ಕೆಪಿಸಿಸಿ ಹುದ್ದೆ ಹಾದಿ ಬೀದಿಯಲ್ಲಿ ತೀರ್ಮಾನ ಮಾಡುವುದಲ್ಲ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಕೆಪಿಸಿಸಿ ಹುದ್ದೆ ಹಾದಿ ಬೀದಿಯಲ್ಲಿ ಮಾತನಾಡಿ ತೀರ್ಮಾನ ಮಾಡುವ ಹುದ್ದೆ ಅಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಗಾಣಿಗಾಪುರದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿ ದೇಗುಲದಲ್ಲಿ ದರ್ಶನ ಪಡೆದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಹುದ್ದೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೆಪಿಸಿಸಿ ಹುದ್ದೆಗಳನ್ನು ಅಷ್ಟು ಹಗುರವಾಗಿ ಮಾಡಬೇಡಿ. ಅದು ಹಾದಿ ಬೀದಿಯಲ್ಲಿ ಮಾತನಾಡಿ ತೀರ್ಮಾನ ಮಾಡುವ ವಿಚಾರ ಅಲ್ಲ ಎಂದರು.

ಧರ್ಮ, ದೇವರು, ದೇವಾಲಯ ಯಾರ ಸ್ವತ್ತು ಅಲ್ಲ:

ದೇವಾಲಯ ಭೇಟಿ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ‘ಇದು ನಂಬಿಕೆ ಮೇಲಿನ ವಿಚಾರ. ನನ್ನ ನಂಬಿಕೆಗೆ ತಕ್ಕಂತೆ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಇದು ಯಾರ ಸ್ವತ್ತು ಅಲ್ಲ. ಕೆಲವರು ಹಿಂದುತ್ವ ಹಾಗೂ ದೇವಾಲಯಗಳನ್ನು ಸ್ವಂತ ಆಸ್ತಿ ಮಾಡಿಕೊಂಡವರಂತೆ ಮಾತನಾಡುತ್ತಾರೆ. ಕೆಲವು ರಾಜಕೀಯ ಪಕ್ಷಗಳು ಹಾಗೂ ನಾಯಕರು ಹಿಂದುತ್ವ ತನ್ನದು ಎಂದು ಪ್ರತಿಪಾದನೆ ಮಾಡಿಕೊಂಡು ಹೋಗುತ್ತಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ಧರ್ಮ ಹಾಗೂ ಹಾಗೂ ದೇವಾಲಯಗಳು ಯಾರ ವೈಯಕ್ತಿಕ ಸ್ವತ್ತು ಅಲ್ಲ.

ನಾನು ದೇವರಲ್ಲಿ ಏನು ಬೇಡಿಕೊಂಡೆ ಎಂದು ಎಲ್ಲರಿಗೂ ಹೇಳಲು ಸಾಧ್ಯವಿಲ್ಲ. ಅದು ಭಕ್ತನಿಗೂ ಭಾಗವಂತನಿಗೂ ಬಿಟ್ಟ ವಿಚಾರ. ನಿಮಗೂ ಒಳ್ಳೆಯದಾಗಲಿ ಅಂತಾ ಬೇಡಿಕೊಂಡೆ.

ನಿನ್ನೆ ಗೋನಾಲದ ದುರ್ಗಾದೇವಿ ಆಶೀರ್ವಾದ ಪಡೆದೆ. ಇಂದು ದತ್ತಾತ್ರೇಯ ಸ್ವಾಮಿಯ ಪಾದಗಳಿಗೆ ನಮಸ್ಕರಿಸಿದೆ.

