ಅಮಿತ್ ಶಾ ವೇಳಾಪಟ್ಟಿ ಬದಲು! ಸದ್ಯಕ್ಕೆ ಸಂಪುಟ ವಿಸ್ತರಣೆ ಡೌಟು!?

ಡಿಜಿಟಲ್ ಕನ್ನಡ ಟೀಮ್:

ಬಜೆಟ್ ಅಧಿವೇಶನದ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ, ಎನ್ಡಿಎ ಮೈತ್ರಿ ಪಕ್ಷಗಳ ಸಭೆ, ಬಿಜೆಪಿ ಕಾರ್ಯಕಾರಣಿ ಸಭೆ… ಹೀಗೆ ಒಂದಾದ ಮೇಲೊಂದು ಸಭೆಗಳಲ್ಲಿ ಭಾಗಿಯಾಗಬೇಕಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡುವುದು ಅನುಮಾನವಾಗಿದೆ. ಅಲ್ಲಿಗೆ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಗಡವು ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ.

ನಿನ್ನೆ ರಾತ್ರಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಬಿಎಸ್ ವೈ ಭೇಟಿ ಮಾಡಿದ್ದ ಏನು ಮಾತನಾಡಿದರು ಎಂಬುದರ ಖಚಿತ ಮಾಹಿತಿ ಇಲ್ಲ. ನಂತರ ಅಮಿತ್ ಶಾ ಅವರ ಜತೆಗಿನ ಭೇಟಿ ನಂತರ ಇಂದು ಮತ್ತೊಂದು ಸುತ್ತಿನ ಮಾತುಕತೆಗೆ ಸೂಚಿಸಲಾಯಿತು.

ಮೊದಲು ಬೆಳಗ್ಗೆ 10 ಗಂಟೆಗೆ ಸಭೆ ನಡೆಸಲು ಸಮಯ ನಿಗದಿ ಮಾಡಲಾಗಿತ್ತು, ಆದರೆ ನಂತರ ಅದನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಈಗ ಶಾ ಅವರ ವೇಳಾಪಟ್ಟಿ ಭರ್ತಿಯಾಗಿದ್ದು, ಬಿಎಸ್ ವೈ ಅವರನ್ನು ಭೇಟಿ ಮಾಡುತ್ತಾರಾ ಅನ್ನೋ ಅನುಮಾನ ಮೂಡಿದೆ.

ಮೇಲ್ನೋಟಕ್ಕೆ ಯಡಿಯೂರಪ್ಪ ಹಾಗೂ ಶಾ ಭೇಟಿಗೆ ವೇಳಾಪಟ್ಟಿ ಅಡ್ಡಿಯಾಗುತ್ತಿರುವಂತೆ ಕಂಡರೂ ಇಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಶಾ ಅವರಲ್ಲಿ ಆಸಕ್ತಿ ಇಲ್ಲದಿರುವುದು ಪ್ರಮುಖ ಕಾರಣ.

ಬಿಜೆಪಿ ಹೈಕಮಾಂಡ್ ನಾಯಕರಿಗೆ ಸಚಿವ ಸಂಪುಟ ವಿಸ್ತರಣೆಗೆ ಯಾವುದೇ ತಕರಾರು ಇಲ್ಲದಿದ್ದರೆ, ಈ ವಿಚಾರವನ್ನು ಒಂದೂವರೆ ತಿಂಗಳ ಕಾಲ ವಿಳಂಬ ಮಾಡುತ್ತಲೇ ಇರಲಿಲ್ಲ. ಯಡಿಯೂರಪ್ಪ ದಾವೋಸ್ ನಿಂದ ಬಂದು ನಾಲ್ಕೈದು ದಿನಗಳೇ ಕಳೆದಿವೆ. ಈ ಸಮಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಕರೆಯದೇ ಬಜೆಟ್ ಅಧಿವೇಶನ ಆರಂಭವಾಗುವ ಹೊತ್ತಲ್ಲಿ ಕರೆದು ಈಗ ವೇಳಾಪಟ್ಟಿ ನಾಟಕವಾಡುವ ಅಗತ್ಯವೇ ಇರಲಿಲ್ಲ.

ಈ ಮಧ್ಯೆ ಮೈತ್ರಿ ಸರ್ಕಾರ ಬೀಳಿಸಿದ ಶಾಸಕರ ಒಗ್ಗಟ್ಟು ಚಿಂದಿ ಚಿತ್ರಾನ್ನವಾಗಿದೆ. ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಮಾಜಿ ಶಾಸಕರು ಆತಂತ್ರರಾದರೆ, ವಿಶ್ವನಾಥ್ ಹಾಗೂ ಎಂಟಿಬಿ ಚುನಾವಣೆಯಲ್ಲಿ ಸೋತು ಯಾರಿಗೂ ಬೇಡವಾಗಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಅವರು ತಮಗೆ ಉಪಮುಖ್ಯಮಂತ್ರಿ ಸ್ಥಾನ ತೋರಿಸಿ ಈಗ ಉಂಡೆ ನಾಮ ಹಾಕುತ್ತಿದ್ದಾರಲ್ಲ ಅಂತಾ ಕೋಪ ಕುಡಿಯುತ್ತಿದ್ದಾರೆ, ಆರ್. ಶಂಕರ್ ಚುನಾವಣೆಯನ್ನು ಸ್ಪರ್ಧಿಸದೇ ಈಗ ವಿಧಾನ ಪರಿಷತ್ ಸ್ಥಾನವೂ ಇಲ್ಲದೆ ರಾಜಕೀಯವಾಗಿ ಅನಾಥರಾಗಿದ್ದಾರೆ. ಉಳಿದ ಶಾಸಕರು ಮಂತ್ರಿಗಿರಿ ಇನ್ನೂ ಸಿಕ್ಕಿಲ್ಲ ಅಂತಾ ಕುಡಿಯುತ್ತಿದ್ದರೂ ಈಗಲೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರೆ ಅಧಿಕಾರವೂ ಇಲ್ಲ ಮರ್ಯಾದೆಯೂ ಉಳಿಯುವುದಿಲ್ಲ ಅಂತಾ ಕಲ್ಲುಗಚ್ಚಿಕೊಂಡು ಕೂತಿದ್ದಾರೆ.

Leave a Reply