ಐತಿಹಾಸಿಕ ಜಯದ ಜತೆ ದಾಖಲೆ ಬರೆಯಲು ಕೊಹ್ಲಿ, ರಾಹುಲ್ ಸಿದ್ಧ!

ಡಿಜಿಟಲ್ ಕನ್ನಡ ಟೀಮ್:

ಮೊದಲ ಬಾರಿಗೆ ಕಿವೀಸ್ ನೆಲದಲ್ಲಿ ಟಿ20 ಸರಣಿ ಗೆಲ್ಲಲು ಟೀಮ್ ಇಂಡಿಯಾ ಹಾತೊರೆಯುತ್ತಿರುವ ಬೆನ್ನಲ್ಲೇ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಇನ್ ಫಾರ್ಮ್ ಬ್ಯಾಟ್ಸ್ಮನ್ ರಾಹುಲ್ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಇದುವರೆಗೂ ಭಾರತ ತಂಡ ನ್ಯೂಜಿಲೆಂಡ್ ನಲ್ಲಿ ಟಿ20 ಸರಣಿ ಗೆದ್ದಿಲ್ಲ ಹೀಗಾಗಿ ಇಂದು ಹ್ಯಾಮಿಲ್ಟನ್ ನಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯ ಗೆದ್ದು ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಅದರೊಂದಿಗೆ ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗಲು ನಿರ್ಧರಿಸಿದೆ.

ಇನ್ನು ವೈಯಕ್ತಿಕ ದಾಖಲೆಗಳ ಬಗ್ಗೆ ನೋಡುವುದಾದರೆ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 25 ರನ್ ಗಳಿಸಿದರೆ ಟಿ20 ಕ್ರಿಕೆಟ್ ನಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರನಾಗಲಿದ್ದಾರೆ. ಸದ್ಯ 1088 ರನ್ ಗಳಿಸಿರುವ ಕೊಹ್ಲಿ, ಧೋನಿಯನ್ನು ಹಿಂದಿಕ್ಕಲು ಸಿದ್ಧರಾಗಿದ್ದಾರೆ. ಇನ್ನು ವಿಶ್ವ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ 3ನೇ ಸ್ಥಾನ ಪಡೆಯಲಿದ್ದು, ದಕ್ಷಿಣ ಆಫ್ರಿಕಾ ನಾಯಕ ಫಫ್ ಡುಪ್ಲೆಸಿಸ್ 1273 ರನ್ ಗಳೊಂದಿಗೆ ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 1148 ರನ್ ಗಳೊಂದಿಗೆ ಅಗ್ರ 2 ಸ್ಥಾನ ಪಡೆದಿದ್ದಾರೆ.

ಕೊಹ್ಲಿ ಅರ್ಧ ಶತಕ ಬಾರಿಸಿದರೆ ಟಿ20ಯಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ನಾಯಕ ಎಂಬ ಹಿರಿಮೆಗೆ ಪಾತ್ರರಾಗಳಿದ್ದಾರೆ. ಸದ್ಯ 8 ಅರ್ಧ ಶತಕ ಬಾರಿಸಿರುವ ಕೊಹ್ಲಿ, ಫಫ್ ಹಾಗೂ ವಿಲಿಯಮ್ಸನ್ ಜತೆ ಜಂಟಿ ಸ್ಥಾನದಲ್ಲಿದ್ದಾರೆ.

ಇನ್ನು ಕೆ.ಎಲ್ ರಾಹುಲ್ ಈ ಪಂದ್ಯದಲ್ಲೂ ಅರ್ಧ ಶತಕ ಬಾರಿಸಿದರೆ ಟಿ20 ಕ್ರಿಕೆಟ್ ನಲ್ಲಿ ಸತತ ನಾಲ್ಕು ಅರ್ಧ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವಿಂಡೀಸ್ ದೈತ್ಯ ಬ್ಯಾಟ್ಸ್ಮನ್ ಕ್ರಿಸ್ ಗೇಲ್, ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಂ ಅವರ ಜತೆ ಸೇರಲಿದ್ದಾರೆ.

Leave a Reply