ಶಿವಣ್ಣನ ಭಜರಂಗಿಗೆ ಸರಣಿ ವಿಘ್ನ ಯಾಕೆ!?

ಡಿಜಿಟಲ್ ಕನ್ನಡ ಟೀಮ್:

ಭಜರಂಗಿ ಚಿತ್ರ ಯಶಸ್ಸಿನ ಬಳಿಕ ಅದೇ ಚಿತ್ರತಂಡ ಎರಡನೇ ಸರಣಿ ಮಾಡಲು ಮುಂದಾಗಿದ್ದು ಈ ಚಿತ್ರಕ್ಕೆ ಸರಣಿ ವಿಘ್ನಗಳು ಎದುದುರಾಗುತ್ತಿವೆ.

ನಿರ್ದೇಶಕ ಹರ್ಷ ನಿರ್ದೇಶನದಲ್ಲಿ ಭಜರಂಗಿ – 2 ಸಿನಿಮಾ ಇತ್ತೀಚೆಗಷ್ಟೇ ವಿಭಿನ್ನ ಪೋಸ್ಟರ್ ಮೂಲಕ ಸೌಂಡ್ ಮಾಡಿತ್ತು. ಅದರ ಬೆನ್ನಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಚಿತ್ರ ಅನಾಹುತಗಳಿಂದಲೇ ಸುದ್ದಿಯಾಗುತ್ತಿದೆ.

ನೆಲಮಂಗಲದ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಚಿತ್ರೀಕರಣ ವೇಳೆ ಅಗ್ನಿ ಅವಘಡ ಸಂಭವಿಸಿದ್ದು ದುಭಾರಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸೆಟ್ ನಾಶವಾಗಿದೆ. ಚಿತ್ರೀಕರಣಕ್ಕೆ ನಿರ್ಮಾಣವಾಗಿದ್ದ ಗುಹೆಯ ದೃಶ್ಯಗಳ ಸೆಟ್‌ನಲ್ಲಿ ಬೆಂಕಿಯನ್ನು ಬಳಸಿ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಹೊತ್ತಿ ಉರಿದ ಸೆಟ್‌ ಅನ್ನು ಅಗ್ನಿಶಾಮಕ ಸಿಬ್ಬಂದಿ ತಹಬದಿಗೆ ತಂದಿದ್ದಾರೆ. ಆದ್ರೆ ಭಜರಂಗಿ – 2 ಚಿತ್ರೀಕರಣದ ವೇಳೆ ನಿರಂತರವಾಗಿ ಅವಘಡಗಳು ಸಂಭವಿಸುತ್ತಿರುವ ಹಿನ್ನಲೆಯಲ್ಲಿ‌ ಚಿತ್ರತಂಡ ಆತಂಕಕ್ಕೆ ಒಳಗಾಗಿದೆ.

ಎರಡು ದಿನಗಳ ಹಿಂದೆ ಭಜರಂಗಿ – 2 ಚಿತ್ರೀಕರಣಕ್ಕೆ ತೆರಳುತ್ತಿದ್ದ ಬಸ್, ವಿದ್ಯುತ್ ಕಂಬಕ್ಕೆ ಗುದ್ದಿತ್ತು. ಜೂನಿಯರ್ ಆರ್ಟಿಸ್ಟ್‌ಗಳು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದರು. 60ಕ್ಕೂ ಹೆಚ್ಚು ಕಲಾವಿದರು ಪ್ರಯಾಣಿಸುತ್ತಿದ್ದ ಖಾಸಗಿ ಬಸ್, ನೆಲಮಂಗಲ ತಾಲೂಕಿನ ಶ್ರೀನಿವಾಸಪುರ ಗ್ರಾಮದ ಬಳಿ ಅಪಘಾತಕ್ಕೆ ಒಳಗಾಗಿತ್ತು. 11ಕೆವಿ ಸಾಮರ್ಥ್ಯದ ವಿದ್ಯುತ್ ಪ್ರವಹಿಸುವ ಲೈನ್ ಬಸ್ ಮೇಲೆ ಬಿದ್ದಿತ್ತು. ವಿದ್ಯುತ್ ಕಂಬ ಹಾಗೂ ಲೈನ್‌ಗಳು ಬಸ್‌ ಮೇಲೆ ಬಿದ್ದರೂ ಅದೃಷ್ಟ ಕೈ ಹಿಡಿದಿತ್ತು.

