ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ!?

ಡಿಜಿಟಲ್ ಕನ್ನಡ ಟೀಮ್:

ದಾವೋಸ್ ಪ್ರವಾಸದಿಂದ ವಾಪಸ್ಸಾದ ಬಳಿಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇದೇ ತಿಂಗಳ ಅಂತ್ಯಕ್ಕೆ ಅಂದರೆ 29ಕ್ಕೆ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಮಗದೊಮ್ಮೆ ಸಂಪುಟ ವಿಸ್ತರಣೆ ದಿನಾಂಕ ಇದೇ 31ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಆರೆಸ್ಸೆಸ್ ನಾಯಕ ಬಿಎಲ್ ಸಂತೋಷ್ ಜತೆ ಮಾತುಕತೆ ನಡೆಸಿದ ಯಡಿಯೂರಪ್ಪ ಹೈಕಮಾಂಡ್ ಗೆ ನೂತನ ಸಚಿವರ ಪಟ್ಟಿ ರವಾನಿಸಿದ್ದರು. ಇದಕ್ಕೆ ಹೈಕಮಾಂಡ್ ಒಪ್ಪಿಗೆ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದ ಯಡಿಯೂರಪ್ಪ ಜ್ಯೋತಿಷ್ಯರ ಸಲಹೆ ಮೇರೆಗೆ ನಾಳೆ ಸಚಿವ ಸಂಪುಟ ವಿಸ್ತರಣೆಗೆ ದಿನ ಫಿಕ್ಸ್ ಮಾಡಿದ್ದರು. ಆದರೆ ಹೈಕಮಾಂಡ್ ನಿಂದ ಇನ್ನು ಒಪ್ಪಿಗೆ ಬಾರದ ಕಾರಣ ನಾಳೆ ಸಚಿವ ಸಂಪುಟ ವಿಸ್ತರಣೆ ಬಹುತೇಕ ಅನುಮಾನ.

ಸದ್ಯ ಶಿವಮೊಗ್ಗ ಜಿಲ್ಲೆ ಪ್ರವಾಸದಲ್ಲಿರುವ ಯಡಿಯೂರಪ್ಪ 30ರಂದು ದೆಹಲಿಗೆ ತೆರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ ಹೈಕಮಾಂಡ್ ಭೇಟಿಗೆ ಸಮಯ ನೀಡುತ್ತಾ, ಸಮಯ ನೀಡಿದರೂ ಸಂಪುಟ ವಿಸ್ತರಣೆಯ ಯಡಿಯೂರಪ್ಪ ಅವರ ಸೂತ್ರಕ್ಕೆ ಒಪ್ಪುತ್ತಾ ಎಂಬ ಅನುಮಾನ ಇನ್ನು ಕಾಡುತ್ತಲೇ ಇದೆ. ಗುರುವಾರ ಯಡಿಯೂರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈಗಾಗಲೇ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಹೈರಾಣಾಗಿರುವ ಯಡಿಯೂರಪ್ಪ ಅವರಿಗೆ ರಿಜ್ವಾನ್ ಹರ್ಷದ್ ರಿಂದ ತೆರವಾದ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದೇ ದೊಡ್ಡ ಸವಾಲಾಗಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯನ್ನು ಮೇಲ್ಮನೆಗೆ ಆಯ್ಕೆ ಮಾಡಲು ಹೈಕಮಾಂಡ್ ಒಲವಾದರೆ ರಾಣೆಬೆನ್ನೂರು ಮಾಜಿ ಶಾಸಕ ಆರ್.ಶಂಕರ್ ಗೆಲ್ಲಿಸಿ ಮಂತ್ರಿ ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂಬುದು ಯಡಿಯೂರಪ್ಪನವರ ಇರಾದೆ. ಈ ವಿಚಾರದಲ್ಲೂ ಹೈಕಮಾಂಡ್ ವರ್ಸಸ್ ಯಡಿಯೂರಪ್ಪ ನಡುವೆ ಹಗ್ಗಜಗ್ಗಾಟ ಮುಂದುವರಿಯಲಿದ್ದು, ಯಾರು ಮೇಲುಗೈ ಸಾಧಿಸುವರು ಎಂಬ ಕುತೂಹಲ ಮೂಡಿದೆ.

Leave a Reply