ಕೆಪಿಸಿಸಿ ಹುದ್ದೆಗೆ ಅರ್ಜಿ ಹಾಕಿಲ್ಲ, ಬೇರೆಯವರು ಅಡ್ಡಗಾಲು ಹಾಕುವ ಪ್ರಶ್ನೆ ಇಲ್ಲ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ನಾನು ಯಾವುದೇ ಹುದ್ದೆಗೆ ಅರ್ಜಿ ಹಾಕಿಲ್ಲ, ಯಾರ ಜತೆಗೂ ಸ್ಪರ್ಧೆ ಮಾಡುತ್ತಿಲ್ಲ. ಹೀಗಾಗಿ ನನಗೆ ಯಾರೂ ಅಡ್ಡಗಾಲು ಹಾಕುವ ಪ್ರಶ್ನೆ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಗೋಪಾಲದಲ್ಲಿ ಶ್ರೀ ದುರ್ಗಾದೇವಿ ಜಾತ್ರೆಯಲ್ಲಿ ಭಾಗವಹಿಸಲು ಬುಧವಾರ ಗುಲ್ಬರ್ಗಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಿವಕುಮಾರ್ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಯ್ಕೆ ವಿಳಂಬ ಹಾಗೂ ಶಿವಕುಮಾರ್ ಆಯ್ಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಡ್ಡಗಾಲು ಹಾಕುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ದಿನೇಶ್ ಗುಂಡೂರಾವ್ ಹಾಗೂ ವಿರೋಧಪಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಉಪ ಚುನಾವಣೆ ಫಲಿತಾಂಶದಿಂದ ಬೇಸರಗೊಂಡು ಅವರು ರಾಜೀನಾಮೆ ನೀಡಿದ್ದು, ಪಕ್ಷ ಅದನ್ನು ಅಂಗೀಕಾರ ಮಾಡಿಲ್ಲ. ಹೀಗಾಗಿ ಪಕ್ಷದಲ್ಲಿ ಯಾವುದೇ ಸ್ಥಾನ ಖಾಲಿ ಇಲ್ಲ ಎಂದರು.

ನಾನು ದೆಹಲಿಗೆ ಆಗಾಗ್ಗೆ ಹೋಗುತ್ತಿರುತ್ತೇನೆ. ಇದರಲ್ಲಿ ವಿಶೇಷ ಏನಿಲ್ಲ. ನಾನು ಯಾವುದೇ ಹುದ್ದೆಗೆ ಅರ್ಜಿ ಹಾಕಿಲ್ಲ. ಯಾರ ಜತೆಗೂ ಸ್ಪರ್ಧೆ ಮಾಡುತ್ತಿಲ್ಲ. ಹೀಗಾಗಿ ನನಗೆ ಯಾರೂ ಕೂಡ ಅಡ್ಡಗಾಲು ಹಾಕುವ ಪ್ರಶ್ನೆ ಬರುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಮಾಡುವವನು ನಾನಲ್ಲ. ನಾನು ಆಯ್ಕೆ ಮಾಡುವುದಾಗಿದ್ದರೆ ಯಾವಾಗ ಆಯ್ಕೆ ಮಾಡಲಾಗುವುದು ಅಂತಾ ಹೇಳುತ್ತಿದ್ದೆ. ಆ ಕೆಲಸವನ್ನು ಪಕ್ಷ ಮಾಡುತ್ತದೆ.

ಟೆಂಪಲ್ ರನ್ ಮಾಡುತ್ತಿರೋದೇಕೆ ಎಂಬ ಪ್ರಶ್ನೆಗೆ, ‘ನಾನು ದೇವಸ್ಥಾನಗಳಿಗೆ ಭೇಟಿ ನೀಡುವುದು ಹೊಸತೇನಲ್ಲ. ನಮ್ಮ ಮನಃಶಾಂತಿ, ನೆಮ್ಮದಿಗೆ, ನಾಡಿನ ಜನರಿಗೆ ಒಳ್ಳೆಯದಾಗಲಿ ಅಂತಾ ಬೇಡಿಕೊಳ್ಳಲು ಹೋಗುತ್ತೇವೆ. ಕಳೆದ ವರ್ಷವೇ ದುರ್ಗಾದೇವಿ ಜಾತ್ರೆಗೆ ಹೋಗಬೇಕಿತ್ತು. ಕೆಲಸದ ಒತ್ತಡದಿಂದ ಹೋಗಲು ಸಾಧ್ಯವಾಗಿರಲಿಲ್ಲ. ಈ ವರ್ಷ ಬಿಡುವಿದ್ದ ಕಾರಣ ಬಂದಿದ್ದೇನೆ. ನಿಮ್ಮಂತ ಹಿತೈಷಿಗಳು ಹರಕೆ ಹೊತ್ತಿದ್ದಾರೆ. ಎಲ್ಲ ಹರಕೆ ತೀರಿಸಲು ಸಾಧ್ಯವಾಗದಿದ್ದರು ಸಾಧ್ಯವಾದಷ್ಟು ತೀರಿಸಲು ಪ್ರಯತ್ನಿಸುತ್ತೇನೆ’ ಎಂದರು.

ಇನ್ನು ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ, ‘ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಆ ಪಕ್ಷದ ವಿಚಾರ ನಮಗೇಕೆ ಬೇಕು. ಅವರು ಏನುಬೇಕಾದರೂ ಮಾಡಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲ’ ಎಂದು ಉತ್ತರಿಸಿದರು.

Leave a Reply