ಬಿಜೆಪಿ ಸರ್ವಾಧಿಕಾರಕ್ಕೆ ಪ್ರಜಾಪ್ರಭುತ್ವ ಹಾಳಾಗುತ್ತಿದೆ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

‘ಬಿಜೆಪಿ ಕೇವಲ ರಾಜ್ಯದಲ್ಲಿ ಮಾತ್ರವಲ್ಲ. ಇಡೀ ದೇಶದಲ್ಲಿ ಸರ್ವಾಧಿಕಾರಿ ಧೋರಣೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ…’ ಇದು ಬಜೆಟ್ ಅಧಿವೇಶನದ ಸಮಯದಲ್ಲಿ ರಾಜ್ಯಪಾಲರ ಭಾಷಣದ ವೇಳೆ ಯಾವುದೇ ಶಾಸಕರು ಅಡ್ಡಿಪಡಿಸುವಂತಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೊರಡಿಸಿರುವ ಸುತ್ತೋಲೆಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ನೀಡಿರುವ ಪ್ರತಿಕ್ರಿಯೆ.

ಸದಾಶಿವನಗರದ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ದೇಶದಲ್ಲಿ ತಮ್ಮ ಅಧಿಕಾರದಿಂದ ವಿರೋಧ ಪಕ್ಷಗಳು ಸೇರಿದಂತೆ ಇತರೆ ಯಾವುದೇ ಪಕ್ಷಗಳು ಇಲ್ಲದಂತೆ ವರ್ತಿಸುತ್ತಿದೆ. ಇಡೀ ದೇಶದಲ್ಲಿ ಅವರು ತಮ್ಮ ಮನಸ್ಸಿಗೆ ಬಂದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹದಗೆಡಿಸುತ್ತಾ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ’ ಎಂದರು.

‘ಸ್ಪೀಕರ್ ಅವರು ಬಿಜೆಪಿ ಕ್ಷದವರೇ ಆಗಿರಬಹುದು. ಬಹಳ ಸಂತೋಷ. ಅಧಿವೇಶನಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಗಳನ್ನು ತೀರ್ಮಾನ ಮಾಡಬೇಕಾದರೆ, ವಿಧಾನಸಭೆ ಸಲಹಾ ಸಮಿತಿ ಜತೆ ಕೂತು ಅಧಿವೇಶನ ಹೇಗೆ ನಡೆಯಬೇಕು ಎಂದು ಚರ್ಚೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಸೇರಿದಂತೆ ಯಾವುದೇ ಸರ್ಕಾರ ಇರಲಿ, ಮಾಧ್ಯಮಗಳನ್ನು ಅಧಿವೇಶನದಿಂದ ಹೊರಗಿಡುವುದೇ ಆಗಲಿ ಅಥವಾ ಬೇರೆ ನಿರ್ಧಾರವೇ ಆಗಿರಲಿ ಎಲ್ಲವನ್ನು ಅದರದೇ ಆದ ಪ್ರಕ್ರಿಯೆ ಮೂಲಕ ನಿರ್ಧಾರ ತೆಗೆದುಕೊಳ್ಳಬೇಕು. ಈ ಹಿಂದೆ ನೀವು ಸರ್ಕಾರ ಉಳಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನೇ ಸದನದ ಒಳಗೆ ಬಿಟ್ಟುಕೊಂಡ ಉದಾಹರಣೆ ಇದೆ’ ಎಂದರು.

