ಮುಸ್ಸಂಜೆ ಸೂರ್ಯನಾಗಿರೋ ಸಿದ್ದರಾಮಯ್ಯಗೆ ಯಾವ ಆಯ್ಕೆ ಉತ್ತಮ?

ಸೋಮಶೇಖರ್ ಪಿ ಭದ್ರಾವತಿ

ಸಿದ್ದರಾಮಯ್ಯ, ರಾಜ್ಯ ಕಂಡ ಪ್ರಭಾವಿ ರಾಜಕಾರಣಿ ಹಾಗೂ ಕರ್ನಾಟಕದ ಯಶಸ್ವೀ ಮುಖ್ಯಮಂತ್ರಿ. ಹೌದು, ದೇವರಾಜ ಅರಸು ನಂತರ ರಾಜ್ಯದಲ್ಲಿ ಐದು ವರ್ಷಗಳ ಕಾಲ ಪೂರ್ಣಾವಧಿಯಲ್ಲಿ ಆಡಳಿತ ನಡೆಸಿ ಅನೇಕ ಭಾಗ್ಯಗಳನ್ನು ಕೊಟ್ಟ ಸರದಾರ.

ಜನಪ್ರಿಯ ಯೋಜನೆಗಳನ್ನು ಕೊಟ್ಟರು ಮತ್ತೆ ಅಧಿಕಾರಾದ ಗದ್ದುಗೆ ಹಿಡಿಯಲು ವಿಫಲವಾದ ಸಿದ್ದರಾಮಯ್ಯ ಈಗ ಮುಸ್ಸಂಜೆ ಸೂರ್ಯ ಎಂದರೆ ತಪ್ಪಿಲ್ಲ. ಹೆಚ್ಚು ಕಮ್ಮಿ ಮುಂದಿನ ಕೆಲ ವರ್ಷಗಳು ಮಾತ್ರ ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಮುಂದಿನ ನಡೆ ಅವರ ವೈಯಕ್ತಿಕ ಘನತೆಗೆ ಮಾತ್ರವಲ್ಲ ಪಕ್ಷದ ಮೇಲೂ ಪ್ರಭಾವ ಬೀರಲಿದೆ.

ಸದ್ಯ ರಾಜ್ಯ ಕಾಂಗ್ರೆಸ್ ನಲ್ಲಿ ಬಣಗಳ ಕಿತ್ತಾಟ ಹೈಕಮಾಂಡ್ ಮಾತ್ರವಲ್ಲ ತಳಮಟ್ಟದ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದೇ ಕಾರಣಕ್ಕೆ ವಿಧಾನಸಭೆ ಚುನಾವಣೆಯಿಂದ ಲೋಕಸಭೆ ಚುನಾವಣೆ ಹಾಗೂ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಫಲಿತಾಂಶ ಪಡೆಯಲು ವಿಫಲವಾಗಿದೆ. ಈ ಎಲ್ಲದರ ಸಂಪೂರ್ಣ ಲಾಭವನ್ನು ಬಿಜೆಪಿ ಪಡೆದು ಅಧಿಕಾರ ಫಲ ಸವಿಯುತ್ತಿದೆ.

ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ವಿರೋಧ ಪಕ್ಷದ ನಾಯಕ, ಶಾಸಕಾಂಗ ಪಕ್ಷದ ನಾಯಕ ಹಾಗೂ ಕಾರ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ತಲೆ ಕೆಡಿಸಿಕೊಂಡು ಕೂತಿದೆ. ಪಕ್ಷದ ನಾಯಕರು ಒಟ್ಟಾಗಿ ಕೆಲಸ ಮಾಡಲು ಯಾವ ಸೂತ್ರ ಪ್ರಯೋಗಿಸಬೇಕು ಎಂಬ ಅನ್ವೇಷಣೆಯಲ್ಲಿದೆ.

ಸಿದ್ದರಾಮಯ್ಯ ಒಬ್ಬರು ಮನಸ್ಸು ಮಾಡಿದರೆ ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲ ಸುಕ್ಕುಗಳನ್ನು ಸುಲಭವಾಗಿ ಬಿಡಿಸಿಬಹುದು. ಪಕ್ಷದಲ್ಲಿ ಒಂದು ಬಣದ ಮುಖ್ಯಸ್ಥರಾಗಿ ಗುರುತಿಸಿಕೊಳ್ಳುತ್ತಿರುವ ಸಿದ್ದರಾಮಯ್ಯಗೆ ಈಗ ಅವರ ಪ್ರಬುದ್ಧತೆಗೆ ಪರೀಕ್ಷೆ ಎದುರಾಗಿದೆ.

ಹೀಗಾಗಿ ಸಿದ್ದರಾಮಯ್ಯ ಅವರು ಒಂದು ಬಣದ ನಾಯಕತ್ವ ವಹಿಸಿಕೊಳ್ಳುವ ಬದಲು ಹೈಕಮಾಂಡ್ ಮುಂದೆ ಯಾವುದೇ ಲಾಭಿ ಮಾಡದೇ ಅವರು ಆಯ್ಕೆ ಮಾಡುವ ನಾಯಕರಿಗೆ ತಮ್ಮ ಬೆಂಬಲ ನೀಡಿ ರಾಜ್ಯ ಕಾಂಗ್ರೆಸ್ ನಲ್ಲಿ ಒಗ್ಗಟ್ಟು ಉಳಿಯುವಂತೆ ನೋಡಿಕೊಳ್ಳಬೇಕು.

