ದಿಲ್ಲಿ ಚುನಾವಣೆ ಶೇಕಡಾವಾರು ಮತದಾನ ಹೇಳಲು 25 ಗಂಟೆ? ಅನುಮಾನ ಹುಟ್ಟಿಸಿದ ಆಯೋಗದ ನಡೆ..!

ಡಿಜಿಟಲ್ ಕನ್ನಡ ಟೀಮ್:

ಶನಿವಾರ ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ತನಕ ರಾಷ್ಟ್ತ ರಾಜಧಾನಿ ದೆಹಲಿಯಲ್ಲಿ ಜನತೆ ಹಕ್ಕು ಚಲಾಯಿಸಿದರು. ಆದ್ರೆ ಚುನಾವಣಾ ಆಯೋಗ ಶೇಕಡವಾರು ಮತದಾನ ಪ್ರಮಾಣವನ್ನು ಘೋಷಣೆ ಮಾಡಲು ಬರೋಬ್ಬರಿ 25 ಗಂಟೆಗಳ ಕಾಲಾವಕಾಶ ಪಡೆದಿದೆ. ಪ್ರತಿ ಚುನಾವಣೆಯಲ್ಲಿ ಮತದಾನ ಮುಕ್ತಾಯದ ಕೆಲವೇ ಗಂಟೆಯೊಳಗೆ ಶೇಕಡಾವಾರು ಮತದಾನ ಪ್ರಕಟಿಸುವ ಆಯೋಗ ಈ ಚುನಾವಣೆಯಲ್ಲಿ ಇಷ್ಟು ತಡ ಮಾಡಿದ್ದು ಏಕೆ ಎಂಬ ಅನುಮಾನ ಮೂಡಿದೆ.

ಮಾಧ್ಯಮಗಳ ವರದಿ ಪ್ರಕಾರ ನಿನ್ನೆ ಸಂಜೆ 6 ಗಂಟೆವರೆಗೂ ನಡೆದ ಮತದಾನದಲ್ಲಿ ಶೇ.54.65ರಷ್ಟು ಮತದಾನ ನಡೆದಿತ್ತು. ಆದ್ರೆ ಇಂದು ರಾತ್ರಿ ಆಯೋಗ ನೀಡಿರುವ ಮಾಹಿತಿ ಪ್ರಕಾರ ಶೇ. 62.59 ರಷ್ಟು ಜನ ಹಕ್ಕು ಚಲಾಯಿಸುವ ಮೂಲಕ ಮತದಾನದಲ್ಲಿ ಭಾಗಿಯಾಗಿದ್ದಾರೆ.

ದೆಹಲಿ ಚುನಾವಣಾ ಅಯೋಗ ಶನಿವಾರ ಮತದಾನ ಮುಕ್ತಾಯದ ಬಳಿಕ ಯಾವುದೇ ಅಧಿಕೃತವಾಗಿ ಮಾಹಿತಿ ತಿಳಿಸಲಿಲ್ಲ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲೂ ಈ ಬಗ್ಗೆ ಮಾಹಿತಿ ಸಿಗಲಿಲ್ಲ. ಇದು ಚುನಾವಣಾ ಆಯೋಗದ ಮೇಲೆ ಅಪನಂಬಿಕೆ ಮೂಡುವುದಕ್ಕೆ ಪ್ರೇರೇಪಿಸಿತು.

ಅಷ್ಟರಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದವು. ಎಲ್ಲಾ ಸಮೀಕ್ಷೆಗಳಲ್ಲೂ ಹಾಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿಗೇ ಮೇಲುಗೈ. ಒಂದೆರಡು ಸಮೀಕ್ಷೆಗಳಲ್ಲಿ ಮಾತ್ರ ಬಿಜೆಪಿ ಅ 20 ಸ್ಥಾನಗಳನ್ನು ದಾಟಿದ್ದು ಬಿಟ್ಟರೆ, ಬೇರೆ ಯಾವುದೇ ಸಮೀಕ್ಷೆಯೂ ಬಿಜೆಪಿಗೆ ಹೆಚ್ಚಿನ ಸ್ಥಾನ ಕೊಟ್ಟಿಲ್ಲ. ಆದರೆ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಟ್ವೀಟ್ ಮೂಲಕ ನಾವು ದೆಹಲಿಯಲ್ಲಿ ಅಧಿಕಾರ ಹಿಡಿಯುತ್ತೇವೆ. ನನ್ನ ಟ್ವೀಟ್ ಪೋಸ್ಟ್ ತೆಗೆದು ಇಟ್ಟಿರಿ. ಚುನಾವಣಾ ಫಲಿತಾಂಶದ ದಿನ ಹೋಲಿಕೆ ಮಾಡಿ ನೋಡಿ ಎಂದು ಅಚ್ಚರಿಯ ಮಾತನಾಡಿದ್ದರು.

ಈ ನಡುವೆ ಮತದಾನ ಯಂತ್ರ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಕೂಡ ಪತ್ತೆಯಾಗಿತ್ತು. ಈ ವಿಡಿಯೋ ಕೂಡ ಬಿಡುಗಡೆ ಮಾಡಿದ್ದ ಆಮ್ ಆದ್ಮಿ ಪಾರ್ಟಿ, ಚುನಾವಣಾ ಆಯೋಗ ಏನು ಮಾಡುತ್ತಿದೆ..? ಇಲ್ಲೀವರೆಗೂ ಶೇಕಡವಾರು ಮತದಾನದ ಅಂಕಿ ಅಂಶ ಪ್ರಕಟ ಮಾಡಿಲ್ಲ ಯಾಕೆ..? ಚುನಾವಣಾ ಆಯೋಗದ ಈ ಕ್ರಮದಿಂದ ನನಗೆ ಶಾಕ್ ಎಂದು ಸ್ವತಃ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.

ಇದಾದ ಬಳಿಕ ಭಾನುವಾರ ಸಂಜೆ 7 ಗಂಟೆಗೆ ಸುದ್ದಿಗೋಷ್ಟಿ ಕರೆದು ಮಾತನಾಡಿದ ಚುನಾವಣಾ ಅಯೋಗ ದಿಲ್ಲಿಯಲ್ಲಿ ಶೇಕಡ 62.59 ರಷ್ಟು ಮತದಾನ ನಡೆದಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಆದರೆ 25 ಗಂಟೆಗಳ ಕಾಲ ಪ್ರಕಟ ಮಾಡದೆ ಗೌಪ್ಯವಾಗಿ ಇಟ್ಟಿದ್ದು ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ.

ಬಿಜೆಪಿ ನಾಯಕರ ಹೇಳಿಕೆ ಹಾಗೂ ಆಯೋಗದ ನಡೆ ಮೇಲೆ ಗುಮಾನಿ ಮೂಡುತ್ತಿದೆ.

Leave a Reply