‘ಸದ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವು ರಾಜ್ಯಗಳಲ್ಲಿ ಯುವ ಸಮುದಾಯ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳಾದ ನಾವು ಹೊರಗಡೆ ಏನಾಗುತ್ತಿದೆ ಎಂಬುದನ್ನು ಸದನದಲ್ಲಿ ಅಥವಾ ರಾಜ್ಯಪಾಲರಿಗೆ ಹೇಳಲು ವಿಧಾನಸಭೆ ಸರಿಯಾದ ಸ್ಥಳ. ರಾಜ್ಯಪಾಲರು ಏನು ಹೇಳುತ್ತಾರೋ ಅದರ ಬಗ್ಗೆ ನಾವು ಚರ್ಚೆ ಮಾಡಬಹುದು. ಹಿಂದೆ ಇದೇ ಬಿಜೆಪಿ ಅವರು ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಭಾಷಣದ ವೇಳೆ ಏನು ಮಾಡಿದ್ದಾರೆ ಎಂಬುದನ್ನು ಮಾಧ್ಯಮಗಳಾದ ನೀವು ಜನರಿಗೆ ತೋರಿಸಬೇಕು. ಟಿಪ್ಪು ವಿಚಾರದಲ್ಲಿ ಬಿಜೆಪಿಯವರು ಹೇಗೆ ನಡೆದುಕೊಂಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಲಿ’ ಎಂದರು.

‘ಯಾವುದೇ ರಾಜಕೀಯ ಪಕ್ಷವಿರಲಿ ಅವರ ಪ್ರಜಾಪ್ರಭುತ್ವದ ಹಕ್ಕನ್ನು ಮೊಟಕುಗೊಳಿಸಲು ಇದು ಶಾಲೆ ಅಲ್ಲ. ಇಲ್ಲಿ ಪಾಠ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ. ಈ ವಿಚಾರವಾಗಿ ನಾವು ಕೂತು ಚರ್ಚೆ ನಡೆಸಿ ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇವೆ’ ಎಂದರು.

ಉಳಿದಂತೆ ಅವರು ಹೇಳಿದ್ದಿಷ್ಟು…

ಅಧಿಕಾರಕ್ಕೆ ಬಂದಾಗಿಂದ ದ್ವೇಷದ ರಾಜಕಾರಣ:

ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸುವಾಗ ಬಸವಣ್ಣನವರ ತತ್ವಗಳನ್ನು ಹೇಳಿ ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಮಾತುಕೊಟ್ಟಿದ್ದರು. ಆದರೆ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿ ಹಂತದಲ್ಲೂ ದ್ವೇಷದ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ ಎಂದು ಟೀಕಿಸಿದರು.

ನಿನ್ನೆ ಮೈತ್ರಿ ಸರ್ಕಾರದ ಯೋಜನೆ ತಡೆದಿರುವುದಕ್ಕೆ ಹೈಕೋರ್ಟ್ ಛೀಮಾರಿ ಹಾಕಿರುವುದನ್ನು ಮಾಧ್ಯಮಗಳಲ್ಲೇ ನೋಡಿದೆ. ಮೈತ್ರಿ ಸರ್ಕಾರ ನಮ್ಮ ಶಾಸಕರಿಗೆ ನೀಡಿದ್ದ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರಗಳ ಅನುದಾನವನ್ನು ತಡೆ ಹಿಡಿದಿಲ್ಲ. ಆದರೆ ಕಾಂಗ್ರೆಸ್, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನೀಡಲಾದ ಅನುದಾನವನ್ನು ಕಿತ್ತುಕೊಂಡಿದ್ದಾರೆ.

ಯಡಿಯೂರಪ್ಪನವರು ಸಂಪನ್ಮೂಲ ಕ್ರೂಢೀಕರಿಸಿ, ಕೇಂದ್ರದಿಂದ ನೆರವು ಪಡೆದು ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಹೆಚ್ಚಿನ ಹೊಸ ಯೋಜನೆಗಳನ್ನು ನೀಡಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ನಮ್ಮ ಸರ್ಕಾರ ನಮ್ಮ ಶಾಸಕರ ಕ್ಷೇತ್ರಕ್ಕೆ ಮಂಜೂರು ಮಾಡಲಾಗಿದ್ದ ಯೋಜನೆಗಳನ್ನು ರದ್ದುಗೊಳಿಸಿರುವುದು ನಮಗೆ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದ್ದ ಯಡಿಯೂರಪ್ಪನವರು ಗಾಬರಿಯಿಂದ ಈರೀತಿ ದ್ವೇಷದ ರಾಜಕಾರಣಕ್ಕೆ ಮುಂದಾಗಿರುವುದೇಕೆ? ಎಂದರು.

