ದ್ವಾರಕೀಶ್ ಅವರ ಮನೆ ಮಾರಿಸುವ ಕೆಲಸ ನನ್ನ ಜೀವನದಲ್ಲೇ ಮಾಡಲ್ಲ: ಕೆ.ಮಂಜು

ಡಿಜಿಟಲ್ ಕನ್ನಡ ಟೀಮ್:

ಆಯುಷ್ಮಾನ್ ಭವ ಚಿತ್ರದ ಹಣಕಾಸಿನ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಹಿರಿಯರು ಹಾಗೂ ನನ್ನ ಸ್ನೇಹಿತರೂ ಆದ ಜಯಣ್ಣ ಅವರು ಆತುರದಲ್ಲಿ ನನ್ನ ವಿರುದ್ಧ ಏಕೆ ಮಾತನಾಡಿದ್ದಾರೋ ಗೊತ್ತಿಲ್ಲ. ದ್ವಾರಕೀಶ್ ಅವರು ನನಗೆ ಸಹಾಯ ಮಾಡಿದ್ದು, ಅವರ ಮನೆ ಮಾರಿಸುವ ಕೆಲಸ ನನ್ನ ಜೀವನದಲ್ಲೇ ಮಾಡಲ್ಲ ಎಂದು ನಿರ್ಮಾಪಕ ಕೆ ಮಂಜು ತಿಳಿಸಿದ್ದಾರೆ.

ನಿರ್ಮಾಪಕರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ವಿವಾದಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೆ.ಮಂಜು, ಯೋಗಿಶ್ ದ್ವಾರಕೀಶ್ ಅವರು ಸಿನಿಮಾ ಮಾಡಲು ಮುಂದಾದಾಗ ಅವರಿಗೆ ನಾನೇ ಸಾಲ ಕೊಡಿಸಿದೆ. ನಂತರ ಸಿನಿಮಾ ವಿತರಣೆ ಹಕ್ಕನ್ನೂ ಕೇಳಿದೆ. ನಂತರ ಅವರು ನನಗೆ ನೀಡಲಿಲ್ಲ. ಇದಾದ ನಂತರ ನನಗೂ ಆ ಚಿತ್ರಕ್ಕೂ ಸಂಬಂಧವಿಲ್ಲ. ನಾನು ಜಯಣ್ಣ ಅವರಿಗೆ ಯಾವುದೇ ವಿಚಾರದಲ್ಲೂ ಧಮಕಿ ಹಾಕಿಲ್ಲ. ಧಮಕಿ ಹಾಕಲು ನಾನು ಅವರ ದುಷ್ಮನ್ ಅಲ್ಲ. ಅವರು ಒಳ್ಳೆಯ ಸ್ನೇಹಿತರು. ಆತುರದಲ್ಲಿ ನನ್ನ ವಿರುದ್ಧ ಏಕೆ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ನಾನು 15 ವರ್ಷಗಳ ಹಿಂದೆ ರಾಮ ಶಾಮ ಭಾಮ ಚಿತ್ರ ಮಾಡಲು ಹೋದಾಗ ನನಗೆ ಹಣದ ಕೊರತೆ ಇತ್ತು. ಆಗ ದ್ವಾರಕೀಶ್ ಅವರ ಮನೆಗೆ ಹೋದೆ. ನನ್ನನ್ನು ಬಾ ಕಂದ ಏನು ಬೇಕು ಅಂತಾ ಕೇಳಿದರು. ಹಣದ ಕೊರತೆ ಇದೆ ಎಂದಾಗ ಚೆಕ್ ಬರೆದುಕೊಟ್ಟು ನನಗೆ ಸಹಾಯ ಮಾಡಿದರು. ಆ ಸಹಾಯ ಎಂದಿಗೂ ಮರೆಯುವುದಿಲ್ಲ. ಇದೇ ಕಾರಣಕ್ಕಾಗಿ ನಾನು ಅವರ ಮಗ ಯೋಗೀಶ್ ಗೆ ಸಹಾಯ ಮಾಡಿಕೊಂಡು ಬರುತ್ತಿದ್ದೇನೆ. ನಾನೇ ಅವರಿಗೆ ಸಾಲ ಕೊಡಿಸಿದ್ದರೂ ಈವರೆಗೂ ನಾನು ಅವರಿಗೆ ತೊಂದರೆ ಕೊಟ್ಟಿಲ್ಲ. ಅವರಿಗೆ ಸಂಕಷ್ಟದ ಸಮಯ ಇದೆ. ಅದನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ ಎಂದರು.

ಜಯಣ್ಣ ಅವರು ಒಳ್ಳೆಯ ವ್ಯಕ್ತಿಯೇ, ಆದರೆ ನನ್ನ ವಿರುದ್ಧ ಅವರು ಆಡಿರುವ ಮಾತುಗಳಿಂದ ತುಂಬಾ ನೋವಾಗಿದೆ. ಕೆ ಮಂಜು ಸಹವಾಸ ಮಾಡಿದರೆ ಅವರ ಮನೆ ಮಾರಿಸುತ್ತಾನೆ ಅಂತಾ ಜಯಣ್ಣ ಅವರಿಗೆ ಅವರ ಜತೆಯಲ್ಲಿರುವವರು ಹೇಳಿಕೊಟ್ಟಿದ್ದಾರೆ. ನಾನು ನನ್ನ ಜನ್ಮದಲ್ಲೇ ದ್ವಾರಕೀಶ್ ಅವರ ಮನೆ ಮಾರಿಸುವ ಕೆಲಸ ಮಾಡಲ್ಲ ಎಂದರು.

Leave a Reply