ಹೈಕಮಾಂಡ್ ಗೆ ಹೆದರಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಬಿಜೆಪಿ ನಾಯಕರು ಮೌನ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೈಕಮಾಂಡ್ ಮೇಲಿರುವ ಭಯದಿಂದ ಬಿಜೆಪಿ ನಾಯಕರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮೌನವಾಗಿದ್ದಾರೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಶನಿವಾರ ಸದಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಡಿಕೆ ಶಿವಕುಮಾರ್, ‘2020ರ ಬಜೆಟ್ ಐತಿಹಾಸಿಕ ಬಜೆಟ್ ಆಗಲಿದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಿದ್ದು, ಕೇಂದ್ರ ಸರ್ಕಾರ ಅತ್ಯಂತ ಕೆಟ್ಟ ಬಜೆಟ್ ಮಂಡಿಸಿದೆ’ ಎಂದರು. ಈ ವೇಳೆ ಅವರು ಹೇಳಿದ್ದಿಷ್ಟು…

ಆರ್ಥಿಕ ಮುಗ್ಗಟ್ಟು ಎದುರಾಗಿರುವ ಸಂದರ್ಭದಲ್ಲಿ ಹೊರ ದೇಶದಿಂದ ಬಂಡವಾಳ ಬರುವುದಿರಲಿ, ಇಲ್ಲಿನ ಮಧ್ಯಮ ಕೈಗಾರಿಕೆಗಳಿಗಾದರೂ ಉತ್ತೇಜನ ನೀಡಬೇಕಿತ್ತು. ಜನರು ಕೇಂದ್ರ ಸರ್ಕಾರಕ್ಕೆ ಬಹುಮತ ಕೊಟ್ಟ ನಂತರ ಅವರು ಮಾಡಿರುವ ತಿದ್ದುಪಡಿಯಿಂದ ಬ್ಯಾಂಕ್ ಗಳಲ್ಲಿ ಅಧಿಕಾರಿಗಳು ಸಾಲ ನೀಡಲು ಇತರೆ ಪ್ರಮುಖ ನಿರ್ಧಾರ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ.

ಈ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿ ಮಾಡುವ ಕ್ರಮವೂ ಇಲ್ಲ, ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಅಂಶವೂ ಇಲ್ಲ. ಬಜೆಟ್ ಮಂಡನೆಯಾದ ದಿನ ಷೇರು ಮಾರುಕಟ್ಟೆಯಲ್ಲಿ 1 ಸಾವಿರ ಅಂಕಗಳು ಕುಸಿದಿದೆ ಅಂದರೆ ನಮ್ಮ ಜನರ ಆಸ್ತಿ ಮೌಲ್ಯ ಎಷ್ಟು ಕುಸಿದಿದೆ ಎಂಬುದನ್ನು ತೋರುತ್ತದೆ. ಇದೊಂದು ಅತ್ಯಂತ ಕೆಟ್ಟ ಹಾಗೂ ವೈಫಲ್ಯಕಾರಿ ಬಜೆಟ್ ಆಗಿದೆ.

ನಮ್ಮ ಯುವಕರಿಗೆ ಉದ್ಯೋಗ ನೀಡಿ ಅಂತಾ ರಾಹುಲ್ ಗಾಂಧಿ ಕೇಳುತ್ತಿದ್ದಾರೆ. ದೇಶದ ಮೇಲಿದ್ದ ಎಲ್ಲ ವಿಶ್ವಾಸ ಹಾಳಾಗಿದೆ. ಹೀಗಾಗಿ ಆರ್ಥಿಕ ಸ್ಥಿತಿ ಸುಧಾರಿಸಿ, ಜನರು ನಮ್ಮ ಭಾರತದ ಬಗ್ಗೆ ವಿಶ್ವಾಸ ಇಟ್ಟು ಬಂಡವಾಳ ಹಾಕುವಂತೆ ಮಾಡಿ.

ಈ ವಿಚಾರಗಳ ಬಗ್ಗೆ ಬಿಜೆಪಿ ಶಾಸಕರು ಏನು ಮಾತನಾಡುವುದಿಲ್ಲ. ಶಾಲಾ ಮಕ್ಕಳಂತೆ ಮೌನವಾಗಿದ್ದಾರೆ. ಬೇರೆ ವಿಚಾರಗಳಾಗಿದ್ದರೆ ಬಹಳ ಗಟ್ಟಿಯಾಗಿ ಮಾತನಾಡುತ್ತಿದ್ದರು. ನಮ್ಮ ಮೈತ್ರಿ ಸರ್ಕಾರ ಬಂದ ಮೊದಲ ದಿನವೇ ಯಡಿಯೂರಪ್ಪ ಅವರು ರೈತರ ಸಾಲಮನ್ನಾ ವಿಚಾರವಾಗಿ ಎಷ್ಟು ಜೋರಾಗಿ ಮಾತನಾಡಿದ್ದರು, ಈಗ ಅವರ ಜೋಶ್ ಎಲ್ಲಿ ಹೋಯಿತು?

