ಒಂದೇ ದಿನದಲ್ಲಿ ಖಾತೆ ಮರು ಹಂಚಿಕೆ! ಇನ್ನಾದ್ರೂ ನಿವಾರಣೆಯಾಗುತ್ತಾ ಬಿಎಸ್ ವೈ ತಲೆನೋವು?

ಡಿಜಿಟಲ್ ಕನ್ನಡ ಟೀಮ್:

ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನೂತನ 10 ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಿ ನಿಟ್ಟುಸಿರು ಬಿಡುವಷ್ಟರಲ್ಲೇ ಬಿ.ಸಿ ಪಾಟೀಲ್ ಸೇರಿದಂತೆ ಅನೇಕರು ತಮಗೆ ನೀಡಲಾದ ಖಾತೆಗಳ ಬಗ್ಗೆ ಅಸಮಾಧಾನ ಹೊರಹಾಕಿದರು. ಈ ಅಸಮಾಧಾನವನ್ನು ಮೊಳಕೆಯಲ್ಲೇ ಕಿತ್ತುಹಾಕಬೇಕು ಎಂದು ಬಿಎಸ್ ವೈ ಇಂದು ಐವರು ಮಂತ್ರಿಗಳಿಗೆ ಖಾತೆ ಮರು ಹಂಚಿಕೆ ಮಾಡಿದ್ದಾರೆ.

ನಿನ್ನೆ ನೀಡಲಾಗಿದ್ದ ಪ್ರಕಾರ ರಮೇಶ್ ಜಾರಕಿಹೊಳಿ – ಜಲ ಸಂಪನ್ಮೂಲ, ಡಾ. ಕೆ. ಸುಧಾಕರ್ – ವೈದ್ಯಕೀಯ ಶಿಕ್ಷಣ, ಆನಂದ್ ಸಿಂಗ್ – ಆಹಾರ ಮತ್ತು ನಾಗರಿಕ, ಶ್ರೀಮಂತ ಪಾಟೀಲ್- ಜವಳಿ ಇಲಾಖೆ, ನಾರಾಯಣ ಗೌಡ- ಪೌರಾಡಳಿತ ಮತ್ತು ತೋಟಗಾರಿಕೆ, ಎಸ್​.ಟಿ. ಸೋಮಶೇಖರ್- ಸಹಕಾರ, ಶಿವರಾಂ ಹೆಬ್ಬಾರ್ – ಕಾರ್ಮಿಕ, ಭೈರತಿ ಬಸವರಾಜು – ನಗರಾಭಿವೃದ್ಧಿ, ಗೋಪಾಲಯ್ಯ – ಸಣ್ಣ ಕೈಗಾರಿಕೆ ಹಾಗೂ ಬಿ.ಸಿ. ಪಾಟೀಲ್​ಗೆ ಅರಣ್ಯ ಖಾತೆ ನೀಡಲಾಗಿತ್ತು.

ಇಂದು ಖಾತೆ ಮರುಹಂಚಿಕೆಯಾಗಿದ್ದು, ಬಿ.ಸಿ ಪಾಟೀಲ್ ಅವರಿಗೆ ಕೃಷಿ, ಗೋಪಾಲಯ್ಯ ಅವರಿಗೆ ಆಹಾರ ಮತ್ತು ನಾಗರೀಕ ಸಬರಾಜು, ಶಿವರಾಮ್ ಹೆಬ್ಬಾರ್ ಅವರಿಗೆ ಕಾರ್ಮಿಕ ಖಾತೆ ಜತೆಗೆ ಸಕ್ಕರೆ ಖಾತೆ, ಆನಂದ್ ಸಿಂಗ್ ಅವರಿಗೆ ಅರಣ್ಯ ಹಾಗೂ ಜೈವಿಕ ಪರಿಸರ ಇಲಾಖೆ ನೀಡಲಾಗಿದೆ. ಇನ್ನು ಸಿಸಿ ಪಾಟೀಲ್ ಅವರಿಗೆ ಗಣಿ ಮತ್ತು ಭೂವಿಜ್ಞಾನ ಖಾತೆ ಜತೆಗೆ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ನೀಡಲಾಗಿದ್ದು, ಈ ಪರಿಷ್ಕೃತ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದೆ.

ಇನ್ನು ಮುಂದಾದರೂ ಯಡಿಯೂರಪ್ಪ ಅವರಿಗೆ ಸಂಪುಟ ಹಾಗೂ ಖಾತೆ ಹಂಚಿಕೆ ತಲೆನೋವು ಕಳೆದು ರಾಜ್ಯದ ಆಡಳಿತ ಹಾಗೂ ಬಜೆಟ್ ತಯಾರಿ ಕಡೆ ಗಮನ ಹರಿಸಲು ಸಮಯಾವಕಾಶ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

Leave a Reply