ಅಶ್ವತ್ಥ ನಾರಾಯಣ್‌ಗೆ ಕೈ ತಪ್ಪಲಿದೆಯಾ ಡಿಸಿಎಂ ಪಟ್ಟ..? ಬಿಜೆಪಿಯಲ್ಲಿ ಏನಾಗ್ತಿದೆ..?

ಡಿಜಿಟಲ್ ಕನ್ನಡ ಟೀಮ್:

ಸಚಿವ ಸಂಪುಟ ವಿಸ್ತರಣೆ ಪ್ರಹಸನದಲ್ಲಿ ಯಾರಿಗೆ ಮಂತ್ರಿ ಪಟ್ಟ ಒಲಿಯುತ್ತದೆ, ಯಾರ ಅಧಿಕಾರ ಹೋಗುತ್ತದೆ ಎಂಬುದು ಸದ್ಯ ಎದ್ದಿರುವ ಪ್ರಶ್ನೆ. ಮೊನ್ನೆಯಷ್ಟೇ ನಾನು ಮುಂದಿನ ಮೂರು ವರ್ಷ ಉಪಮುಖ್ಯಮಂತ್ರಿಯಾಗಿ ಇರ್ತೇನೆ ಎಂದು ಹೇಳಿಕೆ ನೀಡಿದ್ದ ಅಶ್ವಥ್ ನಾರಾಯಣ್ ಅವರೇ ಈಗ ಡಿಸಿಎಂ ಪಟ್ಟ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಬಿಜೆಪಿ ಪಡಸಾಲೆಯಲ್ಲಿ ಗುಸುಗುಸು ಚರ್ಚೆಯಾಗುತ್ತಿದೆ.

ದಾವೋಸ್‌ ಪ್ರವಾಸ ಕೈಗೊಂಡಿದ್ದ ಸಿಎಂ ಯಡಿಯೂರಪ್ಪ ಇಂದು ಬೆಂಗಳೂರು ತಲುಪಿದ್ದಾರೆ. ಈಗಾಗಲೇ ಸಚಿವಾಕಾಂಕ್ಷಿಗಳು ಮಾತುಕತೆಗೆ ಸಜ್ಜಾಗಿದ್ದಾರೆ. ಯಾವುದೇ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳದ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟದ ಬಗ್ಗೆ ಅಂತಿಮ ಕಸರತ್ತು ನಡೆಸಲು ಮುಂದಾಗಿದ್ದಾರೆ.

ಈ ನಡುವೆ ಆಪರೇಷನ್ ಕಮಲದಲ್ಲಿ ಬಿಜೆಪಿ ಸೇರ್ಪಡೆಯಾದ ಎಲ್ಲರಿಗೂ ಸಂಪುಟದಲ್ಲಿ ಸ್ಥಾನ ಕೊಡಬೇಕು ಎನ್ನುವ ಆಗ್ರಹದ ನಡುವೆ, ಅರ್ಹ ಶಾಸಕರಲ್ಲಿ ಕೇವಲ ಆರು ಮಂದಿಗೆ ಮಾತ್ರ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿ, ಆ ಆರು ಮಂದಿ ಯಾರಾಗಬೇಕು ಎನ್ನುವುದನ್ನು ನೀವೇ ನಿರ್ಧರಿಸಿ ಎಂದಿದ್ದಾರೆ ಎನ್ನಲಾಗಿದೆ. ‌ ಈ ಮಾಹಿತಿ ಸಿಎಂ ಯಡಿಯೂರಪ್ಪ ಅವರನ್ನು ಕಂಗಾಲಾಗುವಂತೆ ಮಾಡಿದೆ.

ಈ ನಡುವೆ ಆಪರೇಷನ್ ಕಮಲಕ್ಕೆ ಯಡಿಯೂರಪ್ಪ ಅವರ ಭುಜಕ್ಕೆ ಭುಜಕೊಟ್ಟು ಸಹಕರಿಸಿದ ರಮೇಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕು ಅನ್ನೋ ನಿರ್ಧಾರ ಸರ್ಕಾರ ರಚನೆಗೂ ಮೊದಲೇ ಆಗಿತ್ತು ಎನ್ನಲಾಗಿದ್ದು, ಬಿಜೆಪಿ ಹೈಕಮಾಂಡ್ ಸಾಧ್ಯವಿಲ್ಲ ಎಂದಿದೆ ಎನ್ನಲಾಗಿದೆ.

ಯಡಿಯೂರಪ್ಪ ಸಂಪುಟದಲ್ಲಿ ಈಗಾಗಲೇ ಮೂವರು ಉಪಮುಖ್ಯಮಂತ್ರಿ ಪಟ್ಟದಲ್ಲಿದ್ದು, ಇಬ್ಬರು ಸಿಎಂ ಯಡಿಯೂರಪ್ಪ ಅವರ ಆಪ್ತರಾಗಿದ್ದಾರೆ. ಇನ್ನೊಬ್ಬರು ಹೈಕಮಾಂಡ್ ಆಯ್ಕೆಯವರಾಗಿದ್ದಾರೆ. ಹೀಗಾಗಿ ಮತ್ತೊಂದು ಡಿಸಿಎಂ ಸ್ಥಾನ ಸೃಷ್ಟಿಸುವುದು ಕಷ್ಟ ಎನ್ನುವ ಸಂದೇಶ ಹೈಕಮಾಂಡ್‌ನಿಂದ ರವಾನೆಯಾಗಿದೆ. ಇದರ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಮತ್ತೊಂದು ಅವಕಾಶ ಕೊಟ್ಟಿರುವ ಹೈಕಮಾಂಡ್ ನಾಯಕರು, ಈಗ ಇರುವವರಲ್ಲಿ ಒಬ್ಬರನ್ನು ರಾಜೀನಾಮೆ ಕೊಡಿಸಿ, ರಮೇಶ್ ಜಾರಕಿಹೊಳಿಗೆ ಸ್ಥಾನ ಮಾಡಿಕೊಡಿ ಎಂದಿದ್ದಾರಂತೆ.

