ಮಾತು ತಪ್ಪಿ ಯಡಿಯೂರಪ್ಪ ಆಗ್ತಾರಾ ವಚನಭ್ರಷ್ಟ?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಚನಭ್ರಷ್ಟ ಎಂಬ ಆರೋಪ ಮಾಡಿ 2008ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಎಸ್ ಯಡಿಯೂರಪ್ಪ ಈಗ ಅದೇ ವಚನಭ್ರಷ್ಟ ಹಣೆಪಟ್ಟಿಯನ್ನು ತಾವು ಕಟ್ಟಿಕೊಳ್ಳುವರೇ ಎಂಬ ಪ್ರಶ್ನೆ ಸದ್ಯ ಉದ್ಭವಿಸಿದೆ.

ಕಾಂಗ್ರೆಸ್‌, ಜೆಡಿಎಸ್‌ ತೊರೆದು ಮಂತ್ರಿಗಿರಿಗಾಗಿ ಬಿಜೆಪಿಯ ಆಪರೇಷನ್‌ ಕಮಲಕ್ಕೆ ತುತ್ತಾದ ನಾಯಕರಲ್ಲಿ ಇದೀಗ 12 ಮಂದಿ ಅರ್ಹರಾಗಿದ್ದಾರೆ. ಆ 12 ಜನರಿಗೆ ಸಚಿವ ಸ್ಥಾನ ಕೊಡ್ತೇವೆ ಅನ್ನೋದು ಬಿಜೆಪಿಯ ಆಶ್ವಾಸನೆ. ಸ್ವತಃ ಯಡಿಯೂರಪ್ಪ, ಜನವರಿ 24ರ ಮಧ್ಯಾಹ್ನ 3.30ರ ವೇಳೆಗೆ ದಾವೋಸ್‌ ಪ್ರವಾಸ ಮುಗಿಸಿ ವಾಪಸ್‌ ಬೆಂಗಳೂರಿಗೆ ಬಂದಿಳಿದರು. ಈ ವೇಳೆ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಮುಂದಿನ ಮೂರು ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡ್ತೇವೆ. ಸೋತವರಿಗೆ ಸದ್ಯಕ್ಕೆ ಸಚಿವ ಸ್ಥಾನವಿಲ್ಲ. ಗೆದ್ದವರಿಗೆ ಸಚಿವ ಸ್ಥಾನ ಕೊಡ್ತೇವೆ. ಅಮಿತ್‌ ಶಾ ಕೂಡ ಬೆಂಗಳೂರಿಗೆ ಆಗಮಿಸುತ್ತಾರೆ. ಅವರ ಜೊತೆಗೂ ಚರ್ಚೆ ಮಾಡ್ತೇನೆ ಎಂದಿದ್ದರು.

ಆದ್ರೆ ಅಮಿತ್‌ ಶಾ ಬೆಂಗಳೂರಿಗೆ ಬರಲೂ ಇಲ್ಲ, ಯಡಿಯೂರಪ್ಪ ದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯನ್ನೂ ನಡೆಸಲಿಲ್ಲ. ಬದಲಿಗೆ ಜಿಲ್ಲಾ ಪ್ರವಾಸ ಕೈಗೊಂಡು ಬೆಂಗಳೂರಿನಲ್ಲಿ ಅರ್ಹ ಶಾಸಕರ ಕೈಗೂ ಸಿಗದೆ ಓಡಾಡ್ತಿದ್ದಾರೆ. ಆದ್ರೆ ಯಡಿಯೂರಪ್ಪ ಕೊಟ್ಟಿದ್ದ ವಾಗ್ದಾನ ಇಂದು ಮಧ್ಯಾಹ್ನ 3.30ಕ್ಕೆ ಮುಕ್ತಾಯವಾಗಿದೆ.

ಆದ್ರೆ ಇವತ್ತು ಹಾಸನ ಹಾಗು ಕೊಡಗಿನಲ್ಲಿ ಮಾತನಾಡಿರುವ ಯಡಿಯೂರಪ್ಪ, ಮತ್ತೊಂದು ಗಡುವು ಕೊಟ್ಟು ಕೊಂಡಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡ್ತೇವೆ ಎಂದಿದ್ದಾರೆ. ಇಂದಿನ ಗಡುವು ಏನಾಯ್ತು ಅನ್ನೋ ಪ್ರಶ್ನೆಗೆ ಸಿಎಂ ಯಡಿಯೂರಪ್ಪ ಬಳಿ ಉತ್ತರವಿಲ್ಲ. ಸ್ವತಃ ಬಿಜೆಪಿ ಹೈಕಮಾಂಡ್‌ ದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಲು ಅವಕಾಶ ಕೊಟ್ಟಿಲ್ಲ. ಅದೇ ಕಾರಣದಿಂದ ಮುಂದೇನು ಅನ್ನೋ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಆದ್ರೆ ಬಿಜೆಪಿ ಹೈಕಮಾಂಡ್ ಸಂಪುಟಕ್ಕೆ ಯಾರೆಲ್ಲಾ ಸೇರಬೇಕು ಅನ್ನೋ ಬಗ್ಗೆ ಪಟ್ಟಿ ರವಾನೆ ಮಾಡುತ್ತೆ ಎನ್ನಲಾಗಿದೆ.

ಕಾಂಗ್ರೆಸ್‌, ಜೆಡಿಎಸ್‌ ಬಿಟ್ಟು ಬಂದ 17 ಜನರನ್ನು ಮಂತ್ರಿ ಮಾಡೋ ಮಾತನ್ನು ನಡೆಸಲು ಸಾಧ್ಯವೇ ಇಲ್ಲ. ಯಾಕಂದ್ರೆ ಈಗಾಗಲೇ ಇಬ್ಬರು ನಾಯಕರು ಸೋತಿದ್ದಾರೆ. ಇನ್ನಿಬ್ಬರು ಶಾಸಕರಿಗೆ ಚುನಾವಣಾ ಸ್ಪರ್ಧೆಯೇ ಸಾಧ್ಯವಾಗಿಲ್ಲ. ಪರಿಸ್ಥಿತಿ ಈಗಿರುವಾಗ ಎಲ್ಲರನ್ನು ಪರಿಷತ್‌ಗೆ ಆಯ್ಕೆ ಮಾಡುವ ಸಾಧ್ಯತೆಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರನ್ನೂ ಯಡಿಯೂರಪ್ಪ ಮಂತ್ರಿ ಮಾಡಲು ಹೇಗೆ ಸಾಧ್ಯ ಎಂಬುದರ ಜತೆಗೆ ಯಡಿಯೂರಪ್ಪ ವಚನಭ್ರಷ್ಟ ಆಗ್ತಾರಾ ಅನ್ನೋ ಪ್ರಶ್ನೆಯೂ ಮೂಡಿದೆ.

Leave a Reply