ಸಿಯಾಚಿನ್, ಲಡಾಖ್ ನಲ್ಲಿ ಯೋಧರಿಗೆ ಆಹಾರ, ವಸ್ತ್ರಗಳ ಕೊರತೆ!

ಡಿಜಿಟಲ್ ಕನ್ನಡ ಟೀಮ್:

ಪ್ರಾಣವನ್ನೇ ಪಣಕ್ಕಿಟ್ಟು ಅತ್ಯಂತ ಭೀಕರ ವಾತಾವರಣದಲ್ಲಿ ದೇಶ ಕಾಯುತ್ತಿರುವ ಯೋಧರಿಗೆ ಸಮರ್ಪಕವಾಗಿ ಆಹಾರ ಪದಾರ್ಥಗಳ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂಬ ಕಹಿ ಸತ್ಯವನ್ನು ಸಿಎಜಿ ವರದಿ ಹೊರಹಾಕಿದೆ.

ಕೇವಲ ಆಹಾರ ಪದಾರ್ಥಗಳು ಮಾತ್ರವಲ್ಲ ಸಿಯಾಚಿನ್, ದೋಕ್ಲಾಮ್ ಹಾಗೂ ಲಡಾಖ್ ಗಡಿಯಲ್ಲಿ ಯೋಧರಿಗೆ ಚಳಿಗಾಲದ ವಸ್ತ್ರಗಳು, ಹಿಮಕನ್ನಡಕಗಳು, ಬೂಟ್ ಗಳು ಪೂರೈಕೆ ಆಗಿಲ್ಲ ಎಂಬ ಅಂಶ ಬಹಿರಂಗವಾಗಿದೆ.

ಈ ವಿಚಾರವಾಗಿ ಸಿಎಜಿಗೆ ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯ, ಸೈನಿಕರಿಗೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ಸೇನಾ ಮುಖ್ಯ ಕಚೇರಿಗಳಲ್ಲಿ ಸಂಗ್ರಹಿಸಲಾಗಿದೆ. ಶೀಘ್ರದಲ್ಲೇ ಅವುಗಳನ್ನು ಸೈನಿಕರನ್ನು ನಿಯೋಜಿಸಲಾಗಿರುವ ಕಡೆಗಳಲ್ಲಿ ಪೂರೈಸಲಾಗುವುದು ಎಂದು ಹೇಳಿದೆ.

ಇನ್ನು ಸಿಎಜಿ ವರದಿಗೆ ಪ್ರತಿಕ್ರಿಯೆ ನೀಡಿರುವ ಸೇನಾ ಅಧಿಕಾರಿಯೊಬ್ಬರು, ಈ ವರದಿ 2015-16 ರಿಂದ 2017-18ನೇ ಸಾಲಿನ ಅವಧಿಯ ಅಧ್ಯಯನವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಪರಿಸ್ಥಿತಿ ಸುಧಾರಿಸಿದ್ದು, ಸಿಯಾಚಿನ್ ಪ್ರದೇಶದಲ್ಲಿ ಯಾವುದೇ ವಸ್ತ್ರಗಳ ಕೊರತೆ ಇಲ್ಲ ಎಂದಿದ್ದಾರೆ.

ಸದ್ಯ ಪ್ರತಿ ಸೈನಿಕರಿಗೆ ನೀಡಲಾಗಿರುವ ವಸ್ತ್ರಗಳ ಬೆಲೆ 1 ಲಕ್ಷಕ್ಕೂ ಹೆಚ್ಚಿನದ್ದಾಗಿದೆ. ಇದನ್ನು ಸ್ವದೇಶದಲ್ಲೇ ಉತ್ಪಾದನೆ ಮಾಡುವ ಉದ್ದೇಶವಿದ್ದು, ಇದರ ಗುಣಮಟ್ಟ ಹೆಚ್ಚಿಸುವ ಗುರಿಯೂ ಹೊಂದಿರುವುದಾಗಿ ತಿಳಿಸಿದ್ದಾರೆ.

Leave a Reply