ಗೆದ್ದ ನಂತರವೂ ಅದೇ ತಂತ್ರ ಮುಂದುವರಿಸುತ್ತಿರುವ ಅರವಿಂದ್ ಕೇಜ್ರಿವಾಲ್!

ಡಿಜಿಟಲ್ ಕನ್ನಡ ಟೀಮ್:

ದೆಹಲಿ ಚುನಾವಣೆಯಲ್ಲಿ ಹಿಂದುತ್ವ ಪರವಾದ ನಿಲುವು, ಮೋದಿ ವಿಚಾರದಲ್ಲಿ ಮೃದು ಧೋರಣೆಯಂತಹ ತಂತ್ರಗಾರಿಕೆ ಬಳಸಿ ಗೆಲವು ಸಾಧಿಸಿರುವ ಅರವಿಂದ ಕೇಜ್ರಿವಾಲ್, ಗೆದ್ದ ಮೇಲೂ ಅದನ್ನೇ ಮುಂದುವರಿಸುತ್ತಿದ್ದಾರೆ.

ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಇದು ನನ್ನ ಗೆಲುವಲ್ಲ, ಹನುಮಂತನ ಗೆಲುವು ಎಂದಿದ್ದ ಕೇಜ್ರಿವಾಲ್ ಆಮೂಲಕ ತಾವು ಗೆದ್ದ ಮೇಲೂ ಹಿಂದುತ್ವದ ಪರವಾದ ಧೋರಣೆ ಬಿಡುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಇನ್ನು ಇದೇ 16ರಂದು ಮೂರನೇ ಬಾರಿಗೆ ದೆಹಲಿ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಕೇಜ್ರಿವಾಲ್ ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರೀತಿಯ ಆಮಂತ್ರಣ ನೀಡಿದ್ದಾರೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉಪ ರಾಜ್ಯಪಾಲ ಅನಿಲ್ ಬೈಜಾಲ್ ನೂತನ ಮುಖ್ಯಮಂತ್ರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದು, ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ವಿಶೇಷ ಆಹ್ವಾನ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇನ್ನು ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಕೇಜ್ರಿವಾಲ್ ಅವರು ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೂ ಆಹ್ವಾನ ನೀಡಿದ್ದಾರೆ.

ಮೋದಿ ಹಾಗೂ ಬಿಜೆಪಿ ನಾಯಕರು ಈ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೋ ಬಿಡುತ್ತಾರೋ ಆದರೆ ತಾವು ಇನ್ನುಮುಂದೆ ಮೋದಿ ಅವರ ವಿರುದ್ಧ ನೇರ ದಾಳಿ ಮಾಡಿ ದ್ವೇಷವನ್ನು ತೋರುವುದಿಲ್ಲ ಎಂಬುದನ್ನು ಸಾರುತ್ತಿದ್ದಾರೆ.

ಈ ಎರಡು ತಂತ್ರಗಳು ಈ ಚುನಾವಣೆಯಲ್ಲಿ ಆಪ್ ಭರ್ಜರಿ ಗೆಲುವಿಗೆ ಕಾರಣವಾಗಿದ್ದು, ಇದನ್ನು ಕೇಜ್ರಿವಾಲ್ ಮುಂದುವರಿಸಿಕೊಂಡು ಹೋಗುವ ಸಾಧ್ಯತೆಗಳು ಹೆಚ್ಚಿವೆ.

Leave a Reply