ಕೇಜ್ರಿವಾಲ್ ಹಿಂದುತ್ವ ಅಸ್ತ್ರದಿಂದಲೇ ಮೋದಿ ಮತ್ತು ಬಿಜೆಪಿಯನ್ನು ಮಣಿಸಿದ್ದು ಹೇಗೆ?

ಡಿಜಿಟಲ್ ಕನ್ನಡ ಟೀಮ್:

ಹಿಂದುತ್ವದ ಅಜೆಂಡಾವನ್ನು ಪ್ರಯೋಗಿಸಿ ಬಿಜೆಪಿ ಸತತ ಗೆಲುವು ದಾಖಲಿಸುತ್ತಾ ಬಂದಿದೆ. ಹೀಗಾಗಿ ಇತರೆ ಪಕ್ಷಗಳೂ ಚುನಾವಣೆ ಸಂದರ್ಭದಲ್ಲಿ ಹಿಂದುತ್ವ ಪರ ಮೃದು ಧೋರಣೆ ತಾಳಿ ಮತ ಪಡೆಯುವ ತಂತ್ರ ಬಳಸಲು ಆರಂಭಿಸಿವೆ. ಇದೇ ತಂತ್ರವನ್ನು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಯೋಗಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಹಿಂದುತ್ವದ ಮೂಲಕವೇ ಬಿಜೆಪಿಯನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 63 ಸ್ಥಾನ ಗೆದ್ದರೆ ಬಿಜೆಪಿ 7 ಸ್ಥಾನ ಗೆದ್ದಿದ್ದು, ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.

ಹೌದು, ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಕೂಡ ಹಿಂದುತ್ವದ ಪರವಾದ ಅಸ್ತ್ರ ಪ್ರಯೋಗಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟ್ಟಿಹಾಕಲು ಮುಂದಾಗಿದ್ದರು. ಆದರೆ ರಾಹುಲ್ ಗಾಂಧಿಯಿಂದ ಸಾಧ್ಯವಾಗದನ್ನು ಅರವಿಂದ ಕೇಜ್ರಿವಾಲ್ ಮಾಡಿದ್ದಾರೆ.

ಅರವಿಂದ ಕೇಜ್ರಿವಾಲ್ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೇಗೆ ತಂತ್ರಗಾರಿಕೆ ನಡೆಸಿದರು ಎಂಬುದನ್ನು ನೋಡುವ ಮುನ್ನ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೆಹಲಿಯಲ್ಲಿ ಯಾವ ಪಕ್ಷಗಳು ಎಷ್ಟು ಶೇಕಡಾವಾರು ಮತ ಪಡೆದವು ಎಂಬುದನ್ನು ನೋಡೋಣ, ಬಿಜೆಪಿ ಶೇ.56.58ರಷ್ಟು ಮತ ಪಡೆದು 7ಕ್ಕೆ 7 ಕ್ಷೇತ್ರಗಳನ್ನು ಗೆದ್ದಿತ್ತು. ಇನ್ನು ಕಾಂಗ್ರೆಸ್ ಶೇ.22.46ರಷ್ಟು ಮತ ಪಡೆದು ಎರಡನೇ ಸ್ಥಾನದಲ್ಲಿ ನಿಂತರೆ, ಆಪ್ ಕೇವಲ ಶೇ.18ರಷ್ಟು ಮತಗಳನ್ನು ಮಾತ್ರ ಪಡೆದಿತ್ತು. ಮೂರನೇ ಸ್ಥಾನದಲ್ಲಿದ್ದ ಆಪ್ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಂತು ಬಿಜೆಪಿಯನ್ನು ಮಣಿಸಿದ್ದು ನಿಜಕ್ಕೂ ಅಚ್ಚರಿಯ ಬೆಳವಣಿಗೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮನ್ನು ತಾವು ಹಿಂದುತ್ವದ ಪರ ಎಂದು ಬಿಂಬಿಸಿಕೊಳ್ಳಲು ಮುಂದಾದರು. ಲೋಕಸಭೆ ಫಲಿತಾಂಶ ಹೊರಬಿದ್ದ ಎರಡು ವಾರದ ಒಳಗಾಗಿ ಅಂದರೆ ಜೂನ್ 4ರಂದು ಕೇಜ್ರಿವಾಲ್ ‘ಸ್ವಾಮಿ ನಾರಾಯಣ ಭಗವಾನನಿಗೆ ಅಭಿಷೇಕ’ ಎಂಬ ಶೀರ್ಷಿಕೆಯಲ್ಲಿ ಸರಣಿ ಟ್ವೀಟ್ ಮಾಡಿ, ಅದರಲ್ಲಿ ಕೇಜ್ರಿವಾಲ್ ನಾರಾಯಣನಿಗೆ ಪೂಜೆ ಮಾಡುವ ಫೋಟೋಗಳನ್ನು ಹರಿಯಬಿಟ್ಟರು.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ದೆಹಲಿ ಆಪ್ ಸರ್ಕಾರ ‘ಮುಖ್ಯಮಂತ್ರಿ ತೀರ್ಥಯಾತ್ರಾ ಯೋಜನೆ’ ಪ್ರಕಟಿಸಿದರು. ಈ ಯೋಜನೆಯನ್ನು ದೆಹಲಿಯ ಬೀದಿ ಬೀದಿಗಳಲ್ಲಿ ಜಾಹೀರಾತು ಹಾಕಲಾಯಿತು. ನಂತರ ಹಿಂದುತ್ವದ ವಿಚಾರದಲ್ಲಿ ತಾವು ಮೋದಿಗೆ ಪ್ರತಿಸ್ಪರ್ಧಿಯಲ್ಲ ಎಂಬುದನ್ನು ಬಿಂಬಿಸಲು ಮುಂದಾದ ಕೇಜ್ರಿವಾಲ್, ‘ದೆಹಲಿಗೆ ಹಿಂದೂ ಕೇಜ್ರಿವಾಲ್ ಹಾಗೂ ಕೇಂದ್ರಕ್ಕೆ ಮೋದಿಯ ಹಿಂದುತ್ವ’ ಎಂಬ ಘೋಷವಾಕ್ಯ ಬಿಟ್ಟರು. ಇದು ದೆಹಲಿಯ ಜಾಹಿರಾತು ಫಲಕಗಳಲ್ಲಿ ರಾರಾಜಿಸಿತು.

