ಅವಿರೋಧದ ಆಯ್ಕೆ ಕನಸು ಭಗ್ನ! ಸವದಿ ವಿರುದ್ಧ ತಂತ್ರ ರೂಪಿಸಿದ್ದು ಯಾರು?

ಡಿಜಿಟಲ್ ಕನ್ನಡ ಟೀಮ್:

ವಿಧಾನ ಪರಿಷತ್ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿ ಉಪಮುಖ್ಯಮಂತ್ರಿ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವ ಕನಸು ಕಾಣುತ್ತಿದ್ದ ಲಕ್ಷ್ಮಣ ಸವದಿಗೆ ಈಗ ಪ್ರತಿಸ್ಪರ್ಧಿ ಶಾಕ್ ಎದುರಾಗಿದೆ.

ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿಕೆ ಹಾಗೂ ಕಾಂಗ್ರೆಸ್ ಜೆಡಿಎಸ್ ನಾಯಕರ ವಾಕ್ಸಮರದ ಮಧ್ಯೆಯೂ ಮೈತ್ರಿ ಅಭ್ಯರ್ಥಿ ಕಣಕ್ಕಿಳಿದಿರೋದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಈಗ ಪ್ರತಿಸ್ಪರ್ಧಿ ಎದುರಾಗಿರುವ ಕಾರಣ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಶಾಸಕರು ಅಡ್ಡ ಮತದಾನ ಮಾಡುವ ಆತಂಕ ಲಕ್ಷ್ಮಣ ಸವದಿ ಅವರನ್ನು ಕಾಡುತ್ತಿದೆ.

ಲಕ್ಷ್ಮಣ ಸವದಿ ವಿರುದ್ಧ ಸಂಚು ರೂಪಿಸುತ್ತಿರುವವರು ಯಾರು? ಈ ಸಂಚಿನಿಂದ ಸವದಿ ಸೋತರೆ ಯಾರಿಗೆ ಲಾಭ ಎಂದು ನೋಡುವುದಾದರೆ, ನಮ್ಮ ಮುಂದೆ ಬರುವ ಹೆಸರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ!

ಹೌದು, ಹೈಕಮಾಂಡ್‌ ಆದೇಶದಿಂದಾಗಿ ಸವಡಿಯನ್ನು ಡಿಸಿಎಂ ಮಾಡಿದ ಯಡಿಯೂರಪ್ಪ, ನಂತರ ಸವದಿ ಅವರ ಜೊತೆ ಆದಷ್ಟು ಅಂತರ ಕಾಯ್ದುಕೊಂಡರು.

ಲಕ್ಷ್ಮಣ ಸವದಿಯನ್ನು ಡಿಸಿಎಂ ಸ್ಥಾನದಿಂದ ಕೆಳಕ್ಕಿಳಿಸಿ ಆ ಸ್ಥಾನವನ್ನು ರಮೇಶ್‌ ಜಾರಕಿಹೊಳಿಗೆ ಕಟ್ಟಲು ಯಡಿಯೂರಪ್ಪ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಯಡಿಯೂರಪ್ಪ ಚಿತಾವಣೆ ಅರಿತ ಲಕ್ಷ್ಮಣ ಸವದಿ ದೆಹಲಿಯಲ್ಲಿ ಹೈಕಮಾಂಡ್‌ ಜೊತೆಗೆ ಮಾತನಾಡಿ ಡಿಸಿಎಂ ಪಟ್ಟ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆ ಬಳಿಕ ಪರಿಷತ್‌ಗೆ ಆಯ್ಕೆ ಮಾಡಿ ಡಿಸಿಎಂ ಪೋಸ್ಟ್‌ ಉಳಿಸುವಂತೆಯೂ ಹೈಕಮಾಂಡ್‌ ಸೂಚಿಸಿತ್ತು.

ಹೈಕಮಾಂಡ್‌ ಸೂಚನೆ ಎನ್ನುವಂತೆ ಪರಿಷತ್‌ ಚುನಾವಣೆಗೆ ದಿನಾಂಕವೂ ನಿಗದಿಯಾಯ್ತು. ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇದಿಗ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಅನಿಲ್‌ ಕುಮಾರ್‌ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರ ನಾಮಪತ್ರ ಕ್ರಮಬದ್ಧವಾಗಿದೆ ಎಂದಿರುವ ಚುನಾವಣಾ ಅಧಿಕಾರಿ ಅಂಗೀಕಾರ ಮಾಡಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ಒಟ್ಟುಗೂಡಿದರೂ ಲಕ್ಷ್ಮಣ ಸವದಿಯನ್ನು ಸೋಲಿಸುವುದು ಕಷ್ಟ. ಆದರೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನ ಆಗಿರುವ ಶಾಸಕರು ಕೈ ಕೊಟ್ಟರೆ ಏನು ಮಾಡುವುದು ಎನ್ನುವ ಭೀತಿ ಎದುರಾಗಿದೆ. ಇದಕ್ಕೆ ಸಿಎಂ ಯಡಿಯೂರಪ್ಪ ಅವರೇ ಸಾಥ್‌ ಕೊಟ್ಟು ಮುನ್ನಡೆಸಿದರೆ ಲಕ್ಷ್ಮಣ ಸವದಿಗೆ ಸೋಲು ಗ್ಯಾರಂಟಿ.

ಇದೇ ಭಯದಲ್ಲಿರುವ ಲಕ್ಷ್ಮಣ ಸವದಿ ಶುಕ್ರವಾರ ರಾತ್ರಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ವಿ ಸೋಮಣ್ಣ, ಬಸವರಾಜ ಬೊಮ್ಮಾಯಿ ಕೂಡ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಜೆಡಿಎಸ್‌-ಕಾಂಗ್ರೆಸ್‌ ಒಗ್ಗಟ್ಟಾಗಿ, ಬಿಜೆಪಿ ಬಂಡಾಯದ ಲಾಭವನ್ನು ಪಡೆಯುತ್ತಾ ಎಂಬುದು ಸದ್ಯದ ಕುತೂಹಲ.

Leave a Reply