ದಯವಿಟ್ಟು ನಿಮ್ಮ ಹಣ ತೆಗೆದುಕೊಂಡು ನನ್ನ ಬಿಟ್ಟುಬಿಡಿ! ಗೋಗರೆಯುತ್ತಿರುವ ವಿಜಯ್ ಮಲ್ಯ!

ಡಿಜಿಟಲ್ ಕನ್ನಡ ಟೀಮ್:

ಬ್ಯಾಂಕುಗಳಿಂದ ಪಡೆದ 9 ಸಾವಿರ ಕೋಟಿ ಸಾಲ ಮರುಪಾವತಿ ಮಾಡದೆ ಉದ್ದೇಶಿತ ಸುಸ್ಥಿದಾರನಾಗಿ ದೇಶ ಬಿಟ್ಟಿರುವ ಉದ್ಯಮಿ ವಿಜಯ್ ಮಲ್ಯ, ‘ಈಗ ನಿಮ್ಮ ಸಾಲದ ಮೊತ್ತ ಮರುಪಾವತಿ ಮಾಡುತ್ತೇನೆ. ಅದನ್ನು ತೆಗೆದುಕೊಂಡು ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ: ಎಂದು ಗೋಗರೆಯುತ್ತಿದ್ದಾನೆ.

ಈ ಹಿಂದೆಯೂ ಸಾಲದ ಅಸಲು ಮೊತ್ತ ತೀರಿಸುವುದಾಗಿ ವಿಜಯ್ ಮಲ್ಯ ತಿಳಿಸಿದ್ದರೂ ತನಿಖಾ ಸಂಸ್ಥೆಗಳು ಮಾತ್ರ ಕಾನೂನು ಪ್ರಕ್ರಿಯೆಗೆ ಮುಂದಾಗಿವೆ. ಮಲ್ಯರನ್ನು ಗಡಿಪಾರು ಮಾಡುವ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಬ್ರಿಟನ್ನಿನ ರಾಯಲ್ ಜಸ್ಟೀಸ್ ಕೋರ್ಟ್ ನಲ್ಲಿ ನಡೆದ ವಿಚಾರಣೆ ವೇಳೆ ಮಲ್ಯ ಮತ್ತೊಮ್ಮೆ ಈ ಮನವಿ ಮಾಡಿದ್ದಾರೆ.

‘ಬ್ಯಾಂಕುಗಳಿಗೆ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ನಾನು ಪಡೆದಿರುವ ಸಾಲದ ಶೇ.100ರಷ್ಟು ಅಸಲು ತೀರಿಸಲು ಸಿದ್ಧನಿದ್ದೇನೆ. ಈಗಲೇ ಅದನ್ನು ತೆಗೆದುಕೊಳ್ಳಿ’ ಎಂದು ಕೋರ್ಟ್ ಮುಂದೆ ಅಂಗಲಾಚಿದ್ದಾರೆ.

‘ನಾನು ಸಾಲ ಮರುಪಾವತಿ ಮಾಡಿಲ್ಲ ಎಂದು ಬ್ಯಾಂಕ್ ಗಳು ನೀಡಿರುವ ದೂರಿನ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ನನ್ನ ಆಸ್ತಿ ಮುಟ್ಟುಗೋಲು ಹಾಕಿಕೊಂಡಿವೆ. ನಾನು ಪಿಎಂಎಲ್ಎ ಕಾಯ್ದೆ ಅಡಿ ಯಾವುದೇ ತಪ್ಪು ಮಾಡಿಲ್ಲ. ನನ್ನ ಆಸ್ತಿ ಕುರಿತು ಬ್ಯಾಂಕ್ ಹಾಗೂ ಜಾರಿ ನಿರ್ದೇಶನಾಲಯಗಳು ಕಿತ್ತಾಡುತ್ತಿವೆ’ ಎಂದಿದ್ದಾರೆ.

ಸಾಲ ಮರುಪಾವತಿ ಮಾಡುತ್ತೇನೆ ಎಂದು ಹೇಳುತ್ತಿದ್ದರೂ ತನಿಖಾ ಸಂಸ್ಥೆಗಳು ಕಾನೂನು ಹೋರಾಟ ನಡೆಸುತ್ತಿರೋದೇಕೆ? ಮಲ್ಯ ಆಸ್ತಿ ಬ್ಯಾಂಕುಗಳಿಗೆ ಸೇರಿ ಸಾಲ ತೀರುವ ಬದಲು ಜಾರಿ ನಿರ್ದೇಶನಾಲಯದ ಬಳಿ ಕೊಳೆಯುತ್ತಿರುವುದೇಕೆ? ಇದರಿಂದ ಆಗುವ ಪ್ರಯೋಜನವಾದರು ಏನು? ಸಾಲ ಮರುಪಾವತಿಗಾಗಿ ದೂರು ನೀಡಿದ ಬ್ಯಾಂಕ್ ಗಳಿಗೂ ನೆಮ್ಮದಿ ಇಲ್ಲ, ಅತ್ತ ಸಾಲ ಮರುಪಾವತಿ ಮಾಡುತ್ತೇನೆ ಎಂದು ಹೇಳುತ್ತಿದ್ದರೂ ಅದಕ್ಕೆ ಅವಕಾಶ ನೀಡುತ್ತಿಲ್ಲ. ಹಾಗಾದ್ರೆ ತನಿಖಾ ಸಂಸ್ಥೆಗಳು ಮಾಡಲು ಹೊರಟಿರುವುದಾದರೂ ಏನನ್ನು? ಅಂಬಾನಿ ಸೇರಿದಂತೆ ಇತರೆ ಉದ್ಯಮಿಗಳ ಲಕ್ಷಾಂತರ ಕೋಟಿಯಷ್ಟು ಸಾಲ ಮನ್ನಾ ಆಗುವುದಾದರೆ, ಸಾಲ ತೀರಿಸಲು ಸಿದ್ಧ ಎಂದಿರುವ ಮಲ್ಯಗೆ ಎರಡನೇ ಅವಕಾಶ ಏಕಿಲ್ಲ? ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ.

Leave a Reply