ಬಿಎಸ್ ವೈ ಆಪ್ತರು ವರ್ಸಸ್ ಯೋಗೇಶ್ವರ್‌ ನಡುವಣ ಸಮರದಲ್ಲಿ ಗೆಲ್ಲೋದ್ಯಾರು?

ಡಿಜಿಟಲ್ ಕನ್ನಡ ಟೀಮ್:

ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಸಚಿವ ಸಂಪುಟ ಸೇರ್ಪಡೆ ಆಗ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ವು. ಕೂಡಲೇ ಮೂಲ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ರು. ಸೋತವರಿಗೆ ಸಚಿವ ಸ್ಥಾನ ಕೊಡುತ್ತಾ ಹೋದರೆ ಗೆದ್ದವರ ಕಥೆ ಏನು..? ಎಂದು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ರು. ಆ ಬಳಿಕ ಸಿ.ಪಿ ಯೋಗೇಶ್ವರ್ ಪರವಾಗಿ ಉಪಮುಖ್ಯಮಂತ್ರಿ ಸಿ. ಅಶ್ವತ್ಥ ನಾರಾಯಣ್ ಮನವಿ ಮಾಡಿ, ನಿಮಗೆ ಏನು ಬೇಕು ಎನ್ನುವುದನ್ನು ಪಕ್ಷದಲ್ಲಿ ಕೇಳಿಕೊಳ್ಳಿ ಆದರೆ ಯೋಗೇಶ್ವರ್ ವಿಚಾರದಲ್ಲಿ ತೊಂದರೆ ಮಾಡಲು ಮುಂದಾಗಬೇಡಿ ಎಂದು ಕೈ ಮುಗಿದು ಮನವಿ ಮಾಡಿದ್ದಾರೆ. ಶಾಸಕ ಗೂಳಿಹಟ್ಟಿ ಶೇಖರ್ ಕೂಡ, ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ಕೊಡಬೇಕು, ಸರ್ಕಾರ ರಚನೆಯಲ್ಲಿ ಅವರ ಪಾತ್ರವಿದೆ ಎಂದಿದ್ರು.

ಯೋಗೇಶ್ವರ್ ವಿರುದ್ಧ ಸಿಡಿದೆದ್ದವರಲ್ಲಿ ಸಿಎಂ ಯಡಿಯೂರಪ್ಪ ಆಪ್ತ ಹಾಗು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮೊದಲಿಗರು. ಆ ಬಳಿಕ ಯಡಿಯೂರಪ್ಪ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರೋ ಶಾಸಕ ರಾಜೂಗೌಡ ಕೂಡ ವಿರೋಧ ಮಾಡಿದ್ರು. ಈ ಇಬ್ಬರು ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಮೇರೆಗೆ ಬಂಡಾಯ ಸಾರಿದ್ದಾರೆ ಎನ್ನಲಾಗ್ತಿದೆ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡುವುದು ಸ್ವತಃ ಸಿಎಂ ಯಡಿಯೂರಪ್ಪ ಅವರಿಗೆ ಇಷ್ಟವಿಲ್ಲ. ಇಷ್ಟವಿದ್ದರೂ ಹೈಕಮಾಂಡ್ ಸೂಚಿಸಿರುವ ವ್ಯಕ್ತಿಗೆ ಸಚಿವ ಸ್ಥಾನ ಕೊಡಬೇಕಿದೆ. ಆದರೆ ಆಪರೇಷನ್ ಕಮಲದಲ್ಲಿ ಸಹಾಯ ಮಾಡಿರುವ ಯೋಗೇಶ್ವರ್‌ಗೆ ಅಷ್ಟು ಸುಲಭವಾಗಿ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ ಎನ್ನಲಾಗದು. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ ಎಂದರೆ ಆಪರೇಷನ್ ರಹಸ್ಯ ಬಯಲಾಗುವ ಭೀತಿಯಿದೆ. ಅದರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಆಗದಿದ್ದರೂ ಸರ್ಕಾರಕ್ಕೆ ಮುಜುಗರ ಆಗೋದ್ರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ವಿರೋಧ ಸೃಷ್ಟಿಸಿ ಆ ಬಳಿಕ ಬೇರೊಂದು ಹುದ್ದೆ ತೋರಿಸುವ ಪ್ರಯತ್ನಗಳು ನಡೆದಿವೆ ಎನ್ನಲಾಗಿದೆ.

