ದಾವೋಸ್ ನಿಂದ ಬರುತ್ತಿದ್ದಂತೆ ಬಿಎಸ್ ವೈಗೆ ಸಂಪುಟ ಅಗ್ನಿ ಪರೀಕ್ಷೆ!

ಡಿಜಿಟಲ್ ಕನ್ನಡ ಟೀಮ್:

ದಾವೋಸ್ ಪ್ರವಾಸ ಮುಗಿಸಿಕೊಂಡು ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯಕ್ಕೆ ವಾಪಸ್ಸಾಗುತ್ತಿದ್ದು, ಅವರು ಮರಳುತ್ತಿದ್ದಂತೆ ಸಂಪುಟ ವಿಸ್ತರಣೆಯ ಅಗ್ನಿ ಪರೀಕ್ಷೆ ಎದುರಿಸಬೇಕಿದೆ.

ಬಿಜೆಪಿ ಸರ್ಕಾರ ರಚನೆಯ ರೂವಾರಿಗಳಾದ 15 ಶಾಸಕರು ಅನರ್ಹರಿಂದ ಅರ್ಹರಾಗಿ ಒಂದೂವರೆ ತಿಂಗಳೇ ಕಳೆದಿವೆ. ಕ್ರಿಸ್ ಮಸ್, ಹೊಸ ವರ್ಷ, ಸಂಕ್ರಾಂತಿ, ಅಮಿತ್ ಶಾ ರಾಜ್ಯ ಪ್ರವಾಸ ಹೀಗೆ ಒಂದಾದ ಮೇಲೊಂದು ಗಡವುಗಳನ್ನು ದಾಟುತ್ತಾ ಬಂದಿರುವ ಸಂಪುಟ ವಿಸ್ತರಣೆ ಈಗ ದಾವೋಸ್ ಪ್ರವಾಸದಿಂದ ಸಿಎಂ ವಾಪಸ್ ಬರುವವರೆಗೂ ಬಂದು ನಿಂತಿದೆ.

ಈಗಾಗಲೇ ನೂತನ ಶಾಸಕರಲ್ಲಿ ತಾಳ್ಮೆ ಖಾಲಿಯಾಗಿ ಕೋಪ ತುಂಬಿ ತುಳುಕುತ್ತಿದೆ. ಆದರೆ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಿದೆ ತಮ್ಮದೇ ಮಾನ ಹರಾಜಾಗುತ್ತದಲ್ಲಾ ಎಂಬ ಹತಾಶೆಯಲ್ಲಿ ಬಾಯಿಗೆ ಬೀಗ ಜಡಿದುಕೊಂಡು ಕೂತಿದ್ದಾರೆ.

ನಿಜ, ಅವರ ತಾಳ್ಮೆಗೂ ಇಂದು ಮಿತಿ ಇದೆ. ಮೈತ್ರಿ ಸರ್ಕಾರ ಬೀಳಿಸುವಾಗ ತಾವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗಲೇ ನೀವು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೀರಿ ಎಂದು ಯಡಿಯೂರಪ್ಪ ಹಾರಿಸಿದ ಕಲರ್ ಕಲರ್ ಕಾಗೆಯನ್ನು ನಂಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ರಾಜೀನಾಮೆ ನೀಡಿದ ನಂತರ ಸುಪ್ರೀಂಕೋರ್ಟ್ ಗೆ ಪೆರೇಡ್ ಮಾಡುವಷ್ಟರಲ್ಲೇ ಅರ್ಧ ಜೀವವಾಗಿದ್ದ ಶಾಸಕರು ಯಡಿಯೂರಪ್ಪ ಕೃಪಾಕಟಾಕ್ಷದಿಂದ ಮತ್ತೆ ಗೆದ್ದು ಹೊಸ ಚೈತನ್ಯ ತುಂಬಿಕೊಂಡರು. ಗೆದ್ದ ಕ್ಷಣದಿಂದಲೇ, ನಾನು ಯಾವ ಮಂತ್ರಿ ಕುರ್ಚಿ ಮೇಲೆ ಕೂರುತ್ತೀನಿ ಅಂತಾ ಕನಸು ಕಾಣುತ್ತಿರುವ ನೂತನ ಶಾಸಕರಿಗೆ, ಯಡಿಯೂರಪ್ಪ ವರ್ಸಸ್ ಬಿಜೆಪಿ ಹೈಕಮಾಂಡ್ ನಡುವಣ ತಿಕ್ಕಾಟ ಕೈಗೆ ಸಿಕ್ಕಿರುವ ತುತ್ತು ಎಲ್ಲಿ ಬಾಯಿಗೆ ಬರದೇ ಹೋಗುತ್ತದೋ ಎಂಬ ಆತಂಕ ಮೂಡುವಂತೆ ಮಾಡಿದೆ.

ಈ ಮಧ್ಯೆ ಗೆದ್ದಿರುವ 15 ಶಾಸಕರಲ್ಲಿ ಅರ್ಹ 6 ಜನರಿಗೆ ಮಾತ್ರ ಮಂತ್ರಿ ಸ್ಥಾನ ನೀಡುವುದಾಗಿ ಹೈಕಮಾಂಡ್ ಸೂಚಿಸಿದೆ ಎಂಬ ಸುದ್ದಿ ಯಡಿಯೂರಪ್ಪ ಅವರನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಮಧ್ಯೆ ಮಸ್ಕಿ ಹಾಗೂ ರಾಜರಾಜೇಶ್ವರಿ ಮಾಜಿ ಶಾಸಕರು ತಮ್ಮ ಭವಿಷ್ಯ ಎತ್ತ ಸಾಗಲಿದೆ ಎಂಬ ಕನಿಷ್ಠ ಸೂಚನೆ ದೊರೆಯದೆ ಒದ್ದಾಡುತ್ತಿದ್ದಾರೆ. ಇನ್ನು ಸೋತಿರುವ ಎಂಟಿಬಿ ಹಾಗೂ ವಿಶ್ವನಾಥ್ ತಮಗೂ ಮಂತ್ರಿಗಿರಿ ಬೇಕು ಅಂತಾ ಪಟ್ಟು ಹಿಡಿದಿದ್ದು, ಯಡಿಯೂರಪ್ಪ ಸ್ಥಿತಿ ಏನಾಗಲಿದೆ? ಎಂಬ ಪ್ರಶ್ನೆ ಹುಟ್ಟುಹಾಕಿದೆ.

Leave a Reply