ಸಂಬಂಧಗಳ ಮಧ್ಯೆ ಹುಳಿ ಹಿಂಡುತ್ತಿದೆಯಾ ಸಚಿವ ಸಂಪುಟ ವಿಸ್ತರಣೆ ಪ್ರಹಸನ!?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಹಸನ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿದೆ. ಈ ವಿಚಾರ ಸಂಬಂಧಿಕರಾದ ಕೆಆರ್ ಪುರಂ ಶಾಸಕ ಭೈರತಿ ಬಸವರಾಜ್ ಹಾಗೂ ರಾಣೆಬೆನ್ನೂರು ಮಾಜಿ ಶಾಸಕ ಆರ್.ಶಂಕರ್ ನಡುವೆ ಸಂಬಂಧಕ್ಕೆ ಹುಳಿ ಹಿಂಡುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ.

ಹೌದು, ಬೆಂಗಳೂರಿನ ಕೆ.ಆರ್ ಪುರಂ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಸಂಪುಟಕ್ಕೆ ಸೇರ್ಪಡೆ ಆಗೋದು ಬಹುತೇಕ ಖಚಿತ. ಇನ್ನು ಉಪ-ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷದ ನಿರ್ಧಾರಕ್ಕೆ ಬದ್ಧರಾದ ಆರ್. ಶಂಕರ್‌ಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಇದೀಗ ಆರ್ ಶಂಕರ್ ಅವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡುವುದು ಅನುಮಾನವಾಗಿದ್ದು, ಸಂಪುಟಕ್ಕೆ ಸೇರಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಕಾರಣದಿಂದ ಆರ್ ಶಂಕರ್ ಅವರನ್ನು ಸಮಾಧಾನ ಮಾಡುವ ಜವಾಬ್ದಾರಿಯನ್ನು ಬೈರತಿ ಬಸವರಾಜು ಅವರಿಗೆ ವಹಿಸಲಾಗಿದೆ.

ಈಗ ಆರ್.ಶಂಕರ್ ಶಾಸಕರು ಅಲ್ಲ, ವಿಧಾನಪರಿಷತ್ ಸದಸ್ಯರು ಅಲ್ಲ. ರಿಜ್ವಾನ್ ಅರ್ಷದ್ ಅವರು ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಒಂದು ಸ್ಥಾನ ಖಾಲಿಯಾಗಿದ್ದು, ಆ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿ ಎಂದು ಶಂಕರ್ ದುಂಬಾಲು ಬಿದ್ದಿದ್ದಾರೆ. ಆದ್ರೆ ಇರುವ ಒಂದೇ ಒಂದು ಪರಿಷತ್ ಸ್ಥಾನಕ್ಕೆ ಲಕ್ಷ್ಮಣ್ ಸವದಿ ಆಯ್ಕೆ ಮಾಡಬೇಕು ಎಂದು ಹೈಕಮಾಂಡ್ ಫರ್ಮಾನು ಹೊರಡಿಸಿದೆ. ಇದರಿಂದ ಇಕ್ಕಟ್ಟಿಗೆ ಸಿಲುಕಿರುವ ಸಿಎಂ ಯಡಿಯೂರಪ್ಪ, ಆರ್ ಶಂಕರ್ ಸಮಾಧಾನ ಮಾಡುವ ಮೂಲಕ ಸಂಪುಟ ವಿಸ್ತರಣೆ ಸುಗಮವಾಗಿ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಇಬ್ಬರು ಸಂಬಂಧಿಕರಾಗಿರುವ ಹಿನ್ನೆಲೆಯಲ್ಲಿ ಆರ್ ಶಂಕರ್ ಮನವೊಲಿಕೆ ಮಾಡೋದು ನಿಮ್ಮ ಜವಾಬ್ದಾರಿ ಎಂದಿದ್ದಾರೆ.

ಬೈರತಿ ಬಸವರಾಜು ಹಾಗೂ ಆರ್. ಶಂಕರ್ ಇಬ್ಬರು ಕುರುಬ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದಾರೆ. ಸಂಬಂಧಿಕರೂ ಹೌದು.

ಆರ್.ಶಂಕರ್ ಅವರ ಸಹೋದರಿಯನ್ನು ಬೈರತಿ ಬಸವರಾಜು ಮದುವೆಯಾಗಿದ್ದಾರೆ. ಸಂಬಂಧದಲ್ಲಿ ಆರ್.ಶಂಕರ್ ಹಾಗೂ ಬೈರತಿ ಬಸವರಾಜು ಭಾವ- ಭಾಮೈದ ಆಗಿದ್ದಾರೆ. ಸದ್ಯ ಬೈರತಿ ಬಸವರಾಜುಗೆ ಸಂಪುಟದಲ್ಲಿ ಸ್ಥಾನ ಕೊಟ್ಟು, ಅವರ ಮೂಲಕ ಆರ್.ಶಂಕರ್‌ರನ್ನು ಸಮಾಧಾನಪಡಿಸಲು ತಂತ್ರ ರೂಪಿಸಿದ್ದಾರೆ ಯಡಿಯೂರಪ್ಪ. ರಾಜಕೀಯದಲ್ಲಿ ಸಂಬಂಧ ಹಾಗೂ ಅಧಿಕಾರವನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಕಷ್ಟ ಎಂಬುದನ್ನು ಈಗಾಗಲೇ ಅನೇಕ ಪ್ರಕರಣಗಳಲ್ಲಿ ನೋಡಿದ್ದೇವೆ.

ಆರ್ ಶಂಕರ್ ಅವರು ತಮ್ಮ ತ್ಯಾಗಕ್ಕೆ ತಕ್ಕಂತೆ ಮಂತ್ರಿ ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈಗಾಗಲೇ ಸಮಾಧಾನ ಮಾಡಲು ಮುಂದಾಗಿರುವ ಬೈರತಿ ಬಸವರಾಜು ಮೇಲೆ ಆರ್ ಶಂಕರ್ ಕೋಪ ಪ್ರದರ್ಶನ ಮಾಡಿದ್ದಾರೆ ಎನ್ನಲಾಗಿದೆ. ನಾನು ಮಿನಿಸ್ಟರ್ ಆಗಿದ್ದವನು. ನಿಮ್ಮ ಮಾತನ್ನು ಕೇಳಿ ಸರ್ಕಾರಕ್ಕೆ ರಾಜೀನಾಮೆ ಕೊಟ್ಟು ಬಂದೆ. ನನ್ನ ಪರವಾಗಿ ನಿಲ್ಲ ಬೇಕಾದ ನೀವೇ ಹೀಗೆ ಸಮಾಧಾನ ಮಾಡಲು ಮುಂದಾಗಿರೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಒಟ್ಟಿನಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮೇಲಾಟ ಸಂಬಂಧಗಳನ್ನು ಹಳಸುವಂತೆ ಮಾಡುವ ಮಟ್ಟಕ್ಕೆ ತಲುಪಿರುವುದು ಖಚಿತವಾಗಿದೆ.

Leave a Reply