ಲಕ್ಷ್ಮಣ ಸವದಿ ಅವರನ್ನು ರಾಜೀನಾಮೆ ನೀಡಲು ತಯಾರಾಗಿರುವಂತೆ ಸಿಎಂ ಯಡಿಯೂರಪ್ಪ ಸೂಚಿಸುತ್ತಿದ್ದ ಹಾಗೆ ದೆಹಲಿಗೆ ದೌಡಾಯಿಸಿದ ಲಕ್ಷ್ಮಣ ಸವದಿ, ಸ್ಥಾನ ಉಳಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಇನ್ನುಳಿದ ಇಬ್ಬರು ಸಿಎಂ ಯಡಿಯೂರಪ್ಪ ಅವರ ಆಪ್ತರೇ ಆಗಿದ್ದಾರೆ. ಆ ಇಬ್ಬರಲ್ಲಿ ಒಬ್ಬರನ್ನು ಕೈಬಿಟ್ಟು ನಿಮ್ಮ ಮಾತನ್ನು ಉಳಿಸಿಕೊಳ್ಳಿ ಅನ್ನೋ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಕೈಬಿಟ್ಟರೆ ಉತ್ತರ ಕರ್ನಾಟಕ ಹಾಗು ಸಮುದಾಯದ ಆಕ್ರೋಶ ಎದುರಿಸಬೇಕಾಗುತ್ತೆ. ಅಂತಿಮವಾಗಿ ಅಶ್ವತ್ಥ ನಾರಾಯಣ್ ಅವರು ಸ್ಥಾನ ತ್ಯಾಗಕ್ಕೆ ಸಿದ್ಧವಾಗಿರುವಂತೆ ಸೂಚನೆ ರವಾನೆಯಾಗಿದೆ. ಇದೇ ಕಾರಣಕ್ಕೆ ಅಶ್ವತ್ಥ ನಾರಾಯಣ್ ಅವರು ತ್ಯಾಗಕ್ಕೆ ಸಿದ್ಧ ಎಂದಿದ್ದಾರೆ.

ಜನವರಿ 20 ರಂದು ಜೆಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರದ ದಿನವೇ ದೆಹಲಿಯಲ್ಲಿ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ, ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಸಿಎಂ ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತನಾಡಿದ್ದಾರೆ.

ವಿದೇಶ ಪ್ರವಾಸದಿಂದ ವಾಪಸ್ ಬಂದ ತಕ್ಷಣ ಮತ್ತೊಮ್ಮೆ ದೆಹಲಿಗೆ ತೆರಳಿ ಎಲ್ಲಾ ಇತ್ಯರ್ಥ ಮಾಡುತ್ತಾರೆ. ಸಂಪುಟ ವಿಸ್ತರಣೆ ಒಂದಷ್ಟು ತಡ ಆಗಿದೆ, ಇದು ತ್ವರಿತವಾಗಿ ಆಗಲಿದೆ. ಇನ್ನು ಹೆಚ್ಚಿನ ರೀತಿಯ ಸ್ಪಷ್ಟತೆಗೆ ಹೊಸ ಅಧ್ಯಕ್ಷರ ಜೊತೆ ಕೂಡ ಒಂದು ಚರ್ಚೆ ಆಗಬೇಕಾಗಿದೆ. ಸಿಎಂ ಬಂದ ಕೂಡಲೇ ವಿಸ್ತರಣೆ ಆಗುವುದು ಖಚಿತ. ಇನ್ನು ಡಿಸಿಎಂ ಸ್ಥಾನಗಳ ವಿಚಾರದಲ್ಲಿ ಪಕ್ಷದ ವರಿಷ್ಠರು ಮತ್ತು ಸಿಎಂ ನಿರ್ಣಯ ಕೈಗೊಳ್ಳುತ್ತಾರೆ.

ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ಏನು ಅವಶ್ಯಕತೆ ಇದೆಯೋ ಆ ಕೆಲಸವನ್ನು ಅವರು ಮಾಡುತ್ತಾರೆ. ಪಕ್ಷದ ನಿರ್ಧಾರಕ್ಕೆ ನಾವು ಬದ್ಧ ಎನ್ನುವ ಮಾತನಾಡಿದ್ದಾರೆ. ಇದೀಗ ನಾಲ್ಕನೇ ಡಿಸಿಎಂ ಸ್ಥಾನ ಸೃಷ್ಠಿಗೆ ಹೈಕಮಾಂಡ್ ನೋ ಎಂದರೆ ಅನಿವಾರ್ಯವಾಗಿ ಅಶ್ವತ್ಥ ನಾರಾಯಣ ಅವರ ಡಿಸಿಎಂ ಸ್ಥಾನಕ್ಕೆ  ಕುತ್ತು ಗ್ಯಾರಂಟಿ ಆಗಲಿದೆ.

Leave a Reply