ನಾವು ವಿರೋಧ ಪಕ್ಷ ನಮ್ಮ ಜತೆ ಚರ್ಚೆ ಬೇಡ. ಅವರು ಅವರ ಪಕ್ಷದಲ್ಲೇ ಚರ್ಚೆ ಮಾಡಬಹುದಲ್ಲ. ಮಹದಾಯಿ ನೋಟಿಫಿಕೇಷನ್ ಹೊರಡಿಸಲು ಏನು ಬೇಕು? ಈ ರಾಜ್ಯದ ಜನ 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದೆ. ಹೀಗಿದ್ದರೂ ಮಹದಾಯಿ ತೀರ್ಪಿನ ಪ್ರಕಾರ ನೋಟಿಫಿಕೇಶನ್ ಹೊರಡಿಸಲು ಇನ್ನು ಎಷ್ಟು ದಿನ ಬೇಕು? ಗೋವಾದವರು ಆಕ್ಷೇಪ ಮಾಡುತ್ತಾರೆ ಅದು ಅವರ ಕರ್ತವ್ಯ. ಆದರೆ ಈ ಭಾಗದ ಸಂಸದರು ಒಂದು ತೀರ್ಮಾನಕ್ಕೆ ಬರಲು ಏನಾಗಿದೆ? ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ಸೇರಿದಂತೆ ಈ ಭಾಗದ ನಾಯಕರು ಏನು ಮಾಡುತ್ತಿದ್ದಾರೆ. ನಾವ್ಯಾರು ಅಡ್ಡಿ ಬರುತ್ತಿಲ್ಲ.

ಇಲ್ಲಿನ ನಾಯಕರಿಗೆ ಕೇವಲ ಅಧಿಕಾರ ಬೇಕು. ಆ ವಿಚಾರದಲ್ಲಿ ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಯಾರಿಗೆ ಯಾವ ಖಾತೆ ಬೇಕಾದರೂ ನೀಡಲಿ ನಮ್ಮ ತಕರಾರಿಲ್ಲ. ಈ ರಾಜ್ಯಕ್ಕೆ ಒಳ್ಳೆಯದಾದರೆ ಸಾಕು. ಈ ವಿಚಾರದಲ್ಲಿ ಸರ್ಕಾರ ವಿಫಲ ಆಗಿದೆ. ನಿಮ್ಮ ಕೈಯಲ್ಲಿ ಕೆಲಸ ಮಾಡಲು ಆಗುವುದಿಲ್ಲವಾ ಆಗಲ್ಲ ಅಂತಾ ಹೇಳಿ. ಸುಮ್ಮನೆ ಜನರನ್ನು ತಪ್ಪು ದಾರಿಗೆ ತರಬೇಡಿ.

ನಮ್ಮ ರಾಜ್ಯದ ಹಿತಕ್ಕಾಗಿ ಹಿಂದಿನ ಸರ್ಕಾರ ಕೋಲಾರ, ತುಮಕೂರು ಸೇರಿದಂತೆ ಅನೇಕ ಕಡೆಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಯುಪಿಎ ಸರ್ಕಾರ ಇದ್ದಾಗ ನೀಡಲಾಯಿತು. ಕೆ.ಎಚ್ ಮುನಿಯಪ್ಪ ಅವರು ಹೋರಾಟ ಮಾಡಿ ರೈಲ್ವೆ ಕೋಚ್ ತಯಾರಿಕಾ ಘಟಕ ಕೋಲಾರದಲ್ಲಿ ಮಾಡಲು ಯೋಜನೆಗೆ ಅನುಮೋದನೆ ಕೊಡಿಸಿದ್ದರು. ಆ ಯೋಜನೆಗೆ ಈಗಿನ ಸರ್ಕಾರ ಹಣ ಕೊಟ್ಟು ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆ ಮೂಲಕ 25 ಸಂಸದರನ್ನು ಕೊಟ್ಟ ರಾಜ್ಯದ ಜನರ ಋಣ ತೀರಿಸುವ ಪರಿಜ್ಞಾನ ಇರಬೇಕಿತ್ತು. ಅದನ್ನು ಬಿಟ್ಟು ನಾವು ಮಾಡಿದ ಕೆಲಸಗಳನ್ನು ಬದಲಾವಣೆ ಮಾಡುವುದು ಸರಿಯಲ್ಲ. ಮುಂದೆ ವಿಧಾನಸಭಾ ಅಧಿವೇಶನ ಬರುತ್ತಿದ್ದು, ನಮ್ಮ ಶಾಸಕರೆಲ್ಲ ಸೇರಿ ಚರ್ಚೆ ಮಾಡಿ, ಕೇಂದ್ರ ಸರ್ಕಾರದಿಂದ ಆಗುತ್ತಿರುವ ಮಲತಾಯಿ ಧೋರಣೆ ಆಗುತ್ತಿರುವುದರ ವಿರುದ್ಧ ಹೋರಾಟ ಮಾಡುತ್ತೇವೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಒಂದು ರೀತಿ ಮಲತಾಯಿ ಧೋರಣೆ, ಈಗ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇನ್ನು ಹೆಚ್ಚಿನ ರೀತಿ ಮಲತಾಯಿ ಧೋರಣೆ ತಾಳಲಾಗಿದೆ. ಹೈಕಮಾಂಡ್ ಗೆ ಹೆದರಿ ರಾಜ್ಯದ ಶಾಸಕರು ಮುಖ್ಯಮಂತ್ರಿಗಳು ಧ್ವನಿ ಎತ್ತುತ್ತಿಲ್ಲ. ಅವರು ಧ್ವನಿ ಎತ್ತುತ್ತಿಲ್ಲ ಅಂತಾ ನಾವು ಸುಮ್ಮನೆ ಕೂರಲು ಆಗುವುದಿಲ್ಲ. ನಾವು ಕೇವಲ ನಮ್ಮ 100 ಶಾಸಕರ ಕ್ಷೇತ್ರ ಮಾತ್ರವಲ್ಲ ಅಖಂಡ ಕರ್ನಾಟಕದ ಹಿತ ಕಾಯಲು ಚರ್ಚಿಸಿ ವಿಧಾನಸಭಾ ಅಧಿವೇಶನದಲ್ಲಿ ಹೋರಾಡುತ್ತೇವೆ.

Leave a Reply