ವಿಶ್ವನಾಥ್ ಹಾಗೂ ಎಂಟಿಬಿ ಮನವೊಲಿಕೆಯಲ್ಲಿ ಯಶಸ್ವಿಯಾದ್ರಾ ಯಡಿಯೂರಪ್ಪ?

ಡಿಜಿಟಲ್ ಕನ್ನಡ ಟೀಮ್:

ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಹೈಕಮಾಂಡ್ ಅನ್ನು ತಮ್ಮ ದಾರಿಗೆ ತರುವಲ್ಲಿ ಯಶಸ್ವಿಯಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದೆ ಈಗ ನೂತನ ಶಾಸಕರ ಮನವೂಲಿಕೆ ಹಾಗೂ ಉಪ ಚುನಾವಣೆಯಲ್ಲಿ ಸೋತವರನ್ನು ನಿಭಾಯಿಸುವ ಮಹತ್ತರ ಸವಾಲು ಎದುರಾಗಿದೆ. ಅದರಲ್ಲೂ ಚುನಾವಣೆಯಲ್ಲಿ ಸೋತಿರುವ ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅವರ ಬಹಿರಂಗ ಹೇಳಿಕೆಗಳು ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಈಗ ಯಡಿಯೂರಪ್ಪ ಅವರು ಈ ಇಬ್ಬರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.

ಉಪ ಚುನಾವಣೆಯಲ್ಲಿ ಸೋತ ಕಾಂಗ್ರೆಸ್‌, ಜೆಡಿಎಸ್‌ನ ಮಾಜಿ ಶಾಸಕರು ಇನ್ನೂ ಕೂಡ ಅರ್ಹರಾಗಿಲ್ಲ. ಹೀಗಾಗಿ ಸಚಿವ ಸ್ಥಾನ ಕೊಡುವುದು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಇದೇ ಕಾರಣಕ್ಕೆ ಮಾಜಿ ಶಾಸಕರಾದ ಹೆಚ್‌. ವಿಶ್ವನಾಥ್‌ ಹಾಗೂ ಹೊಸಕೋಟೆಯ ಎಂಟಿಬಿ ನಾಗರಾಜ್‌ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿ, ಸೋತವರು ಗೆದ್ದವರು ಎನ್ನದೆ ಎಲ್ಲರಿಗೂ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹ ಮಾಡಿದ್ದರು. ಆ ಬಳಿಕ ಸಿಎಂ ಯಡಿಯೂರಪ್ಪ ಇಬ್ಬರನ್ನು ಕರೆದು ಮಾತನಾಡಿ ಸಮಸ್ಯೆಯಿಂದ ಅರ್ಧ ಪ್ರಮಾಣದಲ್ಲಿ ಯಶಸ್ವಿಯಾಗಿದ್ದಾರೆ.

ಸಿಎಂ‌ ಯಡಿಯೂರಪ್ಪ ಭೇಟಿಗೆ ಆಗಮಿಸಿದ ಎಚ್ ವಿಶ್ವನಾಥ್ ಡಾಲರ್ಸ್‌ ಕಾಲೋನಿ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ರು. ಆ ಬಳಿಕ ಮಾತನಾಡಿದ ವಿಶ್ವನಾಥ್‌, ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಸಿಎಂ ಘೋಷಣೆ ಬಗ್ಗೆ ಚರ್ಚೆ ನಡೆಸಿದ್ರು. ಸೋತವರಿಗೆ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ‌ ಎಂಬುದು ಸುಪ್ರೀಂಕೋರ್ಟ್ ನೀಡಿದ ಆದೇಶದಲ್ಲಿ ಎಂಬುದನ್ನು ಸಿಎಂ ಮನವರಿಕೆ ಮಾಡಿಕೊಡಲು ಯತ್ನಿಸಿದ್ರು. ಆದ್ರೆ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಸಿಎಂಗೆ ಸ್ಪಷ್ಟೀಕರಣ ಕೊಡಲು ವಿಶ್ವನಾಥ್ ಕಸರತ್ತು ನಡೆಸಿದ್ರು. ಸುಪ್ರೀಂಕೋರ್ಟ್ ಆದೇಶವನ್ನೇ ತಪ್ಪಾಗಿ ಅರ್ಥೈಸಲಾಗ್ತಿದೆ ಎಂದು ವಿಶ್ವನಾಥ್ ವಾದ ಮಾಡಿದ್ರು. ಸೋತವರಿಗೆ ಸಚಿವ ಸ್ಥಾನ ಕೊಡಬಾರದು ಎಂಬ ಆದೇಶ ಆಗಿಲ್ಲ ಎಂದು ಸಮಜಾಯಿಷಿ ನೀಡಿದ್ರು. ಕಾನೂನು ತಜ್ಞರ ಜೊತೆ ಮತ್ತೊಮ್ಮೆ ಸುಪ್ರೀಂಕೋರ್ಟ್ ಆದೇಶದ ಪರಾಮರ್ಶೆ ನಡೆಬೇಕೆಂದು ವಿಶ್ವನಾಥ್ ಸಿಎಂಗೆ ಮನವಿ ಮಾಡಿದ್ರು.

