ಬಿಜೆಪಿ ಸಭೆಯಿಂದ ಅನಂತಕುಮಾರ್ ಹೆಗಡೆಗೆ ನಿಷೇಧ!?

ಡಿಜಿಟಲ್ ಕನ್ನಡ ಟೀಮ್:

ನಿರಂತರವಾಗಿ ವಿವಾದಾತ್ಮ ಹೇಳಿಕೆ ನೀಡುತ್ತಿರುವ ಸಂಸದ ಅನಂತಕುಮಾರ್ ಹೆಗಡೆ ಅವರ ವಿರುದ್ಧ ಕಡೆಗೂ ಬಿಜೆಪಿ ಒಂದು ಮಟ್ಟಿಗೆ ಶಿಸ್ತು ಕ್ರಮ ಜರುಗಿಸಲು ಮುಂದಾಗಿದ್ದು, ಮಂಗಳವಾರ ನಡೆಯಲಿರುವ ಬಿಜೆಪಿ ಸಂಸದೀಯ ಸಭೆಗೆ ಹಾಜರಾಗದಂತೆ ನಿಷೇಧ ಹೇರಿಲಾಗಿದೆ ಎಂಬ ವರದಿ ಬಂದಿದೆ.

ಮಹಾತ್ಮಾ ಗಾಂಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿರೋಧ ಪಕ್ಷಗಳ ವಾಗ್ದಾಳಿಗೆ ಗುರಿಯಾಗಿದ್ದಲ್ಲದೆ ಪಕ್ಷಕ್ಕೆ ಮುಜುಗರ ತಂದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

ಇನ್ನು ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪಿಟಿಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ನಳೀನ್ ಕುಮಾರ್ ಕಟೀಲ್, ಈ ಹೇಳಿಕೆ ವಿಚಾರವಾಗಿ ಸ್ಪಷ್ಟನೆ ನೀಡುವಂತೆ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ ಎಂದಿದ್ದಾರೆ.

ಅನಂತಕುಮಾರ್ ಹೆಗಡೆ ಅವರ ಹೇಳಿಕೆ ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದ ಪಕ್ಷಕ್ಕೆ ಆಗುವ ಮುಖಭಂಗ ತಪ್ಪಿಸಲು ಅನೇಕ ನಾಯಕರು ಹೆಗಡೆ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.

ಬಿಜೆಪಿ ವಕ್ತಾರ ಗೋ ಮಧುಸೂದನ್ ಮಾತನಾಡಿ, ‘ಆರ್​​ಎಸ್​ಎಸ್​ ಮತ್ತು ಬಿಜೆಪಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಗೌರವಿಸುತ್ತದೆ. ಅನಂತ್​ ಕುಮಾರ್​ ಹೆಗಡೆಯವರ ಸ್ವಂತ ಅಭಿಪ್ರಾಯ ಏನೇ ಇರಬಹುದು, ಆದರೆ ಬಿಜೆಪಿ ಈ ಹೇಳಿಕೆಯನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಸಮರ್ಥಿಸುವುದಿಲ್ಲ’ ಎಂದಿದ್ದರು.

ಯಾರು ಎಷ್ಟೇ ಉಗಿದರೂ ಕ್ಯಾರೆ ಎನ್ನದ ಅನಂತಕುಮಾರ್ ಸಭೆಗೆ ನಿಷೇಧ ಹೇರಿ, ಶೋಕಾಸ್ ನೋಟೀಸ್ ಜಾರಿ ಮಾಡಿದ ತಕ್ಷಣ ತಮ್ಮ ಚಾಳಿ ಬಿಡುತ್ತಾರಾ ಅನ್ನೋದು ಸದ್ಯ ಎದ್ದಿರುವ ಪ್ರಶ್ನೆ.

Leave a Reply