ಜಲ ಸಂಪನ್ಮೂಲಕ್ಕೆ ಜಾರಕಿಹೊಳಿ ಪಟ್ಟು! ಯಡಿಯೂರಪ್ಪಗೆ ಶುರುವಾಯ್ತು ಮತ್ತೊಂದು ಸಂಕಟ!

ಡಿಜಿಟಲ್ ಕನ್ನಡ ಟೀಮ್:

ಹೈಕಮಾಂಡ್ ಹಾಗೂ ರಾಜ್ಯದ ಕೆಲ ಬಿಜೆಪಿ ನಾಯಕರ ಜತೆ ಹಗ್ಗಜಗ್ಗಾಟ ನಡೆಸಿ ಕೊನೆಗೂ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿ ನೂತನ ಶಾಸಕರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ.

ಆದರೆ,

ನೂತನ 10 ಶಾಸಕರು ತಮಗೆ ಇದೇ ಖಾತೆ ಬೇಕು ಎಂದು ಪಟ್ಟು ಹಿಡಿದಿರೋದು ಸಿಎಂ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅದರಲ್ಲೂ ರಮೇಶ್ ಜಾರಕಿಹೊಳಿ ತಮಗೆ ಜಲಸಂಪನ್ಮೂಲ ಬೇಕೇ ಬೇಕು ಎಂಬ ಹಠಕ್ಕೆ ಬಿದ್ದಿರೋದು ಬಿಎಸ್ ವೈಗೆ ತಲೆನೋವು ತರಿಸಿದೆ.

ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಭರವಸೆ ನೀಡಿದ್ದ ಬಿಎಸ್ ವೈ ಅದನ್ನು ಮಾಡುವಲ್ಲಿ ವಿಫಲರಾಗಿದ್ದಾರೆ. ಆದರೆ ಈಗ ಜಲಸಂಪನ್ಮೂಲ ಇಲಾಖೆ ನೀಡಲು ಹಿಂದೇಟು ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.

ಜಲಸಂಪನ್ಮೂಲ ಖಾತೆ ನಿಭಾಯಿಸಲು ಕಾನೂನು ಸೇರಿದಂತೆ ಇತರೆ ವಿಚಾರಗಳಲ್ಲಿ ಉನ್ನತ ಜ್ಞಾನ ಹೊಂದಿರಬೇಕು. ಹೀಗಾಗಿ ಈ ಖಾತೆ ರಮೇಶ್ ಜಾರಕಿಹೊಳಿಗೆ ನೀಡುವುದು ಬೇಡ ಎಂದು ರಾಜ್ಯದ ಕೆಲ ಬಿಜೆಪಿ ನಾಯಕರು ಹೈಕಮಾಂಡ್ ಗೆ ಕಿವಿ ಊದಿದ್ದು, ಇದನ್ನು ಹೈಕಮಾಂಡ್ ಕೂಡ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ ನೀಡಲು ಯಡಿಯೂರಪ್ಪ ಹೈಕಮಾಂಡ್ ಮುಂದೆ ಕಸರತ್ತು ಮಾಡಬೇಕಿದೆ.

ಅದೇ ರೀತಿ ಎಸ್.ಟಿ ಸೋಮಶೇಖರ್, ಡಾ.ಸುಧಾಕರ್, ಭೈರಟಿ ಬಸವರಾಜ್ ಕೂಡ ಪ್ರಬಲ ಖಾತೆಗಾಗಿ ಪಟ್ಟು ಹಿಡಿದಿದ್ದಾರೆ. ಈಗಾಗಲೇ ವಲಸಿಗರು ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದು ಮೂಲ ಬಿಜೆಪಿ ನಾಯಕರು ಮುನಿದಿರುವ ಪರುಣಾಮ ಈಗ ಪ್ರಬಲ ಖಾತೆಗಳನ್ನು ಅವರಿಗೆ ನೀಡಿದರೆ ಪಕ್ಷದಲ್ಲಿ ಅಸಮಾಧಾನ ಹೆಚ್ಚುವ ಸಾಧ್ಯತೆ ಇದೆ.

Leave a Reply