ಬಿಎಸ್ ವೈಗೆ ಸೈನಿಕ ತಂದ ಸಂಕಷ್ಟ!

ಡಿಜಿಟಲ್ ಕನ್ನಡ ಟೀಮ್:

ಬಿ.ಎಸ್ ಯಡಿಯೂರಪ್ಪ ಅವರ ಅವರ ಸಚಿವ ಸಂಪುಟದಲ್ಲಿ ಬಿಜೆಪಿಗಾಗಿ ದುಡಿದ ನಿಷ್ಠಾವಂತ ನಾಯಕರಿಗಿಂತ ಮೈತ್ರಿ ಸರ್ಕಾರ ಬೀಳಿಸಿದ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಇದೇ ಮಾನದಂಡದಲ್ಲಿ ಚುನಾವಣೆಯಲ್ಲಿ ಸೋತಿದ್ದರೂ ಸಿಪಿ ಯೋಗೇಶ್ವರ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಯಡಿಯೂರಪ್ಪ ಮುಂದಾಗಿದ್ದಾರೆ. ಯಡಿಯೂರಪ್ಪ ಅವರ ಈ ನಡೆ ಈಗ ಮೂಲ ಬಿಜೆಪಿ ನಾಯಕರನ್ನು ಕೆರಳಿಸಿದೆ.

ನಿನ್ನೆ ರಾಜು ಗೌಡ, ರೇಣುಕಾಚಾರ್ಯ ಸೇರಿದಂತೆ ಅನೇಕರು ಯೋಗೇಶ್ವರ್ ಸಂಪುಟ ಸೇರ್ಪಡೆ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಜತೆಗೆ 10 ಶಾಸಕರು ಪ್ರತ್ಯೇಕ ಸಭೆ ನಡೆಸಿರೋದು ಬಿಜೆಪಿಯಲ್ಲಿನ ಬಂಡಾಯವನ್ನು ಬಯಲಿಗೆಳೆದಿತ್ತು.

ಇಂದು ಕೂಡ ಅನೇಕ ಶಾಸಕರು ಸಭೆ ಸೇರುವ ಸಾಧ್ಯತೆ ಇದೆ. ಈಗಾಗಲೇ ಚುನಾವಣೆಯಲ್ಲಿ ಗೆದ್ದು ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಅನೇಕ ನಾಯಕರಿದ್ದಾರೆ. ಆ ಪೈಕಿ ಆರ್.ರಾಮದಾಸ್, ಮುರುಗೇಶ ನಿರಾಣಿ, ಕರುಣಾಕರ ರೆಡ್ಡಿ ಸೇರಿದಂತೆ ಅನೇಕ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ.

ಇನ್ನು ಮಧ್ಯ ಕರ್ನಾಟಕ ಹಾಗೂ ಕರಾವಳಿ ಭಾಗದ ಶಾಸಕರೂ ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಿದ್ದು ಆಮೂಲಕ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಇನ್ನು ಈ ಮಧ್ಯೆ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡಬೇಕು ಎಂದು ರಮೇಶ್ ಜಾರಕಿಹೊಳಿ ಬಣದಿಂದ ಮುಂದುವರಿದಿದ್ದು, ಇಂದು ಬಾಲಚಂದ್ರ ಜಾರಕಿಹೊಳಿ ಅವರು ಸಿಎಂ ಅವರನ್ನು ಭೇಟಿ ಮಾಡಿದ್ದಾರೆ.

ಮಾಜಿ ಶಾಸಕ ಆರ್ ಶಂಕರ್ ತಮ್ಮ ಕುಟುಂಬ ಸಮೇತರಾಗಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮನ್ನು ಪಕ್ಷ ಕೈ ಬಿಡಲ್ಲ ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ.

Leave a Reply