ಸಂಪುಟ ಹಗ್ಗಜಗ್ಗಾಟ ಹೈಕಮಾಂಡ್ ಕಿರಿಕ್ಕಾ? ಯಡಿಯೂರಪ್ಪ ಸಿಂಪತಿ ಗಿಮಿಕ್ಕಾ?

ಡಿಜಿಟಲ್ ಕನ್ನಡ ಟೀಮ್:

ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನದಿಂದಲೂ ಹೈಕಮಾಂಡ್ ಜತೆಗೆ ಅತ್ತೆ ಸೊಸೆ ಮಾದರಿಯ ಜಗಳ ಸಹಜವಾಗಿದೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಮೇಲೆ ಕತ್ತಿ ಮಸೆಯುತ್ತಿದ್ರೆ ಯಡಿಯೂರಪ್ಪ ಹೈಕಮಾಂಡ್ ನಾಯಕರನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೆ ಯದ್ವಾತದ್ವಾ ನಡೆಯುತ್ತಾ ದಿಕ್ಕನ್ನೇ ಲೆಕ್ಕಿಸದೆ ನುಗ್ಗಿದ ಕುದುರೆಯಂತಾಗಿದ್ದಾರೆ. ಇದೀಗ ಅತ್ತ ಹುಲಿ ಇತ್ತ ದರಿ ಎನ್ನುವಂತಾಗಿರುವ ಯಡಿಯೂರಪ್ಪ ಅವರು ದೆಹಲಿಯಲ್ಲಿ ಅಮಿತ್ ಶಾ ಭೇಟಿಗಾಗಿ ಕಾದು ಕುಳಿತಿದ್ದಾರೆ.

ಇದೆಲ್ಲದರ ನಡುವೆ ಯಡಿಯೂರಪ್ಪ ಭೇಟಿಗೆ ಅಮಿತ್ ಶಾ ಹಸಿರು ನಿಶಾನೆ ತೋರಿಸುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಓರ್ವ ಶಾಸಕ ಉಮೇಶ್ ಕತ್ತಿ, ಚುನಾವಣೆಯಲ್ಲಿ ಸೋತರೂ ಡಿಸಿಎಂ ಪಟ್ಟಕ್ಕೆ ಏರಿರುವ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡುವ ಅಮಿತ್ ಶಾಗೆ ಅದೇ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಪುರುಸೋತ್ತಿಲ್ಲದಂತಾಗಿದೆ.

ನಿನ್ನೆ ರಾತ್ರಿಯೇ ಜೆ.ಪಿ ನಡ್ಡಾ ಹಾಗೂ ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿತ್ತು ಎಂದು ಹೇಳಲಾಗಿತ್ತು. ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದ ಬಿಎಸ್ ವೈ, ಅಮಿತ್ ಶಾ ಅವರನ್ನು ಭೇಟಿ ಮಾಡಿರಲಿಲ್ಲ. ಕಾರಣ ಯಡಿಯೂರಪ್ಪ ಭೇಟಿಗೆ ಅಮಿತ್ ಶಾ ಸಮಯ ನೀಡಿರಲ್ಲಿಲ್ಲ ಎಂಬ ವರದಿಗಳು ಬರುತ್ತಿವೆ.

ಯಡಿಯೂರಪ್ಪ ಮುಖ್ಯಮಂತ್ರಿ ಆಗುವಾಗಲೇ ಅಡ್ಡಗಾಲು ಹಾಕಿದ್ದ ಹೈಕಮಾಂಡ್ ಧಣಿಗಳು, ರಾಜ್ಯಪಾಲರನ್ನಾಗಿ ಮಾಡ್ತೇವೆ. ನೀವು ರಾಜ್ಯದಿಂದ ಹೊರಗಡೆ ಇರಿ. ನಾವು ಮುಖ್ಯಮಂತ್ರಿ ಆಗಿ ಬೇರೊನ್ನರನ್ನು ಮಾಡ್ತೇವೆ ಎಂದಿದ್ದರಂತೆ. ಆದ್ರೆ ಹೈಕಮಾಂಡ್ ಮಾತಿಗೆ ಠಕ್ಕರ್ ಕೊಟ್ಟ ಯಡಿಯೂರಪ್ಪ, ಅರೆಬಿರಿಯಲ್ಲಿ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸಿದ ಕಾರಣದಿಂದಲೇ ಯಡಿಯೂರಪ್ಪ, ದೆಹಲಿ ದೊರೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಆ ಬಳಿಕ ಸಚಿವ ಸಂಪುಟ ರಚನೆ, ನೆರೆ ಪರಿಹಾರ ಬಿಡುಗಡೆ ಸೇರಿದಂತೆ ಪ್ರತಿ ಹೆಜ್ಜೆಯಲ್ಲೂ ಬಿಜೆಪಿ ಹೈಕಮಾಂಡ್ ಇಲ್ಲೀವರೆಗೂ ರಾಜ್ಯ ಸರ್ಕಾರಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಆಗೊಮ್ಮೆ ಹೀಗೊಮ್ಮೆ ಕೇಂದ್ರ ಸರ್ಕಾರದ ವಿರುದ್ಧವೇ ಗುಡುಗುತ್ತಾ ಕಾಲದೂಡುತ್ತಿರುವ ಯಡಿಯೂರಪ್ಪ ಅವರಿಗೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಆವರಿಸಿದೆ. ಅದೇ ಕಾರಣದಿಂದ ಯಡಿಯೂರಪ್ಪ ಈ ಬಾರಿ ರಾಜಿ ಸೂತ್ರ ಹಿಡಿದು ದೆಹಲಿಗೆ ತೆರಳಲಿದ್ದಾರೆ ಎಂದು ಬಿಜೆಪಿ ನಾಯಕರು ಗುಸುಗುಡುತ್ತಿದ್ದಾರೆ.

