ವಲಸಿಗರ ಋಣ ಸಂದಾಯಕ್ಕೆ ಬಿಜೆಪಿಯಲ್ಲಿ ನಡೆಯುತ್ತಿದೆ ತ್ಯಾಗದ ಚರ್ಚೆ!

ಡಿಜಿಟಲ್ ಕನ್ನಡ ಟೀಮ್:

ಸದ್ಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ತ್ಯಾಗಿಗಳ ಸರ್ಕಾರ ಎಂದರೆ ತಪ್ಪಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ 17 ಶಾಸಕರ ತ್ಯಾಗದಿಂದ ರಚಿತವಾದ ಯಡಿಯೂರಪ್ಪ ಅವರ ಸರ್ಕಾರ ಈಗ ಅವರ ಋಣ ಸಂದಾಯಕ್ಕೆ ಈಗ ಹಾಲಿ ಸಚಿವರ ತ್ಯಾಗವನ್ನು ಬಯಸುತ್ತಿದೆ.

ಬಿಡಿಸಲಾಗದ ಸುಕ್ಕಿನಂತೆ ಯಡಿಯೂರಪ್ಪನವರಿಗೆ ತಲೆ ಬಿಸಿ ತಂದಿರುವ ಸಚಿವ ಸಂಪುಟ ವಿಸ್ತರಣೆ ಯಾವ ದಿಕ್ಕಿನಲ್ಲಿ ಸಾಗುತ್ತದೆ, ಇದರ ಪರಿಣಾಮ ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಈಗಲೇ ಊಹಿಸೋದು ಕಷ್ಟ. ಅಧಿಕಾರದಲ್ಲಿದ್ದ ಪಕ್ಷವನ್ನು ತೊರೆದು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡುವ ಜವಾಬ್ದಾರಿ ಸಿಎಂ ಯಡಿಯೂರಪ್ಪ ಅವರದ್ದು.

ಈ ಜವಾಬ್ದಾರಿಯಲ್ಲಿ ಎಲ್ಲಾ ನಿರ್ಣಯಗಳನ್ನು ಯಡಿಯೂರಪ್ಪನವರೆ ಕೈಗೊಳ್ಳುವುದಾಗಿದ್ದರೆ ಇಷ್ಟುಹೊತ್ತಿಗಾಗಲೇ ಸಚಿವ ಸಂಪುಟ ವಿಸ್ತರಣೆ ನೀರು ಕುಡಿದಷ್ಟು ಸಲೀಸಾಗಿ ನಡೆಯುತ್ತಿತ್ತು. ಆದರೆ ಕೇಂದ್ರ ನಾಯಕರು ಹಾಗೂ ಆರೆಸ್ಸೆಸ್ ಮುಖಂಡರ ಹಸ್ತಕ್ಷೇಪ ಹಾಗೂ ಷರತ್ತುಗಳು ಇದನ್ನು ಬೆಟ್ಟದಂತ ಸಮಸ್ಯೆಯನ್ನಾಗಿ ಮಾಡಿದೆ.

ಹೀಗಾಗಿ ಈಗ ಮಂತ್ರಿ ಸ್ಥಾನದಲ್ಲಿ ಕೂತಿರುವ ಅನೇಕರು ಅಧಿಕಾರ ತ್ಯಾಗ ಯಡಿಯೂರಪ್ಪನವರಿಗೆ ಅಗತ್ಯವಿದೆ. ಹೀಗಾಗಿ ಸದ್ಯ ಬಿಜೆಪಿಯಲ್ಲಿ ತ್ಯಾಗದ ಮಾತು ಜೋರಾಗಿಯೇ ಕೇಳಿಬರುತ್ತಿದೆ.

ತುಮಕೂರಿನಲ್ಲಿ ಮಾತನಾಡಿರುವ ಸಚಿವ ಮಾಧುಸ್ವಾಮಿ ಸರ್ಕಾರ ಉಳಿಯಲು ತಾವು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ ಎಂದಿದ್ದಾರೆ.

ಇನ್ನು ವಿಜಯಪುರದಲ್ಲಿ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ್​, ಹೊಸ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿದೆ. ಸಿಎಂ ಈ ಮಾತು ಉಳಿಸಿಕೊಳ್ಳುವ ವಿಶ್ವಾಸವಿದೆ. ಇದಕ್ಕಾಗಿ ಪಕ್ಷದಲ್ಲಿ ಈಗಾಗಲೇ ಹುದ್ದೆಯ ಲಾಭ ಅನುಭವಿಸಿದವರು ಪದತ್ಯಾಗಕ್ಕೆ ಮುಂದಾಬೇಕು ಎಂದು ಕರೆ ನೀಡಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಇನ್ನು ಎಷ್ಟು ಜನರ ತ್ಯಾಗ ನಿರೀಕ್ಷಿಸುತ್ತಿದೆ, ಅದರಲ್ಲಿ ಎಷ್ಟು ಜನ ತ್ಯಾಗ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.

Leave a Reply