ವಾರ್​ ರೂಮ್​ ರಹಸ್ಯ ಬೇಧಿಸಿದ ಸಿಎಂ ಯಡಿಯೂರಪ್ಪ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸಚಿವ ಸಂಪುಟ ಸದ್ಯಸದ್ಯರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದಾರೆ. ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲ ವಿ.ಆರ್ ವಾಲಾ ಸಹಿ ಹಾಕಿದ್ದಾರೆ.

ಶಿವರಾಮ್ ಹೆಬ್ಬಾರ್ – ಕಾರ್ಮಿಕ ಖಾತೆ, ಬಿಸಿ ಪಾಟೀಲ್ – ಅರಣ್ಯ ಖಾತೆ, ರಮೇಶ್ ಜಾರಕಿಹೊಳಿ – ಜಲಸಂಪನ್ಮೂಲ, ಶ್ರೀಮಂತ ಪಾಟೀಲ್- ಜವಳಿ ಖಾತೆ, ಸುಧಾಕರ – ವೈದ್ಯಕೀಯ ಶಿಕ್ಷಣ , ಆನಂದ ಸಿಂಗ್ – ಆಹಾರ ಮತ್ತು ನಾಗರಿಕ ಪೂರೈಕೆ, ನಾರಾಯಣಗೌಡ – ಪೌರಾಡಳಿತ ಮತ್ತು ತೋಟಗಾರಿಕೆ ಖಾತೆ, ಬೈರತಿ ಬಸವರಾಜ್ – ನಗರಾಭಿವೃದ್ಧಿ ( ಬೆಂಗಳೂರು ಹೊರತು ಪಡಿಸಿ ) ಎಸ್.ಟಿ ಸೋಮಶೇಖರ್ – ಸಹಕಾರ ಖಾತೆ, ಗೋಪಾಲಯ್ಯ – ಸಣ್ಣ ಕೈಗಾರಿಕೆ ಖಾತೆ ಹಂಚಿಕೆ ಮಾಡಲಾಗಿದೆ.

ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಯಾರಿಗೂ ವಹಿಸದ ಸಿಎಂ ಯಡಿಯೂರಪ್ಪ, ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಜೊತೆಗೆ ಇಂಧನ ಖಾತೆಯನ್ನು ಸಿಎಂ ಯಡಿಯೂರಪ್ಪ ತನ್ನಲ್ಲೇ ಉಳಿಸಿಕೊಂಡಿದ್ದಾರೆ. ನೂತನ ಶಾಸಕ ಎಸ್.ಟಿ ಸೋಮೇಶ್ವರ್ ಬೆಂಗಳೂರು ಅಭಿವೃದ್ಧಿ ಖಾತೆ ಪಡೆಯುವ ಮೂಲಕ ಮೂಲ ಪಕ್ಷಕ್ಕೆ ಕೌಂಟರ್ ಕೊಡುವ ಹುಮ್ಮಸ್ಸಿನಲ್ಲಿದ್ದರು. ಬೆಂಗಳೂರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾಗ ಕುಮಾರಸ್ವಾಮಿ ಬಿಡಿಎ ಮ್ಯಾನೇಜಿಂಗ್ ಡೈರೆಕ್ಟರ್ ವರ್ಗಾವಣೆ ಮಾಡಲಿಲ್ಲ ಎನ್ನುವ ಕಾರಣಕ್ಕೆ ಶುರುವಾದ ಭಿನ್ನಮತ, ಸರ್ಕಾರ ಬೀಳಿಸುವ ಮೂಲಕ ಮುಕ್ತಾಯವಾಗಿತ್ತು. ಇದೀಗ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಆಗುವ ಮೂಲಕ ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ನಾಯಕರುಗಳಿಗೆ ಠಕ್ಕರ್ ಕೊಡಲು ಚಿಂತಿಸಿದ್ದರು. ಆದರೆ ಬಂಡಾಯ ಭುಗಿಲೇಳುವ ಭೀತಿಯಲ್ಲಿ ಯಡಿಯೂರಪ್ಪ ತನ್ನಲ್ಲಿಯೇ ಉಳಿಸಿಕೊಂಡಿದ್ದಾರೆ.

ಬಿಜೆಪಿ ಸರ್ಕಾರ ರಚನೆಯಾದ ವೇಳೆ ಸಚಿವರಾದ ಆರ್ ಅಶೋಕ್ ಹಾಗು ಡಿಸಿಎಂ ಅಶ್ವತ್ಥ ನಾರಾಯಣ ಅವರು ಬೆಂಗಳೂರು ಅಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದರು. ಇವರಿಬ್ಬರನ್ನು ಈ ಖಾತೆಯಿಂದ ದೂರ ಇಟ್ಟಿದ್ದ ಸಿಎಂ ಯಡಿಯೂರಪ್ಪ, ಇದೀಗ ಎಸ್.ಟಿ ಸೋಮಶೇಖರ್ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಿದರೆ, ಸಂಕಷ್ಟ ಎದುರಾಗಬಹುದು ಎನ್ನುವ ಕಾರಣಕ್ಕೆ ಎಸ್.ಟಿ ಸೋಮಶೇಖರ್ ಅವರಿಗೂ ಸಹಕಾರ ಖಾತೆ ಕೊಟ್ಟು ಸಂತೈಸಿದ್ದಾರೆ. ಈ ಮೂಲಕ ಸಿಎಂ ಯಡಿಯೂರಪ್ಪ ಪ್ರಮುಖ 7ಕ್ಕೂ ಹೆಚ್ಚು ಖಾತೆಗಳನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.

ಡಿಪಿಎಆರ್, ಹಣಕಾಸು, ಇಂಟೆಲಿಜೆನ್ಸ್, ಮಾಹಿತಿ & ಸಾರ್ವಜನಿಕ ಸಂಪರ್ಕ ಖಾತೆಯೂ ಯಡಿಯೂರಪ್ಪ ಬಳಿ ಉಳಿದುಕೊಂಡಿದೆ. ಈ ಮೂಲಕ ಬಂಡಾಯ ಬೇಗುದಿ ಹೆಚ್ಚಾಗದಂತೆ ಎಚ್ಚರ ವಹಿಸುವ ಮೂಲಕ ವಾರ್​ರೂಮ್​ ಟೆನ್ಷನ್​ ಕಡಿಮೆ ಮಾಡಿಕೊಂಡಿದ್ದಾರೆ ಎನ್ನಬಹುದು.

Leave a Reply