ಬಜೆಟ್ ನಲ್ಲಿ ಏನು ಕೊಡ್ತಾರೋ ನೋಡೋಣ

ಬೇರೆ ರಾಜ್ಯಗಳಿಗೆ ಕೇಂದ್ರದಿಂದ ಸಿಗುತ್ತಿರುವ ಪ್ರಯೋಜನಗಳು ನಮ್ಮ ರಾಜ್ಯಕ್ಕೆ ಸಿಗುತ್ತಿಲ್ಲ. ಇವರು ಏನೇನು ತೆಗೆದುಕೊಂಡು ಬರ್ತಾರೆ ನೋಡೋಣ. ಕೇಂದ್ರದಲ್ಲೂ ಹಾಗೂ ರಾಜ್ಯದಲ್ಲೂ ನಾವೇ ಇರಬೇಕು ಅಂತಾ ಬಯಸಿ ಅಧಿಕಾರಕ್ಕೆ ಬಂದಿದ್ದೀರಿ, ಸಂತೋಷ. ಆದರೆ ಅದರಿಂದ ರಾಜ್ಯಕ್ಕೆ ಏನಾದರೂ ಪ್ರಯೋಜನ ಆಗಬೇಕಲ್ಲವೇ?

ಇಡೀ ದೇಶಕ್ಕೆ ಈಗ ಕಳಂಕ ಬಂದಿದೆ. ನಮ್ಮ ಯುವ ಜನರ ಸಂಪನ್ಮೂಲ ವಿದೇಶಗಳಲ್ಲಿ ಹೋಗಿ ಕೆಲಸ ಮಾಡುತ್ತಿದ್ದಾರೆ. ಯುರೋಪ್ ದೇಶಗಳು, ಅಮೆರಿಕ, ಜರ್ಮನಿ, ಸೌದಿ ಸೇರಿದಂತೆ ಎಲ್ಲೆಡೆ ನಮ್ಮ ವಿದ್ಯಾವಂತ ಯುವ ಸಮುದಾಯ ವಿದೇಶಗಳಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಹೊರ ದೇಶಗಳಲ್ಲಿ ಬದುಕುತ್ತಿರುವ ಭಾರತೀಯರು ಇಂದು ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಷ್ಟೇ ವಿದೇಶದಲ್ಲಿರುವ ಭಾರತೀಯರ ಜತೆ ಮಾತನಾಡಿಕೊಂಡು ಬಂದೆ. ವಿದೇಶಗಳಲ್ಲಿ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ನಿಳುವಳಿ ಮಂಡಿಸುತ್ತಿದ್ದಾರೆ. ಅಮೆರಿಕದಲ್ಲಿ ನಮಗೆ ಭಾರತದಲ್ಲಿ ಏನಾಗುತ್ತಿದೆ ಎಂದು ಅಲ್ಲಿನ ಜನ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ವಿಶ್ವ ಬ್ಯಾಂಕ್ ನಮಗೆ ಹಣ ನೀಡಲು ಹಿಂದೆಮುಂದೆ ನೋಡುತ್ತಿದ್ದಾರೆ. ನಮ್ಮಲ್ಲಿ ಸೌಹಾರ್ದತೆ ಕಡಿಮೆ ಆಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದರು.

