ಗೂಡು ಕಳೆದುಕೊಂಡು ಕಂಗಾಲಾದ ಹಳ್ಳಿ ಹಕ್ಕಿ!

ಡಿಜಿಟಲ್ ಕನ್ನಡ ವಿಶೇಷ:

ಹಳ್ಳಿ ಹಕ್ಕಿ ಖ್ಯಾತಿಯ ಹಿರಿಯ ನಾಯಕ, ಮಾಜಿ ಸಚಿವ ಎಚ್ ವಿಶ್ವನಾಥ್ ರಾಜ್ಯ ರಾಜಕೀಯದಲ್ಲಿ ಈಗ ಗೂಡಿಲ್ಲದ ಹಕ್ಕಿಯಾಗಿದ್ದಾರೆ.

ಸಚಿವ ಸ್ಥಾನದ ದುರಾಸೆಗೆ ತಮ್ಮನ್ನು ಬೆಳಸಿದ ಕಾಂಗ್ರೆಸ್ ಹಾಗೂ ತನಗೆ ಆಶ್ರಯ ನೀಡಿ ಮತ್ತೆ ಶಾಸಕನಾಗಿ ಮಾಡಿ ರಾಜಕೀಯ ಪುನರ್ಜನ್ಮ ನೀಡಿದ ಜೆಡಿಎಸ್ ಗೆ ದ್ರೋಹ ಬಗೆದು ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ವಿಶ್ವನಾಥ್ ಈಗ ಬಿಜೆಪಿ ನಾಯಕರ ಪಾಲಿಗೂ ಆಟಕ್ಕುಂಟು ಲೆಕ್ಕಲ್ಲಿಲ್ಲದ ನಾಯಕನಾಗಿದ್ದಾರೆ.

ಮಂತ್ರಿ ಸ್ಥಾನದ ಬಗ್ಗೆ ಕಲರ್ ಕಲರ್ ಕನಸು ಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಿಶ್ವನಾಥ್, ಬಿಜೆಪಿ ನಾಯಕರ ಮಾತನ್ನೂ ಕೇಳದೆ ಉಪಚುನಾವಣೆಯಲ್ಲಿ ಮತ್ತೆ ಹುಣಸೂರಿನಲ್ಲಿ ಸ್ಪರ್ಧೆಗೆ ಇಳಿದರು. ವಿಶ್ವನಾಥ್ ಅವರು ಕುಮಾರಸ್ವಾಮಿಗೆ ದ್ರೋಹ ಬಗೆದಿದ್ದಾರೆ ಎಂದು ಭಾವಿಸಿದ ಹುಣಸೂರು ಜನತೆ ವಿಶ್ವನಾಥ್ ರನ್ನು ಮನೆಯಲ್ಲೇ ಕೂರಬೇಕು ಎಂದು ತೀರ್ಪು ಕೊಟ್ಟರು.

ಸೋತ ನಂತರವೂ ಮನಸ್ಸಿನಿಂದ ದೂರವಾಗದ ಮಂತ್ರಿಗಿರಿ ಮೇಲಿನ ವ್ಯಾಮೋಹ ವಿಶ್ವನಾಥ್ ಅವರನ್ನು ಯಡಿಯೂರಪ್ಪ ಅವರ ಮನೆ ಬಾಗಿಲ ಬಳಿ ನಿಲ್ಲುವಂತೆ ಮಾಡಿತು. ಈಗಾಗಲೇ ಹೈಕಮಾಂಡ್ ಅಸಹಕಾರ, ನೂತನ ಶಾಸಕರು, ಮೂಲ ಬಿಜೆಪಿ ನಾಯಕರು, ಪಂಚಮಸಾಲಿ ಮಠ ಸೇರಿ ಧಾರ್ಮಿಕ ಕೇಂದ್ರಗಳಿಂದ ಬರುತ್ತಿರುವ ಒತ್ತಡಗಳಿಂದ ಹೈರಾಣಾಗಿರುವ ಯಡಿಯೂರಪ್ಪ, ಸಧ್ಯಕ್ಕೆ ಸೋತವರಿಗೆ ಮಂತ್ರಿ ಸ್ಥಾನ ಇಲ್ಲ ಎಂದು ಕಡ್ಡಿ ತುಂಡಾಗುವಂತೆ ಹೇಳಿದ್ದಾರೆ. ಇನ್ನು ಇರುವ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಮಾಜಿ ಶಾಸಕ ಆರ್.ಶಂಕರ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ.

