ಗಾಂಧೀಜಿ ಅಂದ್ರೆ ನಮಗೆ ಜೀವನ: ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್:

ಅತ್ತ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟವನ್ನು ನಾಟಕ ಎಂದು ಬಣ್ಣಿಸಿದರೆ, ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧೀಜಿ ಎಂದರೆ ನಮಗೆ ಜೀವನ ಎಂದಿದ್ದಾರೆ.

ಲೋಕಸಭೆಯಲ್ಲಿ ಇಂದು ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ಭಾಷಣ ಮಾಡಿದ ಮೋದಿ, ಅನಂತಕುಮಾರ್ ಹೆಗಡೆ ಸೇರಿದಂತೆ ಕೆಲವು ಬಿಜೆಪಿ ನಾಯಕರ ಗಾಂಧಿ ವಿರೋಧಿ ಹೇಳಿಕೆಯಿಂದ ಆಗಿರುವ ನಷ್ಟಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಮೋದಿ ಹೇಳಿದ್ದಿಷ್ಟು…

ಮಹಾತ್ಮಾ ಗಾಂಧಿ ನಿಮಗೆ ರಾಜಕೀಯ ಪ್ರಚಾರದ ಟ್ರೇಲರ್ ಆಗಿರಬಹುದು, ಆದರೆ ಗಾಂಧೀಜಿ ಎಂದರೆ ನಮಗೆ ಜೀವನ.

ನವ ಭಾರತ ನಿರ್ಮಾಣಕ್ಕೆ ರಾಷ್ಟ್ರಪತಿಗಳು ಸರ್ಕಾರದ ದೂರದೃಷ್ಟಿಗಳನ್ನು ತಮ್ಮ ಭಾಷಣದಲ್ಲಿ ಹೇಳಿದ್ದರು. ಈ ಶತಮಾನದ ಮೂರನೇ ದಶಕದ ಹೊತ್ತಿನಲ್ಲಿ ರಾಷ್ಟ್ರಪತಿಗಳು ಹೀಗೆ ಹೇಳಿದ್ದಾರೆ. ಅವರ ಮಾತುಗಳು ಭರವಸೆಗಳ ಸ್ಪೂರ್ತಿಯನ್ನು ನಮ್ಮಲ್ಲಿ ತುಂಬಿದ್ದು ಮುಂದಿನ ದಿನಗಳಲ್ಲಿ ದೇಶವನ್ನು ಮುನ್ನಡೆಸುವ ಒಂದು ನೀಲನಕ್ಷೆಯನ್ನು ನಮಗೆ ಹಾಕಿಕೊಟ್ಟಿದೆ.
ಹಿಂದಿನ ಸರ್ಕಾರದ ರೀತಿಯಲ್ಲೇ ಆಲೋಚನೆ ಮಾಡಿಕೊಂಡು ನಾವು ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರೆ ರಾಮ ಜನ್ಮಭೂಮಿ ವಿವಾದ ಇನ್ನೂ ಬಗೆಹರಿಯುತ್ತಿರಲಿಲ್ಲ. ಕರ್ತಾರ್ ಪುರ ಕಾರಿಡಾರ್ ಯೋಜನೆ ಪೂರ್ಣವಾಗುತ್ತಿರಲಿಲ್ಲ. ಭಾರತ-ಬಾಂಗ್ಲಾದೇಶ ಭೂ ಒಪ್ಪಂದ ಏರ್ಪಡುತ್ತಿರಲಿಲ್ಲ. ಸಂವಿಧಾನ ವಿಧಿ 370 ರದ್ದು ಆಗುತ್ತಿರಲಿಲ್ಲ. ತ್ರಿವಳಿ ತಲಾಖ್ ನಿಂದ ಮುಸಲ್ಮಾನ ಮಹಿಳೆಯರು ಕಷ್ಟಪಡುವುದರಿಂದ ಇನ್ನೂ ಹೊರಬರುತ್ತಿರಲಿಲ್ಲ. ಅತ್ಯಾಚಾರವೆಸಗಿದ ಬಾಲಾಪರಾಧಿಗಳಿಗೆ ಶಿಕ್ಷೆಯಾಗುತ್ತಿರಲಿಲ್ಲ.
ಸರ್ಕಾರ ಸದನದಲ್ಲಿ ಅನೇಕ ಮಹತ್ವದ ಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಇಷ್ಟೆಲ್ಲಾ ಗಡಿಬಿಡಿ ಏಕೆ ಎಂದು ಹಲವರು ಮಾತನಾಡಿಕೊಂಡರು. ವಿರೋಧ ಪಕ್ಷಗಳ ಸದಸ್ಯೆರೆಡೆಗೆ ಕೈತೋರಿಸಿ ಮೋದಿ, ಇಂದು ಜಗತ್ತು ನಮ್ಮಿಂದ ಅಪಾರ ನಿರೀಕ್ಷಿಸುತ್ತಿದೆ. ಈ ಸಂದರ್ಭದಲ್ಲಿ ಧೈರ್ಯ ತೋರಿಸಿ ಸವಾಲುಗಳನ್ನು ಎದುರಿಸಿ ನಾವು ಕೆಲಸ ಮಾಡಬೇಕು. ಸಮಸ್ಯೆ ಬಗೆಹರಿಯದೆ ಸಮಸ್ಯೆಯಾಗಿಯೇ ಉಳಿಯಲು ಭಾರತ ಇನ್ನು ಮುಂದೆ ಕಾಯುವುದಿಲ್ಲ. ಹೀಗಾಗಿ ನಮ್ಮ ಸರ್ಕಾರದ ಗುರಿ: ವೇಗ, ಪ್ರಮಾಣ, ನಿರ್ಣಯ, ನಿರ್ಣಾಯಕತೆ, ಸೂಕ್ಷ್ಮತೆ ಮತ್ತು ಪರಿಹಾರಗಳಾಗಿವೆ.
ದೇಶದ ಜನ ಸರ್ಕಾರ ಬದಲಿಸಿದರು, ನಾವು ಜನರ ಜೊತೆಗಿನ ಸಂಬಂಧ ಹಾಗೂ ಅವರ ಆಶಯಗಳನ್ನು ಬದಲಿಸುತ್ತೇವೆ. ಹೊಸ ಆಲೋಚನೆಗಳನ್ನು ಹೊಂದಿರುವ ಜನರ ಜೊತೆ ಕೆಲಸ ಮಾಡಲು ದೇಶ ಇಂದು ಇಚ್ಛಿಸುತ್ತಿದೆ. ಹೀಗಾಗಿ ಇಂದು ನಾವು ಆಡಳಿತ ಸ್ಥಾನದಲ್ಲಿದ್ದೇವೆ.

ಸಿಎಎ ವಿಚಾರವನ್ನೂ ಪ್ರಸ್ತಾಪಿಸಿದ ಪ್ರಧಾನಿ ಮೋದಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಪತ್ರದ ಅಂಶ ಉಲ್ಲೇಖ ಮಾಡಿ. ಸಿಎಎ ದೇಶಕ್ಕೆ ಅಗತ್ಯವಾದ ಕಾನೂನು ಎಂದು ತಿಳಿಸಿದರು.

Leave a Reply