ಯಾರಿಗೂ ಇಲ್ಲ ಡಿಸಿಎಂ ಪೋಸ್ಟ್! ಬಿಎಸ್ ವೈಗೆ ಹೈಕಮಾಂಡ್ ಹೊಸ ಡೋಸ್?

ಡಿಜಿಟಲ್ ಕನ್ನಡ ಟೀಮ್:

ಸಿಎಂ ಯಡಿಯೂರಪ್ಪ ಅವರ ದುರಾದೃಷ್ಟವೋ ಅಥವಾ ರಾಜ್ಯದ ಜನರ ಹಣೆಬರಹವೋ ಗೊತ್ತಿಲ್ಲ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಅಭಿವೃದ್ಧಿ ಕಾರ್ಯ ಮತ್ತು ಜ್ವಲಂತ ಸಮಸ್ಯೆಗಳಿಗಿಂತ ಹೆಚ್ಚಾಗಿ ಸುದ್ದಿ ಮಾಡುತ್ತಿರೋದು ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ನಾಯಕರ ನಡುವಣ ತಿಕ್ಕಾಟ.

ನಾಳೆ ದೆಹಲಿಗೆ ತೆರಳಲಿದ್ದಾರೆ ಇದನ್ನು ಸ್ವತಃ ಸಿಎಂ ಯಡಿಯೂರಪ್ಪ ಖಚಿತಪಡಿಸಿದ್ದಾರೆ. ಆದ್ರೆ ಭೇಟಿಗೆ ಅವಕಾಶ ಸಿಗುತ್ತಾ ಇಲ್ಲವೋ ಎನ್ನುವ ಬಗ್ಗೆ ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಹೈಕಮಾಂಡ್ ಕೊಟ್ಟಿರುವ ಡೋಸ್ ಯಡಿಯೂರಪ್ಪ ಕಂಗಾಲಾಗುವಂತೆ ಮಾಡಿದೆ‌.

ಪ್ರಮಾಣ ವಚನ ಸ್ವೀಕಾರದಿಂದ ಈಗಿನ ಸಚಿವ ಸಂಪುಟ ವಿಸ್ತರಣೆವರೆಗೂ ಬಿಜೆಪಿ ಹೈಕಮಾಂಡ್ ಪ್ರತಿ ಹಂತದಲ್ಲೂ ಯಡಿಯೂರಪ್ಪ ಅವರನ್ನು ಇನ್ನಿಲ್ಲದಂತೆ ಗೋಳೋಯ್ಕೊತ್ತಿದೆ.

ಈಗ ನೂತನ ಶಾಸಕರು ಮತ್ತು ಮತ್ತು ಮೂಲ ಬಿಜೆಪಿ ನಾಯಕರಿಗೆ ಮಂತ್ರಿಗಿರಿ ನೀಡುವ ವಿಚಾರದಲ್ಲಿ ಯಡಿಯೂರಪ್ಪ ಅವರ ಸೂತ್ರವನ್ನು ಹೈಕಮಾಂಡ್ ಒಪ್ಪುತ್ತಿಲ್ಲ. ಹೈಕಮಾಂಡ್ ಸೂತ್ರವನ್ನು ಯಡಿಯೂರಪ್ಪ ಒಪ್ಪುತ್ತಿಲ್ಲ.

ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿರುವ ಲಕ್ಷ್ಮಣ ಸವದಿಯನ್ನು ಉಪಮುಖ್ಯಮಂತ್ರಿ ಆಗಿ ಮಾಡಲಾಗಿದೆ. ಇದೀಗ ರಮೇಶ್ ಜಾರಕಿಹೊಳಿಗೆ ಆ ಸ್ಥಾನ ಬಿಟ್ಟುಕೊಡುವಂತೆ ಮಾಡಲು ಬಿ.ಎಸ್ ಯಡಿಯೂರಪ್ಪ ಹರಸಾಹಸ ಮಾಡಿದ್ದರು. ಆದ್ರೆ ಸವದಿ ಬೆನ್ನಿಗೆ ನಿಂತ ಹೈಕಮಾಂಡ್, ಯಾವುದೇ ಕಾರಣಕ್ಕೂ ಲಕ್ಷ್ಮಣ ಸವದಿ ಸ್ಥಾನಕ್ಕೆ ಕುತ್ತು ಬರಬಾರದು. ಬೇಕಿದ್ದರೆ ನಿಮ್ಮ ಆಪ್ತರಿಗೆ ಕೊಡಲಾಗಿರುವ ಎರಡು ಡಿಸಿಎಂ ಸ್ಥಾನದಲ್ಲಿ ಒಂದನ್ನು ರಮೇಶ್ ಜಾರಕಿಹೊಳಿಗೆ ನೀಡಲು ನಮ್ಮ ತಕರಾರು ಇಲ್ಲ ಎಂದಿದೆ. ಜೊತೆಗೆ ನಾಲ್ಕನೇ ಡಿಸಿಎಂ ಸ್ಥಾನ ಸೃಷ್ಟಿಸಲು ಅವಕಾಶವಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಸಿಎಂ ಯಡಿಯೂರಪ್ಪ, ರಮೇಶ್ ಜಾರಕಿಹೊಳಿಗೆ ಮನವರಿಕೆ ಮಾಡಿಕೊಡುವ ಯತ್ನ ಮಾಡಿದ್ದು, ಸಾಹುಕಾರ್ ಬ್ರದರ್ಸ್ ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗಿದೆ. ನನಗೆ ಡಿಸಿಎಂ ಸ್ಥಾನ ಇಲ್ಲದಿದ್ದ ಮೇಲೆ ಬೆಳಗಾವಿಯಿಂದ ಆಯ್ಕೆಯಾಗಿರುವ ಮಹೇಶ್ ಕುಮಟಳ್ಳಿ ಹಾಗು ಶ್ರೀಮಂತ ಪಾಟೀಲ್ ಸಂಪುಟಕ್ಕೆ ಸೇರಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಇವತ್ತು ಬೆಳಗಾವಿಯಲ್ಲಿ ಸಿಎಂ ಕಾರ್ಯಕ್ರಮ ಇದ್ದರೂ ಜಾರಕಿಹೊಳಿ ಬ್ರದರ್ಸ್ ಗೈರಾಗುವ ಮೂಲಕ ಸಿಟ್ಟಿನ ಪ್ರದರ್ಶನ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಇಬ್ಬರೂ ಸಿಎಂ ಕಾರ್ಯಕ್ರಮಕ್ಕೆ ಗೈರಾಗಿ ಮುಜುಗರ ಮಾಡಿದ್ದಾರೆ. ಮಹೇಶ್ ಕುಮಟಳ್ಳಿ ಈ ಬಗ್ಗೆ ಮಾತನಾಡಿದ್ದು, ಸಿಎಂ ಯಡಿಯೂರಪ್ಪ ಜೊತೆಗೆ ಲಕ್ಷ್ಮಣ ಸವದಿ ಇದ್ದಾರೆ ಎನ್ನುವ ಮೂಲಕ ವ್ಯಂಗ್ಯವಾಡಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿರುವ ಸಿಎಂ ಯಡಿಯೂರಪ್ಪ, ನಾಳೆ ದೆಹಲಿಗೆ ಹೋಗಿ ರಾಷ್ಟ್ರೀಯ ಅಧ್ಯಕ್ಷರು ಹಾಗು ಅಮಿತ ಶಾ ಭೇಟಿ ಮಾಡ್ತೇನೆ. ಇನ್ನು ಎರಡು ದಿನದಲ್ಲಿ ಎಲ್ಲವೂ ಅಂತಿಮ ಆಗಲಿದೆ. ಬೆಳಗಾವಿಯಿಂದ ಗೆದ್ದ ಎಲ್ಲರೂ ಮಂತ್ರಿ ಆಗಲಿದ್ದಾರೆ. ಉಮೇಶ ಕತ್ತಿ ಸಹ ಮಂತ್ರಿ ಆಗಲಿದ್ದಾರೆ. ಗೆದ್ದವರ ಪೈಕಿ ಒಂದಿಬ್ಬರನ್ನು ಕೈ ಬಿಡುವ ಬಗ್ಗೆ ಚರ್ಚೆ ಇದೆ. ಮತ್ತೆ ಯಾರನ್ನು ಡಿಸಿಎಂ ಮಾಡೋ ಪ್ರಶ್ನೆಯೇ ಇಲ್ಲ. ದೆಹಲಿ ಹೋದ ಬಳಿಕ ಎಲ್ಲವು ಅಂತಿಮವಾಗಲಿದೆ ಎಂದಿದ್ದಾರೆ. ನಾನು ಯಾರನ್ನೂ ಕೈ ಬಿಡುವ ಪ್ರಶ್ನೆ ಇಲ್ಲ ಎಲ್ಲವೂ ವರಿಷ್ಠ ನಿರ್ಧಾರ ಎಂದು ಹೈಕಮಾಂಡ್‌ನತ್ತ ಬೊಟ್ಟು ಮಾಡಿದ್ದಾರೆ.

ಡಿಸಿಎಂ ಸ್ಥಾನ ಕೊಡಬೇಕು ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಡಿಸಿಎಂ ಹುದ್ದೆ ಸೃಷ್ಟಿಯಿಲ್ಲ ಎಂದು ಸಿಎಂ ಹೇಳಿದ ಬೆನ್ನಲ್ಲೇ ವಾಲ್ಮೀಕಿ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ. ರಮೇಶ್ ಜಾರಕಿಹೊಳಿ ಹಾಗು ಶ್ರೀರಾಮುಲುಗೆ ಡಿಸಿಎಂ ಸ್ಥಾನ ಸಿಗಲ್ಲ ಅಂತ ಸಿಎಂ ಹೇಳಿಕೆಯಿಂದ ಕನ್ಫರ್ಮ್ ಆದ ಹಿನ್ನೆಲೆಯಲ್ಲಿ ನಾಳೆ ವಾಲ್ಮೀಕಿ ಸಮುದಾಯದ ನಿಯೋಗದಿಂದ ಸಿಎಂ ಭೇಟಿಯಾಗಿ ಒತ್ತಾಯ ಮಾಡಲು ನಿರ್ಧಾರ ಮಾಡಿದ್ದಾರೆ.

Leave a Reply