ಕನ್ನಡ ಚಿತ್ರೋದ್ಯಮದ ಒಳಿತಿಗೆ ಪರ್ಸೆಂಟೇಜ್ ವ್ಯವಸ್ಥೆ!

ಡಿಜಿಟಲ್ ಕನ್ನಡ ಟೀಮ್:

ನಿರ್ಮಾಪಕರ ಬೇಡಿಕೆ ಹಿನ್ನೆಲೆಯಲ್ಲಿ ಎಲ್ಲ ನಿರ್ಮಾಪಕರ ಹಿತ ಕಾಪಾಡುವ ದೃಷ್ಟಿಯಿಂದ ಏಪ್ರಿಲ್ 2ರಿಂದ ರಾಜ್ಯದಲ್ಲೂ ಚಿತ್ರಮಂದಿರಗಳು ಹಾಗೂ ನಿರ್ಮಾಕರ ನಡುವೆ ಶೇಕಡವಾರು ಆದಾಯ ಹಂಚಿಕೆ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ತಿಳಿಸಿದೆ.

ಈ ವಿಚಾರವಾಗಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷರಾದ ಡಿ.ಕೆ ರಾಮಕೃಷ್ಣ ಅವರು, ಸದ್ಯ ಕನ್ನಡ ಚಿತ್ರೋದ್ಯಮದಲ್ಲಿ ವರ್ಷಕ್ಕೆ 250ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ದೊಡ್ಡ ನಿರ್ಮಾಪಕರು, ಸಣ್ಣ ನಿರ್ಮಾಪಕರು ಎಂದು ತಾರತಮ್ಯ ಇಲ್ಲದೇ ಎಲ್ಲರ ಹಿತಾಸಕ್ತಿ ಕಾಪಾಡಲು ರಾಜ್ಯದಲ್ಲೂ ಕೇರಳ ಮಾದರಿಯ ಶೇಕಡಾವಾರು ಪದ್ಧತಿ ಜಾರಿಗೆ ತರಬೇಕೆಂದು ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು ತೀರ್ಮಾನಿಸಿದ್ದೇವೆ ಎಂದರು.

ಈ ವಿಚಾರವಾಗಿ ಚಿತ್ರಮಂದಿರ ಮಾಲೀಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಈ ವ್ಯವಸ್ಥೆಯನ್ನು ಹೇಗೆ ಜಾರಿಗೆ ತರಬೇಕು. ಚಿತ್ರಕ್ಕೆ ದುಡ್ಡು ಹಾಕುವ ನಿರ್ಮಾಪಕನಿಗೂ ಹಾಗೂ ಚಿತ್ರಮಂದಿರ ಮಾಲೀಕರಿಗೂ ಹೇಗೆ ನುಕೂಲವಾಗುವಂತೆ ಈ ವ್ಯವಸ್ಥೆ ಅಳವಡಿಸಬೇಕು ಎಂಬುದನ್ನು ತೀರ್ಮಾನಿಸಲು ಸದ್ಯದಲ್ಲೇ ಸಮಿತಿ ರಚನೆ ಮಾಡಲಾಗುವುದು ಎಂದು ಹೇಳಿದರು.

ಈ ವೇಳೆ ಮಾತನಾಡಿದ ಸಂಘದ ಖಜಾಂಚಿ ಕೆ.ಮಂಜು, ಬೇರೆ ರಾಜ್ಯಗಳಲ್ಲಿ ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂದು ತಿಳಿಯಲು ನಾನು ಕೇರಳ ಹಾಗೂ ಚೆನ್ನೈಗೆ ಹೋಗಿದ್ದೆ. ಅಲ್ಲಿ ಅನೇಕ ವರ್ಷಗಳಿಂದ ಈ ವ್ಯವಸ್ಥೆ ಜಾರಿಯಲ್ಲಿದೆ. ಕೆಲವು ಕಡೆಗಳಲ್ಲಿ 65-35, 55-45ರ ಅನುಪಾತದಲ್ಲಿ ಶೇಕಡವಾರು ಹಂಚಿಕೆ ಮಾಡಿಕೊಳ್ಳಲಾಗುತ್ತಿದೆ. ಮೊದಲವಾರ, ಎರಡನೇ ವಾರ ಗಳಿಕೆ ಆಧಾರದ ಮೇಲೆ ಶೇಕಡವಾರು ಪ್ರಮಾಣ ನಿರ್ಧಾರ ಸೇರಿದಂತೆ ಇತರೆ ಪ್ಮುಖ ವಿಚಾರಗಳ ಬಗ್ಗೆ ರೂಪುರೇಷೆಯನ್ನು ಈ ಸಮಿತಿ ರಚಿಸಲಿದೆ ಎಂದರು.

Leave a Reply