ಮುಖ್ಯಮಂತ್ರಿಗಳ ಯೋಜನೆ ಅರಿತಿರುವ ಸಿ.ಪಿ ಯೋಗೇಶ್ವರ್ ಮೂಲ ಬಿಜೆಪಿ ಶಾಸಕರ ವಿರುದ್ಧ ಸಿಡಿದೆದ್ದಿದ್ದಾರೆ. ವಿಜಯೇಂದ್ರ ಹಾಗೂ ಸಿಎಂ ಯಡಿಯೂರಪ್ಪ ಮುಂದೆ ತನ್ನ ಆಕ್ರೋಶ ವ್ಯಕ್ತಪಡಿಸಿರುವ ಯೋಗೇಶ್ವರ್, ಸರ್ಕಾರ ರಚನೆಗೆ ಕಾರಣ ಆಗಿರೋರು‌ ನಾವು, ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋದವರು ನಾವು, ಅವರಿಂದ ರಾಜೀನಾಮೆ ಕೊಡಿಸಿ, ಆ ಮೂಲಕ ಬಿಜೆಪಿ ಸರ್ಕಾರ ರಚನೆ ಮಾಡಿದ್ದೇವೆ. ಆದರೆ ಈಗ ನಿಮ್ಮ ಆಪ್ತ ಶಾಸಕರು ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ವಿರೋಧ ಮಾಡ್ತಿರೋದು ಸರೀನಾ..? ಎಂದು ಪ್ರಶ್ನಿಸಿದ್ದಾರೆ. ಈಗ ವಿರೋಧ ಮಾಡುವ ಶಾಸಕರು, ಆಪರೇಷನ್ ಕಮಲ ನಡೆಸಿ ಸರ್ಕಾರ ರಚನೆ ಮಾಡುವಾಗ ಇವರೆಲ್ಲರು ಏನು ಮಾಡ್ತಿದ್ರು ಎಂದು ಕಿಡಿಕಾರಿದ್ದು, ಈ ವೇಳೆ ಸಿಪಿ ಯೋಗೇಶ್ವರ್ ಅವರನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ಸಮಾಧಾನ ಮಾಡಿದರು ಎನ್ನಲಾಗಿದೆ.

ಸಿ.ಪಿ ಯೋಗೇಶ್ವರ್ ಅವರನ್ನು ಸಮಾಧಾನ ಮಾಡಿದ ಬಳಿಕ ಸಿಎಂ ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳಿದ್ದಾರೆ. ಯೋಗೇಶ್ವರ್ ಅವರನ್ನು ಸಿಎಂ ಪುತ್ರ ವಿಜಯೇಂದ್ರ ರಹಸ್ಯ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು, ಸ್ವತಃ ತನ್ನ ಕಾರಿನಲ್ಲೇ ಯೋಗೇಶ್ವರ್‌ರನ್ನು ಕರೆದುಕೊಂಡು ಹೋಗಿದ್ದಾರೆ. ಯೋಗೇಶ್ವರ್‌ಗೆ ಸದ್ಯದ ಪರಿಸ್ಥಿತಿ ಬಗ್ಗೆ ಅರ್ಥ ಮಾಡಿಸಿ, ಈಗ ವಿರೋಧದಿಂದ ಮಂತ್ರಿ ಸ್ಥಾನ ಕೊಡುವುದಕ್ಕೆ ಅಡ್ಡಿಯಾದರೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಖಚಿತವಾಗಿ ಸಿಗಲಿದೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನವನ್ನೂ ಕೊಡಿಸಲಾಗುವುದು ಎಂದು ಯೋಗೇಶ್ವರ್‌ಗೆ ಭರವಸೆ ಕೊಡಲಿದ್ದಾರೆ. ಸಿ.ಪಿ ಯೋಗೇಶ್ವರ್ ಅವರನ್ನು ಈ ರೀತಿ ಸಮಾಧಾನ ಮಾಡುವ ಮೂಲಕ ಸಂಘ ಪರಿವಾರದ ಆಯ್ಕೆಯಾದ ಅರವಿಂದ ಲಿಂಬಾವಳಿಯನ್ನು ಸಂಪುಟ ಸೇರಿಸಿಕೊಳ್ಳಲು ಇರುವ ಅಡ್ಡಿಯನ್ನು ಯಡಿಯೂರಪ್ಪ ನಿವಾರಿಸಲಿದ್ದಾರೆ ಎನ್ನುವ ಮಾಹಿತಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡ್ತಿದೆ.

Leave a Reply