಂ ಯಡಿಯೂರಪ್ಪ ಚುನಾವಣಾ ನಿವೃತ್ತಿ ತೆಗೆದುಕೊಳ್ಳುವ ವಿಚಾರವಾಗಿ ನಮ್ಮೊಟ್ಟಿಗೆ ಯಾವುದೇ ವಿಚಾರ ಹೇಳಿಕೊಂಡಿಲ್ಲ. ನಾವೆಲ್ಲರೂ ಯಡಿಯೂರಪ್ಪ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದೇವೆ. ಮೊನ್ನೆ ಯಡಿಯೂರಪ್ಪ ಅವರು ನಾವೇ ಮತ್ತೆ ಐದು ವರ್ಷ ಸರ್ಕಾರ ಮಾಡ್ತೀವಿ ಅಂತಾ ಹೇಳಿದ್ದಾರೆ. ಅವರ ನಾಯಕತ್ವದ ಬಗ್ಗೆ ನಮಗೆ ವಿಶ್ವಾಸವಿದೆ’ ಎನ್ನುವ ಮೂಲಕ ಕಲ್ಲಡ್ಕ ಪ್ರಭಾಕರ್ ಭಟ್ ಮಾತಿಗೆ ತಿರುಗೇಟು ಕೊಟ್ಟಿದ್ದಾರೆ.

ಇನ್ನುಳಿದ ಬಿಎಸ್ ಯಡಿಯೂರಪ್ಪ ಆಪ್ತರು, ಏನನ್ನೂ ಹೇಳಿಕೊಳ್ಳಲು ಆಗದೆ ಕೈ ಕೈ ಹಿಸುಕಿಕೊಳ್ತಿದ್ದಾರೆ. ಆರ್‌ಎಸ್‌ಎಸ್ ತಂತ್ರಗಾರಿಕೆಗೆ ಏನು ಪ್ರತಿಕ್ರಿಯೆ ಕೊಡೋದು ಅನ್ನೋ ಚಿಂತನೆಯಲ್ಲಿ ಇದ್ದಾರೆ. ದಾವೋಸ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ವಾಪಸ್ ಬಂದ ಬಳಿಕ ಸಂಪುಟ ವಿಸ್ತರಣೆ ಜೊತೆಗೆ ರಾಜಕೀಯ ನಿವೃತ್ತಿ ವಿಚಾರವೂ ರಂಗೇರುವ ಸಾಧ್ಯತೆ ಇದೆ.

Leave a Reply