ಸಿಎಂ ಯಡಿಯೂರಪ್ಪ ನಿವಾಸದಿಂದ ಹೊರಬಂದ ವಿಶ್ವನಾಥ್‌, ಸೋತವರಿಗೆ ಸಚಿವ ಸ್ಥಾನ ಕೊಡಲು ಕಾನೂನು ತೊಡಿಕಿದೆ ಎಂಬ ಸಿಎಂ ಹೇಳಿಕೆ‌ ಬಗ್ಗೆ ಈಗ ಚರ್ಚೆ ಬೇಡ. ಪದೇ ಪದೇ ಆ ಹೇಳಿಕೆ ಬಗ್ಗೆ ಚರ್ಚೆ ಮಾಡಿದ್ರೆ ಪ್ರಯೋಜನ ಇಲ್ಲ. ಸಂಪುಟ ಸೇರ್ಪಡೆ ಬಗ್ಗೆ ನಾನು ಸಿಎಂ ಜೊತೆ ಏನನ್ನೂ ಚರ್ಚೆ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಈ ಬಗ್ಗೆ ಸಿಎಂ ಬಿಎಸ್‌ ಯಡಿಯೂರಪ್ಪಗೆ ಗೊತ್ತಿದೆ. ಅವರೇ ಈ ಬಗ್ಗೆ ಎಲ್ಲಾ ತೀರ್ಮಾನ ಮಾಡ್ತಾರೆ ಎಂದಿದ್ದಾರೆ. ಈ ಮೂಲಕ ಮುಂದೆ ನನ್ನನ್ನು ಸಂಪುಟಕ್ಕೆ ಪರಿಗಣಿಸ್ತಾರೆ ಎಂಬುದನ್ನು ವಿಶ್ವನಾಥ್ ಪರೋಕ್ಷವಾಗಿ ಹೇಳಿದ್ದಾರೆ. ನಿಮಗೆ ಸಚಿವ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಗೆ ಸಿಎಂರನ್ನು ಕೇಳಿ ಎಂದು ಹೇಳಿ ತೆರಳಿದ್ದಾರೆ.

ಇನ್ನು ಅತ್ತ ಎಂಟಿಬಿ ನಾಗರಾಜ್‌ ಮುನಿಸಿಗೂ ಸಿಎಂ ಮದ್ದು ಕೊಟ್ಟಿದ್ದು, ಸಚಿವ ಸ್ಥಾನ ಕೊಡಲು ಸದ್ಯಕ್ಕೆ ಸಾಧ್ಯವಿಲ್ಲ. ನಿಮ್ಮೆಲ್ಲಾ ಕೆಲಸಗಳಿಗೂ ನಾನು ಸಪೋರ್ಟ್‌ ಮಾಡ್ತೇನೆ ಎಂದಿದ್ದಾರೆ ಎನ್ನಲಾಗಿದೆ. ಸಿಎಂ ಯಡಿಯೂರಪ್ಪ ಭರವಸೆಗಳಿಗೆ ಮಣಿದ ಎಂಟಿಬಿ ನಾಗರಾಜ್‌, ಇನ್ನುಂದೆ ಸಿಎಂ ಹಾಗು ಸರ್ಕಾರದ ವಿರುದ್ಧ ಮಾತನಾಡದಿರಲು ನಿರ್ಧಾರ ಮಾಡಿದ್ದಾರೆ. ಹೊಸಕೋಟೆಯಲ್ಲಿ ಮಾತನಾಡಿರುವ ಎಂಟಿಬಿ ನಾಗರಾಜ್‌,  ನಿನ್ನೆ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಸಿಎಂ ಕೊಟ್ಟ ಮಾತು ಉಳಿಸಿಕೊಳ್ಳುವ ಭರವಸೆ ಇದೆ. ಸೋತವರಿಗೆ ಸದ್ಯಕ್ಕೆ ಮಂತ್ರಿ ಸ್ಥಾನ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದ್ರೆ ಗೌರವಯುತವಾದ ಸ್ಥಾನ ನೀಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ಆರ್ ಶಂಕರ್ ಅವರನ್ನು ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡಲಾಗುವುದು. ಸಿಎಂ ವಚನ ಭ್ರಷ್ಟರಾಗಲಿಲ್ಲ, ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದಾರೆ. ಯಾವುದೇ ಅನುಮಾನ ಬೇಡ, ಸಚಿವ ಸ್ಥಾನ ಅಂತಲ್ಲ ಒಟ್ನಲ್ಲಿ ಅಧಿಕಾರ ನೀಡಲಿದ್ದಾರೆ ಎಂದಿದ್ದಾರೆ. ಒಟ್ಟಾರೆ ಸಚಿವ ಸ್ಥಾನ ಸಿಗಲ್ಲ ಎನ್ನುವ ಕಾರಣಕ್ಕೆ ಕುಪಿತರಾಗಿದ್ದ ಇಬ್ಬರ ಆಕ್ರೋಶ ತಣಿಸಿದ್ದಾರೆ.

Leave a Reply