ಬಿಜೆಪಿ ನಾಯಕರ ನುಡಿಮುತ್ತು ಕೇಳಿ ‘ಜೈ ಶ್ರೀರಾಮ್’ ಎಂದು ಗುಂಡು ಹಾರಿಸಿದ!

ಡಿಜಿಟಲ್ ಕನ್ನಡ ವಿಶೇಷ:

ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ವ್ಯಕ್ತಿಯೊಬ್ಬ ‘ಜೈ ಶ್ರೀರಾಮ್, ಎ ಲೋ ಅಜಾದಿ’ ಎಂದು ಕೂಗಿ ಗುಂಡು ಹಾರಿಸಲಾಗಿದೆ. ಈ ವೇಳೆ ಓರ್ವ ವಿದ್ಯಾರ್ಥಿ ಕಾಲಿಗೆ ಗುಂಡು ತಾಗಿ ಗಾಯವಾಗಿದೆ. ಈ ಘಟನೆ ನಮ್ಮ ದೇಶ ಎತ್ತ ಸಾಗುತ್ತಿದೆ ಎಂಬ ಆತಂಕ ಸೃಷ್ಟಿಸುವಂತೆ ಮಾಡಿದೆ.

ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ದೇಶದ್ರೋಹಿಗಳು. ಯಾರು ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಾರೋ ಅವರನ್ನು ಗುಂಡಿಕ್ಕಿ ಕೊಳ್ಳಬೇಕು, ನಾಲಿಗೆ ಕತ್ತರಿಸಬೇಕು, ಕಲ್ಲು ಹೊಡೆದು ಸಾಯಿಸಬೇಕು… ಇವು ರಾಜ್ಯ ಸೇರಿದಂತೆ ರಾಷ್ಟ್ರ ಮಟ್ಟದ ಬಿಜೆಪಿ ನಾಯಕರ ಬಾಯಿಂದ ಬಂದ ನುಡಿ ಮುತ್ತುಗಳು. ಸೋಮವಾರವಷ್ಟೇ ವಿತ್ತ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ದೆಹಲಿ ಚುನಾವಣೆ ಪ್ರತಿಭಟನೆ ವೇಳೆ ದೇಶ ದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಅನುರಾಗ್ ಠಾಕೂರ್ ‘ದೇಶ್ ಕಿ ಗದ್ದಾರೋಂಕೊ…’ (ದೇಶ ದ್ರೋಹಿಗಳಿಗೆ) ಎಂದು ಹೇಳಿದರೆ, ಅಲ್ಲಿದ್ದ ಜನ ‘ಗೋಲಿ ಮಾರೋ ಸಾ….ಕೋ’ (ಗುಂಡಿಕ್ಕಿ ಕೊಲ್ಲಿ) ಎಂದು ಕೂಗಿದರು. ಈ ನುಡಿಮುತ್ತುಗಳ ಪರಿಣಾಮವೇ ಇಂದು ಜಾಮಿಯಾ ನಗರದಲ್ಲಿನ ಪ್ರತಿಭಟನೆ ವೇಳೆ ನಡೆದಿದೆ.

ಗುಂಡು ಹಾರಿಸಿದ ವ್ಯಕ್ತಿ ಉತ್ತರ ಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯ ನಿವಾಸಿ ಎಂದು ಹೇಳಲಾಗಿದೆ. ವಿಶ್ವಕ್ಕೆ ಶಾಂತಿಯ ಪಾಠ ಹೇಳಿಕೊಟ್ಟ ಮಹಾನ್ ವ್ಯಕ್ತಿ ಹೆಸರಿರುವ ಜಿಲ್ಲೆ ಮೂಲದ ವ್ಯಕ್ತಿ ಜೈ ಶ್ರೀರಾಮ್ ಎಂದು ಕೂಗಿ ಗುಂಡು ಹಾರಿಸಿರೋದು ವಿಪರ್ಯಾಸವೇ ಸರಿ.

ಮತಾಂದರಾಗಿ ಭಯೋತ್ಪಾದನೆ ಹಾದಿ ಹಿಡಿದವರು ಮಾಡುವ ತಪ್ಪಿಗೆ ಒಂದು ಸಮುದಾಯವನ್ನೇ ಅನುಮಾನದಿಂದ ನೋಡುವ, ಅವರ ವಿರುದ್ಧ ದ್ವೇಷ ಹುಟ್ಟುವಂತ ಹೇಳಿಕೆ ನೀಡುವ ಬಿಜೆಪಿ ನಾಯಕರು ಈಗೇನು ಹೇಳುತ್ತಾರೆ. ಹಿಂದೂ ಭಯೋತ್ಪಾದನೆ ಇಲ್ಲ. ಇದು ಕೇವಲ ಕಾಂಗ್ರೆಸ್ ನ ಪಿತೂರಿ, ಅಪಪ್ರಚಾರ ಎಂದು ಬೊಬ್ಬೆ ಹಾಕುವ ಬಿಜೆಪಿ ನಾಯಕರು ಈಗ ತಮ್ಮ ಮಾತಿನ ಪ್ರೇರಣೆಯಿಂದ ಶ್ರೀರಾಮನ ಹೆಸರು ಹೇಳಿ ಗುಂಡು ಹಾರಿಸಿರುವುದರ ಬಗ್ಗೆ ಏನು ಹೇಳುತ್ತಾರೆ?

ಪ್ರಧಾನಿ ನರೇಂದ್ರ ಮೋದಿ ಅವರು ಅಚ್ಛೇದಿನ್, ನವ ಭಾರತ ಹೀಗೆ ಜನರಲ್ಲಿ ನೂರೆಂಟು ಕನಸು ಬಿತ್ತಿ ಮತ ಕೇಳುತ್ತಾರೆ. ಮೋದಿ ಮಾತನ್ನು ನಂಬಿ ದೇಶದ ಜನ ಹಿಂದೆ ಮುಂದೆ ನೋಡದೆ ಮತಹಾಕಿ ಬಹುಮತ ಕೊಟ್ಟಿದ್ದಾರೆ. ಆದರೆ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಯಾದರೂ ಎಂತಹದ್ದು, ಕೋಮು ಕೋಮಿನ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿ, ಅದರಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.

ದೆಹಲಿ ಚುನಾವಣೆ ದಿನಾಂಕ ಘೋಷಣೆಯಾದ ನಂತರವಂತೂ ಸಿಎಎ ರಾಜಕೀಯ ಅಸ್ತ್ರವಾಗಿದೆ. ಪಕ್ಷಾತೀತವಾಗಿ ಎಲ್ಲರೂ ಸಿಎಎ ವಿಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೆಳೆ ಬೆಳೆಯುವುದರಲ್ಲಿ ಮುಳುಗಿದ್ದಾರೆ.

Leave a Reply