ತಾಕತ್ತಿದ್ದರೆ ಸಿಎಂ ಅಭ್ಯರ್ಥಿ ಘೋಷಿಸಿ! ಬಿಜೆಪಿಗೆ ಕೇಜ್ರಿವಾಲ್ ಸವಾಲ್!

ಡಿಜಿಟಲ್ ಕನ್ನಡ ಟೀಮ್:

ದೆಹಲಿ ವಿಧಾನಸಭೆ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಆರೋಪ- ಪ್ರತ್ಯಾರೋಪ, ಸವಾಲು- ಪ್ರತಿಸವಾಲುಗಳ ಭರಾಟೆ ಜೋರಾಗಿದೆ. ಈ ಮಧ್ಯೆ ತಾಕತ್ತಿದ್ದರೆ ನಾಳೆ ಮಧ್ಯಾಹ್ನದ ಒಳಗಾಗಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಿಜೆಪಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ನಿನ್ನೆ ಪ್ರಕಟವಾದ ಸಮೀಕ್ಷೆಯಲ್ಲಿ ಎಎಪಿ 54-60 ಸ್ಥಾನ ಬರಲಿದೆ ಎಂದು ತಿಳಿಸಲಾಗಿದ್ದು, ಬಿಜೆಪಿ ಕೇವಲ 10-14 ಸ್ಥಾನ ಪಡೆಯುವ ನಿರೀಕ್ಷೆ ಇದೆ ಎಂದಿದೆ. ಇದರಿಂದ ಕೇಜ್ರಿವಾಲ್ ಆತ್ಮ ವಿಶ್ವಾಸ ಹೆಚ್ಚಾಗಿದ್ದು, ತಮ್ಮ ಪ್ರಚಾರಕ್ಕೆ ಇನ್ನಷ್ಟು ಉತ್ಸಾಹ ತಂದುಕೊಂಡಿದ್ದಾರೆ.

‘ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಹೇಳಿದ್ದಾರೆ. ಆದರೆ ಬಿಜೆಪಿಗೆ ಮತ​​ ಮಾಡಬೇಕಾದರೆ ದೆಹಲಿ ಮತದಾರರಿಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದು ಗೊತ್ತಾಗಬೇಕಿದೆ. ಫಲಿತಾಂಶದ ಪ್ರಕಟವಾದ ಬಳಿಕ ಅಸಮರ್ಥ ರಾಜಕಾರಣಿಯನ್ನು ಮುಖ್ಯಮಂತ್ರಿ ಮಾಡಿದರೆ ದೆಹಲಿ ಜನತೆಗೆ ಬಗೆದ ದ್ರೋಹವಾಗುತ್ತದೆ. ಹಾಗಾಗಿ ನಾಳೆ ಮಧ್ಯಾಹ್ನ 1 ಗಂಟೆ ಒಳಗಾಗಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಅಮಿತ್​​ ಶಾ ಘೋಷಿಸಲಿ’ ಎಂದು ಸವಾಲು ಹಾಕಿದ್ದಾರೆ.

ಈಗಾಗಲೇ ಸತತ ಐದು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿಗೆ ಈ ಭಾರಿಯ ಚುನಾವಣೆ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅಖಾಡಕ್ಕೆ ಇಳಿದಿದ್ದು ಸತತ ಎರಡನೇ ದಿನ ಪ್ರಚಾರ ನಡೆಸಿದ್ದಾರೆ.

Leave a Reply