ಯಡಿಯೂರಪ್ಪ ದೆಹಲಿಯ ರಾಜಿ ಸೂತ್ರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸ್ತಾಪವೂ ಇದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತವಾದ ಮಾಹಿತಿ ಇಲ್ಲ. ಆದರೆ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಲಿ, ಉಪಮುಖ್ಯಮಂತ್ರಿಗಳನ್ನಾಗಲಿ ಅಥವಾ ಮಂತ್ರಿಗಳನ್ನಾಗಲಿ ದೆಹಲಿಗೆ ಕರೆದುಕೊಂಡು ಹೋಗಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಬದಲಿಗೆ ಯಡಿಯೂರಪ್ಪ ಅವರು ಕರೆದುಕೊಂಡು ಹೋಗಿರುವುದು ಪುತ್ರ ಸಂಸದ ಬಿವೈ ರಾಘವೇಂದ್ರ ಹಾಗೂ ಮತ್ತೊಬ್ಬ ಪುತ್ರ ಬಿವೈ ವಿಜಯೇಂದ್ರ ಅವರನ್ನು. ಈ ಬೆಳವಣಿಗೆ ರಾಜಿಸೂತ್ರದ ಸಾಧ್ಯತೆಯನ್ನು ಖಚಿತಪಡಿಸುತ್ತಿದೆ. ಒಂದು ವೇಳೆ ಹೈಕಮಾಂಡ್ ನಾಯಕರು ಸಿಎಂ ಯಡಿಯೂರಪ್ಪ ರಾಜಿ ಸೂತ್ರಕ್ಕೆ ಒಪ್ಪಿಕೊಂಡರೆ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ದಿನ ನಿಗದಿ ಆಗಲಿದೆ. ಒಂದು ವೇಳೆ ಯಡಿಯೂರಪ್ಪ ರಾಜಿ ಸೂತ್ರದ ಬಗ್ಗೆ ಚರ್ಚಿಸಲು ಹೈಕಮಾಂಡ್ ನಾಯಕರು ನಿರಾಕರಿಸಿ ದೆಹಲಿ ಭೇಟಿ ವಿಫಲವಾದರೆ, ಬೆಂಗಳೂರಿಗೆ ಬಂದು ಏಕಾಏಕಿ ಸಂಪುಟ ವಿಸ್ತರಣೆ ಮಾಡುವುದು. ಮುಂದಿನ ದಿನಗಳಲ್ಲಿ ಬಿಜೆಪಿಗೆ ಪರ್ಯಾಯವಾಗಿ ಮತ್ತೊಂದು ಪ್ರಾದೇಶಿಕ ಪಕ್ಷ ಕಟ್ಟುವುದು ಯಡಿಯೂರಪ್ಪ ಮುಂದಿರುವ ಆಯ್ಕೆಗಳು. ರಾಜಿಗೆ ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ತನಗೆ ಹಾಗೂ ಇಬ್ಬರು ಮಕ್ಕಳಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವುದು, ಮೊದಲು ಕೊಟ್ಟಿದ್ದ ರಾಜ್ಯಪಾಲರ ಹುದ್ದೆ ಕೊಡುವುದು. ಯಡಿಯೂರಪ್ಪ ರಾಜಿ ಸೂತ್ರ ಮುಂದಿಡುವುದಕ್ಕಾದರೂ ಹೈಕಮಾಂಡ್ ಸಿಗುತ್ತಿಲ್ಲ.

ಇದ್ಯಾವುದೂ ಸಾಧ್ಯವಾಗದಿದ್ದರೆ ಹೈಕಮಾಂಡ್ ನಾಯಕರು ನನ್ನನ್ನು ಹೀನಾಯವಾಗಿ ಕಂಡರು. ಓರ್ವ ಸಿಎಂ ಆಗಿದ್ದರೂ ನನ್ನನ್ನು ಹೀನಮಾನವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಸಿಂಪತಿ ಕಾರ್ಡ್ ಪ್ರಯೋಗಿಸಿ ತನ್ನ ಲಿಂಗಾಯತ ಮತಬ್ಯಾಂಕ್ ಅಸ್ತ್ರವನ್ನು ಬಳಸುವ ಲೆಕ್ಕಾಚಾರಗಳಿವೆ.

Leave a Reply