ಕಳೆದ 14 ವರ್ಷಗಳಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಶ್ನಾತೀತ ಕ್ಯಾಪ್ಟನ್ ಆಗಿ ಮೆರೆದ ಸಿದ್ದರಾಮಯ್ಯ ಅವರು ಈಗ ಕೋಚ್ ಪಾತ್ರ ನಿರ್ವಹಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದು ಕೇವಲ ಪಕ್ಷಕ್ಕೆ ಮಾತ್ರವಲ್ಲ ತಮ್ಮ ವೈಯಕ್ತಿಕ ಘನತೆಗೂ ಅಗತ್ಯವಾಗಿದೆ. ಹೀಗಾಗಿ ಕ್ಯಾಪ್ಟನ್ ಶಿಪ್ ಬೇಕು ಎಂದು ಹಠ ಮಾಡದೇ ಹೈಕಮಾಂಡ್ ಸೂಚಿಸುವ ನಾಯಕನ ಬೆನ್ನಿಗೆ ನಿಂತು, ತಮ್ಮ ಬೆಂಬಲಿತ ನಾಯಕರಿಗೂ ಅನ್ಯಾಯ ಆಗದಂತೆ ನೋಡಿಕೊಂಡು ಪಕ್ಷ ಮುನ್ನಡೆಯುವಂತೆ ಮಾಡುವ ಮಹತ್ತರ ಜವಾಬ್ದಾರಿ ಸಿದ್ದರಾಮಯ್ಯ ಅವರ ಹೆಗಲ ಮೇಲಿದೆ.

2006ರಲ್ಲಿನ ರಾಜ್ಯ ರಾಜಕೀಯ ಮೇಲಾಟದಲ್ಲಿ ಸಿದ್ದರಾಮಯ್ಯ ಜೆಡಿಎಸ್ ನಿಂದ ಹೊರಬರಬಂದರು. ಆಗ ಅವರನ್ನು ಕಾಂಗ್ರೆಸ್ ಸೇರಿಸಿಕೊಂಡು ತನ್ನ ನಾಯಕತ್ವವನ್ನೇ ನೀಡಿತು. ವಿರೋಧ ಪಕ್ಷದ ಸ್ಥಾನದಿಂದ ಮುಖ್ಯಮಂತ್ರಿ ಸ್ಥಾನದವರೆಗೂ ಸಿದ್ದರಾಮಯ್ಯ ಕಂಡಿದ್ದ ಎಲ್ಲ ಕನಸನ್ನು ನನಸು ಮಾಡಿಕೊಳ್ಳಲು ಸಂಪೂರ್ಣ ಸಹಕಾರ ನೀಡಿತು. ಹೀಗಾಗಿ ಪಕ್ಷ ಮಾಡಿದ ಉಪಕಾರಕ್ಕೆ ಋಣ ಸಂದಾಯ ಮಾಡಲು ಸಿದ್ದರಾಮಯ್ಯ ಅವರಿಗೆ ಉತ್ತಮ ಅವಕಾಶ ಇದೆ.

ಈಗಾಗಲೇ ತಾವು ನಂಬಿದ್ದ ಶಾಸಕರು ಮಾಡಿದ ದ್ರೋಹದಿಂದ ಮೈತ್ರಿ ಸರ್ಕಾರದ ಪತನದ ಮಸಿ ಮೆತ್ತಿಕೊಂಡಿರುವ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ಅಂತಿಮ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಒಡೆದ ಕಳಂಕ ಹೊತ್ತುಕೊಳ್ಳುವುದು ದುರಂತವೇ ಸರಿ.

ರಾಜ್ಯ ಸೇರಿದಂತೆ ರಾಷ್ಟ್ರ ಮಟ್ಟದಲ್ಲೂ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಪಕ್ಷದ ಸಂಘಟನೆ ಅಗತ್ಯವಿದೆ. ಹೀಗಾಗಿ ಸಿದ್ದರಾಮಯ್ಯ ತಮ್ಮ ಅಹಿಂದ ಸಮುದಾಯವನ್ನು ಸಂಘಟಿಸಿ ಕಾಂಗ್ರೆಸ್ ಪಕ್ಷಕ್ಕೆ ನೆರವಾದರೆ ಇತಿಹಾಸದ ಪುಟಗಳಲ್ಲಿ ಉತ್ತಮ ಉದಾಹರಣೆಯಾಗಿ ಉಳಿಯಲಿದ್ದಾರೆ. ಇಲ್ಲವಾದ್ರೆ ಕೆಟ್ಟ ಉದಾಹರಣೆ ಕಥೆಯಾಗುತ್ತಾರೆ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಅವರು ತೆಗೆದುಕೊಳ್ಳುವ ನಿರ್ಧಾರ ಪಕ್ಷ ಹಾಗೂ ಅವರ ವೈಯಕ್ತಿಕ ಘನತೆ ಮೇಲೆ ದೊಡ್ಡ ಪರಿಣಾಮವನ್ನೇ ಬೀರಲಿದೆ.

Leave a Reply