ಅದರೊಂದಿಗೆ ವಿಶ್ವನಾಥ್ ಅವರ ರಾಜಕೀಯ ಇನ್ನಿಂಗ್ಸ್ ಬಹುತೇಕ ಅಂತ್ಯಗೊಂಡಂತಾಗಿದೆ. ಯಡಿಯೂರಪ್ಪ ಅವರ ನೇರ ಹೇಳಿಕೆಯಿಂದ ಹೊಟ್ಟೆಗೆ ಬೆಂಕಿ ಬಿದ್ದವರಂತೆ ಕುದಿಯುತ್ತಿದ್ದಾರೆ. ಗೆದ್ದಿರುವ ಶಾಸಕರಲ್ಲೇ ಎಲ್ಲಾರಿಗೂ ಸಚಿವ ಸ್ಥಾನ ಸಿಗುವುದು ಅನುಮಾನವಾಗಿರುವ ಹೊತ್ತಲ್ಲಿ ಇನ್ನು ನನಗೆ ಬಿಜೆಪಿಯಲ್ಲಿ ಮೂರು ಕಾಸಿನ ಮರ್ಯಾದೆ ಸಿಗುವುದಿಲ್ಲ ಎಂಬ ಸತ್ಯ ಅರಿವಾಗಿದೆ. ಬಿಜೆಪಿ ಮಾತು ನಂಬಿ ಇದ್ದ ಸ್ಥಾನಮಾನವನ್ನು ಕಾಲಲ್ಲಿ ಒದ್ದು ಬಂದ ವಿಶ್ವನಾಥ್ ಈಗ ಬಿಜೆಪಿಯಲ್ಲಿ ಇದ್ದರೂ ಇಲ್ಲದಂತ ಪರಿಸ್ಥಿತಿಗೆ ಸಿಲುಕಿದ್ದಾರೆ.

1970ರ ದಶಕದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಸುದೀರ್ಘ 45 ವರ್ಷಗಳ ಕಾಲ ರಾಜಕೀಯ ಇನ್ನಿಂಗ್ಸ್ ಆಡಿದ್ದ ವಿಶ್ವನಾಥ್, ಕಳೆದ ಎರಡೂವರೆ ಮೂರು ವರ್ಷಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿಯಲ್ಲೂ ರಾಜಕೀಯ ಆಟವಾಡಿರುವ ವಿಶ್ವನಾಥ್ ಈಗ ಯಾರಿಗೂ ಬೇಡವಾಗಿದ್ದಾರೆ.

ತಾವು ಕಾಂಗ್ರೆಸ್ ಪಕ್ಷಕ್ಕೆ ಕರೆತಂದ ಸಿದ್ದರಾಮಯ್ಯ ತನ್ನ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂದು ಬೇಸತ್ತು ಮಾತೃ ಪಕ್ಷ ತೊರೆದ ವಿಶ್ವನಾಥ್ ಜೆಡಿಎಸ್ ಸೇರ್ಪಡೆಗೊಂಡರು. ದೇವೇಗೌಡರಿಗೆ ಸಿದ್ದರಾಮಯ್ಯ ಮೇಲಿರುವ ದ್ವೇಷವನ್ನು ಬಳಸಿಕೊಂಡ ವಿಶ್ವನಾಥ್ ಕೇವಲ ಶಾಸಕ ಮಾತ್ರವಲ್ಲ ಜೆಡಿಎಸ್ ರಾಜ್ಯಾಧ್ಯಕ್ಷರಾಗಿಯೂ ಆಯ್ಕೆ ಆದರು. ಆದರೆ ವೈಯಕ್ತಿಕ ಲಾಭದ ಲೆಕ್ಕಾಚಾರಕ್ಕೆ ಗಂಟುಬಿದ್ದ ವಿಶ್ವನಾಥ್ ಆಪರೇಷನ್ ಕಮಲಕ್ಕೆ ಬಲಿಯಾದರು.

ಈಗ ಬಿಜೆಪಿಯಲ್ಲಿ ಕಾಲ ಕಸದಂತೆ ಇರಲೂ ಸಾಧ್ಯವಾಗದೇ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ತಮ್ಮ ಮುಖ ತೋರಿಸಲು ಆಗದೆ ವಿಶ್ವನಾಥ್ ಕಂಗಾಲಾಗಿದ್ದಾರೆ.

Leave a Reply