ಈ ಘಟನೆಗೂ 2 ದಿನಗಳ ಮುನ್ನ ಭಜರಂಗಿ – 2 ಚಿತ್ರೀಕರಣದ ಸೆಟ್‌ನಲ್ಲೇ ಅಗ್ನಿ ಅವಘಡ ಸಂಭವಿಸಿತ್ತು. ನೆಲಮಂಗಲದ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲೇ ಈ ಅವಘಡ ನಡೆದಿತ್ತು. ಆ ಬಗ್ಗೆ ಮಾತನಾಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಯಾವುದೇ ದುರಂತಗಳು ಸಂಭವಿಸಿಲ್ಲ. ಬೆಂಕಿ ಬಳಸಿ ಚಿತ್ರೀಕರಣ ಮಾಡುತ್ತಿದ್ದಾಗ ಅವಘಡ ಆಗಿದೆ. ಸಿನಿಮಾದ ಅತೀ ಮುಖ್ಯವಾದ ಸೀನ್ ಶೂಟ್ ಮಾಡುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಬಳಸಿ ಬೆಂಕಿ ಹಚ್ಚಿದ್ದು ಘಟನೆಗೆ ಕಾರಣ. ಗೋಣಿ ಚೀಲ ಇದ್ದ ಕಾರಣ ಬೆಂಕಿ ಹೊತ್ತಿಕೊಂಡಿತ್ತು. ಅಗ್ನಿಶಾಮಕ ಉಪಕರಣಗಳನ್ನು ಬಳಸಿ ಆದಷ್ಟು ಬೇಗೆ ಬೆಂಕಿ ನಂದಿಸಿದ್ವಿ. ಸುಮಾರು 200 ಜನ ಕಲಾವಿದರು ಕೆಲಸ ಮಾಡುತ್ತಿದ್ದೆವು. ಭಜರಂಗಿ ನಮ್ಮನ್ನೆಲ್ಲ ಉಳಿಸಿದ್ದಾನೆ ಎಂದಿದ್ದರು. ಇದೀಗ ಮತ್ತೆ ಮೂರನೇ ಘಟನೆ ಎದುರಾಗಿರೋದು ಆತಂಕ ಸೃಷ್ಟಿಸಿದೆ.

ಭಜರಂಗಿ ಸಿನಿಮಾ ಶೂಟಿಂಗ್​ನಲ್ಲಿ ನಡೆಯುತ್ತಿರುವ ಅವಘಡಗಳಿಗೂ ಮಂಗಳೂರಿಗೂ ಲಿಂಕ್​ ಇದ್ಯಾ ಅನ್ನೋ ಮಾತುಗಳು ಶುರುವಾಗಿದೆ. ಯಾಕಂದ್ರೆ ಶಿವಣ್ಣ ಅಭಿನಯದ ಆಯುಷ್ಮಾನ್​ಭವ ಚಿತ್ರಕ್ಕೆ ತುಳುನಾಡಿನ ಒತ್ತೆಕೋಲ ಬಳಸಿಕೊಳ್ಳಲಾಗಿತ್ತು. ಈ ವೇಳೆ ನಡೆದಿದೆ ಎನ್ನಲಾದ ಅಪಚಾರವೇ ಕಾರಣ ಎಂಬ ಮಾತು ಕೇಳಿ ಬಂದಿದೆ. ನಟ ಶಿವಣ್ಣನ ‘ಆಯುಷ್ಮಾನ್​ಭವ’ ಚಿತ್ರದ ಶೂಟಿಂಗ್ ಮಂಗಳೂರು ಬಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿತ್ತು. ಈ ವೇಳೆ ಪೊಳಲಿ ದೇಗುಲದ ಎದುರು ನೈಜ ಒತ್ತೆಕೋಲವನ್ನು ಚಿತ್ರೀಕರಿಸಲಾಗಿತ್ತು. ಈ ಚಿತ್ರದ ಬಳಿಕ ಸಾಲು-ಸಾಲು ವಿಘ್ನ ಎದುರಾಗುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವರಾಧನೆಗೆ ಹೆಚ್ಚಿನ ಮಹತ್ವ ಕೊಡಲಾಗುತ್ತೆ. ಅಂದು ಆಯುಷ್ಮಾನ್​ಭವ ಚಿತ್ರೀಕರಣಕ್ಕೆ ಸ್ಥಳೀಯರ ವಿರೋಧ ಎದುರಾಗಿತ್ತು. ಆದರೂ ಚಿತ್ರೀಕರಣ ನಡೆಸಲಾಗಿತ್ತು. ವಿಷ್ಣುಮೂರ್ತಿ ದೇವರ ಒತ್ತೆಕೋಲವನ್ನು ಬೆಂಕಿಯಿಂದಲೇ ನಡೆಯುತ್ತಿದ್ದು, ಇದೀಗ ಬೆಂಕಿಯಿಂದಲೇ ಭಜರಂಗಿ-2 ಚಿತ್ರತಂಡ ಅನಾಹುತವನ್ನು ಎದುರಿಸುತ್ತಿದೆ ಎನ್ನಲಾಗಿದೆ.

Leave a Reply