ಸಿಎಂಗೂ ಮುನ್ನ ದೆಹಲಿಗೆ ಆಕಾಂಕ್ಷಿಗಳು, ಸಿದ್ದರಾಮಯ್ಯ- ಜಾರಕಿಹೊಳಿ ಭೇಟಿ! ಏನಾಗ್ತಿದೆ ರಾಜ್ಯ ರಾಜಕೀಯದಲ್ಲಿ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಲೋಚನೆಯಲ್ಲಿ ಸಿಎಂ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳಸಿದ್ದಾರೆ. ಬೆಂಗಳೂರಿನಿಂದ ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆ ಭೇಟಿಗೆ ರಾತ್ರಿ 10 ಗಂಟೆಗೆ ಸಮಯ ಕೊಟ್ಟಿದಾರೆ. ಅದಕ್ಕೂ ಮೊದಲು ರಾತ್ರಿ 9 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸಮಯ ಕೊಟ್ಟಿದ್ದಾರೆ. ಇಬ್ಬರನ್ನೂ ಇಂದು ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಮಾಡ್ತೇನೆ. ನಾಳೆ ವಾಪಸ್ ಬಂದ ಬಳಿಕ 99 ಪರ್ಸೆಂಟ್ ನಾಳೆಯೇ ಸಂಪುಟ ವಿಸ್ತರಣೆ ಕ್ಲಿಯರ್ ಆಗುತ್ತೆ ಎಂದು ಹೇಳಿದ್ದಾರೆ.

ಸಿಎಂ ದೆಹಲಿ ವಿಮಾನ ಹತ್ತುವ ಹೊತ್ತಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯುತ್ತಿದ್ದು, ಸಿಎಂಗೂ ಮುನ್ನವೇ ಕೆಲವರು ದೆಹಲಿಗೆ ಹೋಗಿ ಹೈಕಮಾಂಡ್ ಬಾಗಿಲು ತಟ್ಟಿದ್ದಾರೆ. ಇತ್ತ ಬಾಲಚಂದ್ರ ಜಾರಕಿಹೊಳಿ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದು, ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರುವ ಲಕ್ಷಣ ಗೋಚರಿಸುತ್ತಿದೆ.

ಸಚಿವ ಸ್ಥಾನ ಪಡೆಯಲು ಒತ್ತಡ ಹೆಚ್ಚಾಗುತ್ತಿದ್ದು, ದೆಹಲಿಯತ್ತ ಸಚಿವಾಕಾಂಕ್ಷಿಗಳು ದೌಡಾಯಿಸುತ್ತಿದ್ದಾರೆ. ಈಗಾಗಲೇ ದೆಹಲಿಗೆ ಹೋಗಿರುವ ಕೆ.ಜೆ. ಬೋಪಯ್ಯ, ಹೈಕಮಾಂಡ್ ನಾಯಕರ ಭೇಟಿಗಾಗಿ ಕಾಯುತ್ತಿದ್ದಾರೆ. ಹಿರಿತನ ಪರಿಗಣಿಸಿ ಸಚಿವ ಸ್ಥಾನ ನೀಡುವಂತೆ ಬೋಪಯ್ಯ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗು ಸಂತೋಷ್ ಭೇಟಿ ಮಾಡಿ ಒತ್ತಡ ಏರುವ ಸಾಧ್ಯತೆ ಇದೆ.

ಬೋಪಯ್ಯ ಬೆನ್ನಲ್ಲೇ ಯಡಿಯೂರಪ್ಪ ಆಪ್ತಬಣದಲ್ಲಿ ಗುರುತಿಸಿಕೊಂಡಿದ್ದ ಸಿ.ಪಿ ಯೋಗೇಶ್ವರ್ ಕೂಡ ದೆಹಲಿಗೆ ತೆರಳಿದ್ದಾರೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಸಿ.ಪಿ. ಯೋಗೇಶ್ವರ್, ಹೈಕಮಾಂಡ್ ಮೂಲಕ ಬಿಎಸ್ ಯಡಿಯೂರಪ್ಪ ಮೇಲೆ ಒತ್ತಡ ಹೇರಲು‌ ಪ್ರಯತ್ನ ನಡೆಸಿದ್ದಾರೆ.

ಸಂತೋಷ್ ಭೇಡಿ ಮಾಡಿ ಚರ್ಚೆ ನಡೆಸಿರುವ ಯೋಗೇಶ್ವರ್, ಈಗಿನ ಸರ್ಕಾರ ರಚನೆಯಲ್ಲಿ ನನ್ನದು ಪಾತ್ರ ಇದೆ. ಶಾಸಕರನ್ನು ಸೆಳೆಯಲು ಶ್ರಮ ವಹಿಸಿದ್ದೇನೆ. ಪಕ್ಷ ಹೇಳಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಹಾಗಾಗಿ ನನಗೆ ಸಚಿವ ಸ್ಥಾನ ಕೊಡಿ ಎಂದು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನುವುದು‌ ಗೊತ್ತಾಗಿದೆ.

ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳುವ ಮುನ್ನ ನೂತನ ಶಾಸಕ ಸುಧಾಕರ್, ಡಾಲರ್ಸ್ ಕಾಲೋನಿಯ ಸಿಎಂ ನಿವಾಸಕ್ಕೆ ಆಗಮಿಸಿದ್ದರು. ಸಿಎಂ ಬರುವ ಮುನ್ನವೇ ಆಗಮಿಸಿದ್ದರಿಂದ ಸಿಎಂ ಭೇಟಿ ಸಾಧ್ಯವಾಗದೆ ಬರಿಗೈಲಿ ವಾಪಸ್ಸಾಗಿದ್ದಾರೆ‌ . ಈಗಾಗಲೇ ಸಚಿವ ಸ್ಥಾನ ಗ್ಯಾರಂಟಿ ಎಂದು ಸ್ವತಃ ಸಿಎಂ ಯಡಿಯೂರಪ್ಪ ಹೇಳಿದರೂ ಮತ್ತೊಮ್ಮೆ ನೆನಪು ಮಾಡುವುದು ಹಾಗು ರಾಜಕೀಯ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲು ಆಗಮಿಸಿದ್ದರು ಎನ್ನಲಾಗಿದೆ.

ವಿಧಾನಸೌಧದಿಂದ ಡಾಲರ್ಸ್ ಕಾಲೋನಿ ನಿವಾಸಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಅವರಿಗೆ ಸಚಿವ ಸ್ಥಾನದ ಆಕಾಂಕ್ಷಿಗಳ ಕಾಟ ಕಡಿಮೆಯಾಗಲಿಲ್ಲ. ಯಡಿಯೂರಪ್ಪ ಆಗಮಿಸುತ್ತಿದ್ದಂತೆ ಸಿಎಂ ಮನೆಗೆ ಆಗಮಿಸಿದ ಮುರುಗೇಶ್ ನಿರಾಣಿ, ಸಿಎಂಗೆ, ಮತ್ತೊಮ್ಮೆ ಕ್ಷಮೆ ಕೇಳಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಕ್ಷಮಿಸಿ ಸರ್, ವಚನಾನಂದ ಸ್ವಾಮೀಜಿ ಹೇಳಿಕೆಗೆ ನಾನು ಕ್ಷಮೆ ಕೇಳುತ್ತೇನೆ. ದಯಮಾಡಿ ಅದನ್ನು ಮನಸ್ಸಿನಲ್ಲಿ ಇಟ್ಕೊಂಡು ನನ್ನನ್ನು ಮರೆಯಬೇಡಿ. ನಾನು ಪಕ್ಷಕ್ಕಾಗಿ ಬಹಳ ಸೇವೆ ಸಲ್ಲಿಸಿದ್ದೇನೆ. ಹಿರಿಯ ನಾಯಕನಿದ್ದೇನೆ. ನನ್ನನ್ನು ಮಂತ್ರಿ ಮಾಡಿ ಎಂದು ಕೇಳಿಕೊಂಡಿದ್ದಾರೆ. ಆದರೆ ಸಿಎಂ ಯಾವುದೇ ಭರವಸೆ ನೀಡದೆ ಹೋಗಿದ್ರಿಂದ ಕೋಪಗೊಂಡು ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದ್ದಾರೆ.

ರಮೇಶ ಜಾರಕಿಹೊಳಿಗೆ ಡಿಸಿಎಂ ಸ್ಥಾನ ಇಲ್ಲ ಅನ್ನೋದನ್ನು ಸಿಎಂ ಯಡಿಯೂರಪ್ಪ ನಿನ್ನೆ ಬೆಳಗಾವಿಯಲ್ಲೇ ಘೋಷಣೆ ಮಾಡಿದ್ದಾರೆ. ಆದರೂ ಡಿಸಿಎಂ ಸ್ಥಾನಕ್ಕೆ ಪೈಪೋಟಿ ನಡೆಯುತ್ತಲೇ ಇದೆ. ಸಿಎಂ ಕಾರ್ಯಕ್ರಮಕ್ಕೂ ತೆರಳದೆ ಬೆಂಗಳೂರಿನಲ್ಲೇ ಉಳಿದಿದ್ದ ಜಾತಕಿಹೊಳಿ ಬ್ರದರ್ಸ್ ಇಂದು ಮಹತ್ವದ ಬೆಳವಣಿಗೆ ಒಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಕೆಎಂಎಫ್ ಅಧ್ಯಕ್ಷರಾಗಿರುವ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ, ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಕೂಡ ಉಪಸ್ಥಿತಿ ಇರೋದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಒಂದು ಕಡೆ ಸಚಿವ ವಿಸ್ತರಣೆಗೆ ಸಿಎಂ ದೆಹಲಿಗೆ ತೆರಳಲಿದ್ದಾರೆ.

ಸಚಿವಾಕಾಂಕ್ಷಿಗಳು ಒತ್ತಡ ಹೇರಲು ದೆಹಲಿಯಲ್ಲಿ‌ಬೀಡು ಬಿಟ್ಟಿದ್ದಾರೆ. ಇದೀಗ ಬಂಡಾಯ ಏನಾದರೂ ಜೋರಾಗುತ್ತಾ ಅನ್ನೋ ಅನುಮಾನ ಈ ಭೇಟಿಯಿಂದ ಮೂಡಿದೆ.

Leave a Reply