ಹೀಗೆ ಹಿಂದುತ್ವದ ಪ್ರಚಾರದ ಜತೆಗೆ ರಾಜ್ಯ ಸಾರಿಗೆಯಲ್ಲಿ ಮತ್ತು ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, 200 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಎಲೆಕ್ಟ್ರಿಸಿಟ್ ಬಿಲ್ ಇಲ್ಲ, 200ರಿಂದ 400 ಯುನಿಟ್ ವಿದ್ಯುತ್ ಬಳಸುವವರಿಗೆ ಶೇ.50ರಷ್ಟು ಸಬ್ಸಿಡಿ, ಸಿಸಿಟಿವಿ ಹಾಗೂ ವೈಫೈ ಅಳವಡಿಕೆ ಸೇರಿದಂತೆ ನೆನೆಗುದಿಗೆ ಬಿದ್ದಿದ್ದ ತಮ್ಮ ಆಶ್ವಾಸನೆಯ ಯೋಜನೆಗಳನ್ನು ಜಾರಿಗೊಳಿಸಿದರು.

ಇನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ 370ನೇ ವಿಧಿ ರದ್ದು ವಿಚಾರಕ್ಕೆ ಬೆಂಬಲ ಸೂಚಿಸಿದ ಕೇಜ್ರಿವಾಲ್, ಮೋದಿ ಹುಟ್ಟುಹಬ್ಬಕ್ಕೆ ಶುಭ ಕೋರುವುದು ಸೇರಿದಂತೆ ತಾನು ಮೋದಿಯ ವಿರೋಧಿ ಅಲ್ಲ ಎಂಬುದನ್ನು ಸಾರುವ ಪ್ರಯತ್ನಕ್ಕೆ ಮುಂದಾದರು. ಇನ್ನು ಸಿಎಎ ವಿಚಾರವಾಗಿ ದೆಹಲಿ ಸೇರಿದಂತೆ ದೇಶದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೂ ಕೇಜ್ರಿವಾಲ್ ಈ ವಿಚಾರದಲ್ಲಿ ಮೌನ ವಹಿಸಿದರು. ಕೇಜ್ರಿವಾಲ್ ಅವರ ಮೌನದ ಹಿಂದೆ ಈ ವಿಚಾರದಲ್ಲಿ ಕೇಂದ್ರವನ್ನು ವಿರೋಧಿಸಿದರೆ ದೆಹಲಿ ಚುನಾವಣೆಯಲ್ಲಿ ತಮಗೆ ಆಗಬಹುದಾದ ನಷ್ಟವನ್ನು ತಡೆಯುವ ಲೆಕ್ಕಾಚಾರ ಅಡಗಿತ್ತು.

ಹೀಗೆ ಕಳೆದ ಲೋಕಸಭೆ ಚುನಾವಣೆ ನಂತರ ಅರವಿಂದ ಕೇಜ್ರಿವಾಲ್, ಮೋದಿಯನ್ನು ವಿರೋಧಿಸದೇ ಮೋದಿ ವಿರುದ್ಧ ಯುದ್ಧ ಸಾರಿದ್ದರು. ಇಂದು ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಗೆದ್ದು ಮೋದಿ ವಿರುದ್ಧವೂ ಗೆದ್ದು ಬೀಗಿದ್ದಾರೆ.

Leave a Reply