ದ್ರೋಹ ಬಗೆದವರು ಈಗ ಅಂತರಪಿಶಾಚಿಗಳಾಗಿದ್ದಾರೆ: ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ದ್ರೋಹ ಬಗೆದು ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ 17 ಶಾಸಕರುಗಳು ಈಗ ಅಂತರಪಿಶಾಚಿಗಳಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು…

‘ಮಾತೃ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಯಿಂದ ಉಪಚುನಾವಣೆ ಗೆದ್ದವರೂ ಕೂಡ ಈಗ ಮಂತ್ರಿ ಸ್ಥಾನ ಸಿಗದೆ ಕಂಗಾಲಾಗಿದ್ದಾರೆ. ಬಿಜೆಪಿ ಸೇರಿರುವ ಶಾಸಕರಿಗೆ ಅಮಿತ್ ಷಾ ಭೇಟಿಗೂ ಅವಕಾಶ ನೀಡಿಲ್ಲ. ಒಂದುವೇಳೆ ಸಂಪುಟ ವಿಸ್ತರಣೆಯಾದರೆ ಬಿಜೆಪಿಯಲ್ಲಿ ಮಹಾಸ್ಫೋಟವಾಗಲಿದೆ. ಗೆದ್ದ ಎಲ್ಲ ಶಾಸಕರಿಗೂ ಮಂತ್ರಿ ಸ್ಥಾನ ಕೊಡಲು ಸಾಧ್ಯವಾಗದು. ಈಗಾಗಲೇ ವಿಶ್ವನಾಥ್ ತಮಗೆ ಮಂತ್ರಿ ಸ್ಥಾನ ಬೇಕೇ ಬೇಕೆಂದು ಎಚ್ಚರಿಕೆ ನೀಡಿದ್ದಾರೆ. ಮುಂದೆ ಏನಾಗಲಿದೆ ಎಂಬುದನ್ನು ನೀವೇ ನೋಡಿ ಎಂದು ಲೇವಡಿ ಮಾಡಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ದಿನದಿಂದ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಾಗಿದೆ. ಮಂತ್ರಿ ಮಂಡಲ ರಚನೆ ವಿಚಾರದಲ್ಲಿ ಯಡಿಯೂರಪ್ಪ ಅವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ.’

ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ‘ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಹೈಕಮಾಂಡ್​ಗೆ ತಿಳಿಸಿದ್ದೇನೆ. ಆದಷ್ಟು ಬೇಗ ನೇಮಕವಾಗಲಿ ಎಂದು ಕೂಡ ಹೇಳಿದ್ದೇನೆ, ಹಾಗಂತ ಯಾರಾಗಲಿದ್ದಾರೆ ಎಂದು ಈಗ ಹೇಳಲು ಸಾಧ್ಯವಿಲ್ಲ. ಮಂತ್ರಿಮಂಡಲ ರಚನೆಯಾಗಬೇಕಾಗಿರುವುದು ಇದಕ್ಕಿಂತಲೂ ದೊಡ್ಡ ವಿಚಾರ’ ಎಂದರು.

Leave a Reply