ಸಾಧ್ಯವಾದಷ್ಟು ಋಣ ತೀರಿಸುವೆ:

ನಾನು ಸಂಕಷ್ಟದ ಸಮಯದಲ್ಲಿದ್ದಾಗ ಲಕ್ಷಾಂತರ ಜನ ಹರಕೆ ಕಟ್ಟಿಕೊಂಡು, ಪ್ರಾರ್ಥನೆ ಮಾಡಿ, ಹೋರಾಟ ಮಾಡಿ, ತಮ್ಮ ಆಸ್ತಿ ನಷ್ಟ ಮಾಡಿಕೊಂಡು ನನಗೆ ಒಳ್ಳೆಯದಾಗಬೇಕು ಎಂದು ಬಯಸಿದ್ದಾರೆ. ಯಾವುದಾದರೂ ಸಂದರ್ಭದಲ್ಲಿ ನಾನು ಅಷ್ಟೋ ಇಷ್ಟೋ ಋಣ ತೀರಿಸಬೇಕಿದೆ. ಹೀಗಾಗಿ ನಾನು ಎಲ್ಲರ ಹರಕೆ ತೀರಿಸಲು ಆಗದಿದ್ದರೂ ನನ್ನ ಶಕ್ತಿಗೆ ತಕ್ಕಂತೆ ಪ್ರಯತ್ನಿಸುತ್ತೇನೆ. ರಾಜಕಾರಣದ ಫಲ ಬೇರೆ, ನನಗೆ ಒಳ್ಳೆಯದಾಗಲಿ ಅಂತಾ ಬಯಸಿದರಲ್ಲ ಅದು ಮುಖ್ಯ.

ಇನ್ನು ನನಗಾಗಿ ಮಾಡಿದ ಪ್ರತಿಭಟನೆಯಿಂದ 82 ಕೋಟಿ ನಷ್ಟ ಆಗಿದೆ ಅಂತಾ ಸರ್ಕಾರ ಪಟ್ಟಿ ನೀಡಿರುವುಡು ಪತ್ರಿಕೆಗಳ ವರದಿಯಲ್ಲಿ ನೋಡಿದೆ. ಅದು ಹೇಗೆ ನಷ್ಟ ಆಯ್ತು, ಯಾರಿಗೆ ನಷ್ಟ ಆಯ್ತೋ, ಯಾವ ಅಳತೆಗೋಲಿನ ಮೇಲೆ ಲೆಕ್ಕ ಹಾಕಿದ್ದಾರೋ ಗೊತ್ತಿಲ್ಲ. ಪ್ರತಿಭಟನೆಗಳು ನನ್ನೊಬ್ಬನಿಗಾಗಿ ಆಗಿಲ್ಲ. ಬಹಳಷ್ಟು ಜನರಿಗಾಗಿ ಪ್ರತಿಭಟನೆಗಳು ನಡೆದಿವೆ. ಆದರೆ ನನಗಾಗಿ ನಡೆದ ಪ್ರತಿಭಟನೆಯನ್ನು ವಿಶೇಷವಾಗಿ ಕೋರ್ಟಲ್ಲಿ ಕೇಸು ಹಾಕಿಸಿದ್ದಾರೆ.

ಯಾರನ್ನಾದರೂ ಡಿಸಿಎಂ ಮಾಡಿಕೊಳ್ಳಲಿ:

ಬಿಜೆಪಿ ಸರ್ಕಾರದಲ್ಲಿ ಅವರು ಯಾರನ್ನಾದರೂ ಉಪಮುಖ್ಯಮಂತ್ರಿ ಮಾಡಿಕೊಳ್ಳಲಿ. ಅವರು ರಮೇಶ್ ಜಾರಕಿಹೊಳಿ ಅವರನ್ನು ಮಾಡಿಕೊಳ್ಳುತ್ತಾರೋ ಅಥವಾ ಮತ್ತೊಬ್ಬರನ್ನು ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಅವರು ಸಿದ್ದರಾಮಯ್ಯ ನಮ್ಮ ನಾಯಕ ಎಂದು ಹೇಳಿಕೊಂಡಿದ್ದಾರೆ. ಆ ಪಕ್ಷದ ವಿಚಾರ ನನಗೆ ಬೇಡ.

Leave a Reply