ಹೊರಗಡೆಯಿಂದ ಇಲ್ಲಿಗೆ ದುಡ್ಡ ಬರುತ್ತಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಮೊನ್ನೆ ಅಮೆರಿಕ ಎಂಬಸಿ ಕಚೇರಿ ಬಳಿ ಹೋಗುವಾಗ ಕನಿಷ್ಠ 5 ಸಾವಿರ ಜನ ಕ್ಯೂ ನಿಂತಿದ್ದರು. ನಾನು ಪ್ರತಿಭಟನೆ ಇರಬೇಕು ಎಂದು ಅಂದುಕೊಂಡೆ, ಆದರೆ ಅಲ್ಲಿ ಅಮೆರಿಕದ ವೀಸಾಗಾಗಿ ಜನ ನಿಂತಿದ್ದರು. ನಮ್ಮ ದೇಶದಿಂದ ಹೊರ ಹೋಗಲು ಯುವ ಜನತೆ ಸರದಿಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ನಮ್ಮ ದೇಶದಿಂದ ಎಷ್ಟು ಜನ ವಿದೇಶಕ್ಕೆ ಹೋಗಲು ಅರ್ಜಿ ಹಾಕಿದ್ದಾರೆ ಎಂಬುದರ ಬಗ್ಗೆ ಪ್ರಶ್ನೆ ಹಾಕುವಂತೆ ನಾನು ನನ್ನ ತಮ್ಮನಿಗೆ ಹೇಳಿದೆ. ಎರಡನೇ ಅಧಿವೇಶನಕ್ಕೆ ಹಾಕುತ್ತೇನೆ ಎಂದು ಹೇಳಿದರು.

ನಮ್ಮಲ್ಲಿರುವ ಉದ್ಯಮಿಗಳು ಭಾರತಕ್ಕಿಂತ ಹೊರ ದೇಶಗಳಲ್ಲಿ ಬಂಡವಾಳ ಹೂಡಲು ಯೋಚಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾಳೆ ಬಜೆಟ್ ನಲ್ಲಿ ಏನು ಕೊಡುತ್ತಾರೆ ಅಂತಾ ನೋಡೋಣ.

ನಮ್ಮ ನಾಯಕರಲ್ಲಿ ಗೊಂದಲವಿಲ್ಲ

ನಮ್ಮ ಪಕ್ಷದ ನಾಯಕರಲ್ಲಿ ಯಾವುದೇ ಗೊಂದಲವಿಲ್ಲ, ನಮ್ಮ ನಾಯಕರು ಸಕ್ರಿಯರಾಗಿದ್ದಾರೆ. ಕೇವಲ ಮಾಧ್ಯಮಗಳು ಗೊಂದಲ ಸೃಷ್ಟಿಸುತ್ತಿವೆ. ರಾಜ್ಯ ಸರ್ಕಾರದ ವಿರುದ್ಧ ಏನು ಹೋರಾಟ ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ. ಇಲ್ಲಿ ನಾನು ಯಾರಿಗೂ ವಕ್ತಾರನಾಗಿ ಹೇಳಿಕೆ ಕೊಡಲು ಸಾಧ್ಯವಿಲ್ಲ. ನಾನು ಕೇವಲ ನನಗೆ ಮಾತ್ರ ವಕ್ತಾರ. ಪಕ್ಷದ ಅಧ್ಯಕ್ಷ ಸ್ಥಾನ ವಿಚಾರವನ್ನು ರಸ್ತೆಗೆ ತರಬೇಡಿ.

ಪಕ್ಷ ಬಿಟ್ಟವರಿಗೆ ಒಳ್ಳೆಯದಾಗಲಿ

ನಮ್ಮ ಪಕ್ಷ ಬಿಟ್ಟು ಹೋದ ಶಾಸಕರಿಗೆ ಒಳ್ಳೆಯದಾಗಲಿ. ಅವರು ಪಕ್ಷ ಬಿಟ್ಟು ಆರು ತಿಂಗಳಾಗಿದೆ. ನಾನು ಸದನದಲ್ಲಿ ಎಲ್ಲವನ್ನು ಹೇಳಿದ್ದೇನೆ. ಅವರು ಇಚ್ಛೆಪಟ್ಟು ಹೋಗಿದ್ದಾರೆ. ಅವರು ಏನು ಬಯಸಿ ಹೋಗಿದ್ದರೋ ಅದು ಅವರಿಗೆ ಸಿಗಲಿ ಎಂದು ಬಯಸುತ್ತೇನೆ.

Leave a Reply