ವಲಸಿಗರಿಗೆ ಮಾತ್ರ ಸಚಿವ ಸ್ಥಾನ! ಮುನಿಸಿಕೊಂಡ ಮನೆ ಮಕ್ಕಳು?

ಡಿಜಿಟಲ್ ಕನ್ನಡ ಟೀಮ್:

ನಾಳೆ ಬೆಳಗ್ಗೆ 10.30 ಕ್ಕೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ. 10 ಜನ ನೂತನ ಶಾಸಕರು ಹಾಗು ಕೆಲವರು ಹಾಲಿ ಬಿಜೆಪಿ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಡಲಾಗುತ್ತೆ ಎಂದು ಹೇಳಲಾಗಿತ್ತು. ಕಡೇ ಗಳಿಗೆಯಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಸಂಜೆ ಮಾಧ್ಯಮಗಳ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿರುವ ಸಿಎಂ ಯಡಿಯೂರಪ್ಪ, ದೆಹಲಿಯಿಂದ ನಮ್ಮ ರಾಷ್ಟ್ರೀಯ ನಾಯಕರು ಮಾತನಾಡಿ ಕೇವಲ 10 ಜನರನ್ನು ಮಾತ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದಿದ್ದಾರೆ. ಉಳಿದವರನ್ನು ಮುಂದಿನ ದಿನಗಳಲ್ಲಿ ಮಾಡಿ ಎಂದಿದ್ದಾರೆ. ಹೀಗಾಗಿ ನಾಳೆ ಕೇವಲ ನೂತನ ಶಾಸಕರಿಗೆ ಮಾತ್ರ ಅವಕಾಶ ಎಂದಿದ್ದಾರೆ.

ಪಕ್ಷದಿಂದ ಗೆದ್ದು ಶಾಸಕರಾದವರ ಕಥೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಉಳಿದವರ ಬಗ್ಗೆ ದೆಹಲಿಗೆ ತೆರಳಿ ತೀರ್ಮಾನ ಮಾಡಲಾಗುವುದು. ದೆಹಲಿಗೆ ಬನ್ನಿ ಎಂದು ರಾಷ್ಟ್ರೀಯ ನಾಯಕರು ಹೇಳಿದ್ದಾರೆ.

ನೂರಕ್ಕೆ ನೂರರಷ್ಟು ಉಮೇಶ್ ಕತ್ತಿಯವರನ್ನು ಮಂತ್ರಿಯಾಗಿ ಮಾಡೇ ಮಾಡ್ತೇನೆ. ನಾಳೆಯೇ ಉಮೇಶ್ ಕತ್ತಿ ಪ್ರಮಾಣ ವಚನ ಸ್ವೀಕಾರ ಮಾಡಬೇಕಿತ್ತು. ಆದರೆ ರಾಜೀನಾಮೆ ಕೊಟ್ಟವರನ್ನು ಮಾತ್ರ ಸೇರಿಸಿಕೊಳ್ಳಿ ಎಂದಿದ್ದಾರೆ. ಹೀಗಾಗಿ ನಾಳೆ ಉಮೇಶ್ ಕತ್ತಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಸಿಎಂ ಯಡಿಯೂರಪ್ಪ ಮೇಲೆ ಶಾಸಕ ಉಮೇಶ್ ಕತ್ತಿ ಮುನಿಸು ಜೋರಾಗಿದ್ದು, ಉಮೇಶ್ ಕತ್ತಿಯನ್ನು ಸಿಎಂ ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಕೋಪ ಹಾಗೂ ನಿರಾಸೆಯಿಂದ ಕುದಿಯುತ್ತಿರುವ ಉಮೇಶ್ ಕತ್ತಿ, ಸಿಎಂ ಯಡಿಯೂರಪ್ಪ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಬಳಿಕ ಉಮೇಶ್ ಕತ್ತಿಯನ್ನು ಭೇಟಿ ಮಾಡಿ ಸಮಾಧಾನ ಮಾಡುವ ಜವಾಬ್ದಾರಿಯನ್ನು ಇಬ್ಬರು ಸಚಿವರಿಗೆ ವಹಿಸಲಾಗಿತ್ತು.

ಇಬ್ಬರು ಸಚಿವರಾದ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಗೃಹ ಸಚಿವ ಬಸವರಾಜ್ ಬೊಮಾಯಿ ಅವರ್ ಕೈಗೆ ಸಿಗದೇ ಉಮೇಶ್ ಕತ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಮನೆಗೆ ಬಂದ ನೆಂಟರನ್ನು ಸಮಾಧಾನ ಮಾಡಲು ಮುಂದಾದ ಬಿಜೆಪಿ ಮನೆಯಲ್ಲಿ ಮನೆ ಮಕ್ಕಳು ಬೇಸರಿಸಿಕೊಂಡು ಹೋಗಿದ್ದಾರೆ. ಮುಂದೆ ಮನೆ ಮುರಿಯುತ್ತಾ..? ಅಥವಾ ಮಕ್ಕಳು ಎರಡನೇ ಪಂಕ್ತಿಯಲ್ಲಿ ಊಟ ಮಾಡ್ತಾರಾ ಕಾದು ನೋಡ್ಬೇಕು.

Leave a Reply