ಆಪ್ ಗೆಲುವಿನ ಹಿಂದೆ ಚುನಾವಣಾ ಜಾದುಗಾರ ಪ್ರಶಾಂತ್ ಕಿಶೋರ್ ಕೈಚಳಕ!

ಡಿಜಿಟಲ್ ಕನ್ನಡ ಟೀಮ್:

ಪ್ರಶಾಂತ್ ಕಿಶೋರ್… ದೇಶದಲ್ಲಿ ಪ್ರತಿಷ್ಠಿತ ಚುನಾವಣೆ ಬಂದರೆ ಸಾಕು ತಂತ್ರಗಾರಿಕೆ ವಿಚಾರದಲ್ಲಿ ಈ ಹೆಸರು ನಮ್ಮ ಕಿವಿಗೆ ಪದೇ ಪದೇ ಬೀಳುತ್ತದೆ. ಇತ್ತೀಚೆಗೆ ಜೆಡಿಯುನಿಂದ ಉಚ್ಚಾಟಿತರಾಗಿ ಸುದ್ದಿ ಮಾಡಿದ್ದ ಪ್ರಶಾಂತ ಕಿಶೋರ್, ನಂತರ ರಾಜ್ಯ ರಾಜಕೀಯದಲ್ಲಿ ಜೆಡಿಎಸ್ ಜತೆ ಕೈಜೋಡಿಸುವ ಬಗ್ಗೆ ಸುದ್ದಿಯೂ ಹರಿದಾಡಿತ್ತು. ಇದೇ ಪ್ರಶಾಂತ್ ಕಿಶೋರ್ ಈಗ ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿನ ತಂತ್ರಗಾರಿಕೆ ರೂಪಿಸಿ ತನ್ನ ಸಾಮರ್ಥ್ಯ ಏನು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

2011ರಲ್ಲಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದರಿಂದ ಈಗ ಅರವಿಂದ ಕೇಜ್ರಿವಾಲ್ ದೆಹಲಿಯಲ್ಲಿ ಮೂರನೇ ಬಾರಿಗೆ ಸಿಎಂ ಆಗುವವರೆಗೂ ಪ್ರಶಾಂತ್ ಚುನಾವಣೆಗಳಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ.

ಮೋದಿ ಗುಜರಾತ್ ಸಿಎಂ ಆಗುವುದರ ಜತೆಗೆ 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಯ ಚುನಾವಣಾ ತಂತ್ರಗಾರಿಕೆ ರೂಪಿಸಿದ್ದು ಇದೇ ಪ್ರಶಾಂತ್ ಕಿಶೋರ್. ‘ಚಾಯ್ ಪೆ ಚರ್ಚಾ’ ಸೇರಿದಂತೆ ಮೋದಿಯ ಒಂದೊಂದು ಪ್ರಚಾರ ತಂತ್ರಗಾರಿಕೆ ಹಿಂದೆ ಪ್ರಶಾಂತ್ ಕಿಶೋರ್ ಮಾಸ್ಟರ್ ಮೈಂಡ್ ಕೆಲಸ ಮಾಡಿತ್ತು.

ನಂತರ 2015ರಲ್ಲಿ ಪ್ರಶಾಂತ್ ಕಿಶೋರ್ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಪರ ಕೆಲಸ ಮಾಡಿತು. ‘ನಿತೀಶ್ ಕೆ ನಿಶ್ಚಯ್, ವಿಕಾಸ್ ಕಿ ಗ್ಯಾರಂಟಿ’ ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ತಂತ್ರಗಾರಿಕೆ ರೂಪಿಸಿ ನಿತೀಶ್ ಕುಮಾರ್ ಮೂರನೇ ಬಾರಿ ಸಿಎಂ ಆಗಲು ನೆರವಾದರು.

2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಚುನಾವಣಾ ತಂತ್ರಗಾರಿಕೆ ರೂಪಿಸಿದ ಪ್ರಶಾಂತ್ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸತತ ಎರಡು ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್, ಬಿಜೆಪಿ ಹಾಗೂ ಮೋದಿ ಅಲೆ ಮೆಟ್ಟಿ ನಿಂತು ಅಧಿಕಾರಕ್ಕೆ ಬರುವಂತಾಯಿತು.

ಇನ್ನು 2019ರ ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪರ ಚುನಾವಣಾ ತಂತ್ರಗಾರಿಕೆ ರೂಪಿಸಿದ ಈತ ಜಗನ್ ಮೋಹನ್ ರೆಡ್ಡಿ ನೇತೃತ್ವದ ಪಕ್ಷ 175 ಕ್ಷೇತ್ರಗಳ ಪೈಕಿ 151ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಪ್ರಚಂಡ ಗೆಲುವು ಸಾಧಿಸಿತು. ‘ಸಮರ ಸಂಖರವಂ’, ‘ಅಣ್ಣಾ ಪಿಲುಪ್ಪು’, ‘ಪ್ರಜಾ ಸಂಕಲ್ಪ ಯಾತ್ರೆ’ಗಳ ಮೂಲಕ ವೈಎಸ್ಆರ್ ಕಾಂಗ್ರೆಸ್ ಹಾಗೂ ಜಗನ್ ಅವರ ಇಮೇಜ್ ಅನ್ನೇ ಬದಲಿಸಿದರು.

ಉತ್ತರ ಪ್ರದೇಶ ಚುನಾವಣೆ ಹೊರತುಪಡಿಸಿ ಉಳಿದ ಎಲ್ಲ ಚುನಾವಣೆಗಳಲ್ಲೂ ಪ್ರಶಾಂತ ಕಿಶೋರ್ ಜಾದು ಮಾಡಿದ್ದಾರೆ. ಇತ್ತೀಚೆಗೆ ಅಂದರೆ ಫೆಬ್ರವರಿ 3ರಂದು ಡಿಎಂಕೆ ನಾಯಕ ಸ್ಟಾಲಿನ್ ಅವರು 2021ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಪ್ರಶಾಂತ್ ಕಿಶೋರ್ ಅವರನ್ನು ತಂತ್ರಗಾರಿಕ ಸಲಹೆಗರರನ್ನಾಗಿ ಪ್ರಕಟಿಸಿದ್ದಾರೆ.

Leave a Reply