ಪುಲ್ವಾಮಾ ದಾಳಿಯಿಂದ ಬೇಳೆ ಬೇಯಿಸಿಕೊಂಡಿದ್ಯಾರು? ಮತ್ತೆ ಚರ್ಚೆಗೆ ಗ್ರಾಸವಾದ ರಾಹುಲ್ ಟ್ವೀಟ್!

ಡಿಜಿಟಲ್ ಕನ್ನಡ ಟೀಮ್:

40 ಸಿಆರ್ ಪಿಎಫ್ ಯೋಧರ ಮೇಲಿನ ಪುಲ್ವಾಮಾ ದಾಳಿಯ ಕರಾಳ ದಿನಕ್ಕೆ ಇಂದು ಒಂದು ವರ್ಷ. ದೇಶದೆಲ್ಲೆಡೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುತ್ತಿದ್ದು, ಈ ಮಧ್ಯೆ ಈ ವಿಚಾರವಾಗಿ ರಾಜಕೀಯ ಚರ್ಚೆ ಆರಂಭವಾಗಿದೆ. ಇದಕ್ಕೆ ಕಾರಣ, ರಾಹುಲ್ ಗಾಂಧಿ ಅವರ ಟ್ವೀಟ್.

‘ನಮ್ಮ ಯೋಧರ ಹತ್ಯೆಯ ಕರಾಳ ದಿನದಂದು, ಈ ದಾಳಿಯಿಂದ ಯಾರು ಲಾಭ ಮಾಡಿಕೊಂಡರು? ಈ ದಾಳಿಯ ತನಿಖೆ ಏನಾಯ್ತು? ನಮ್ಮ ಯೋಧರ ಸಾವಿಗೆ ಕಾರಣವಾದ ಭದ್ರತಾ ವೈಫಲ್ಯದ ಹೊಣೆಯನ್ನು ಬಿಜೆಪಿ ಸರ್ಕಾರ ಯಾರ ಮೇಲೆ ಹೊರಿಸುತ್ತದೆ?’ ಎಂದು ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಚುನಾವಣೆ ಕಾವು ಹೆಚ್ಚುತ್ತಿದ್ದ ಸಂದರ್ಭದಲ್ಲಿ ನಡೆದ ಈ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಬಾಲಕೋಟ್ ಮೇಲೆ ಏರ್ ಸ್ಟ್ರೈಕ್ ಮಾಡಿತು. ಇದು ರಾಷ್ಟ್ರೀಯತೆ ಹೆಸರಲ್ಲಿ ದೇಶದ ಜನರ ಭಾವನೆಯನ್ನು ಹಿಡಿದಿಟ್ಟುಕೊಂಡಿತು. ಜತೆಗೆ ಸಾಮಾಜಿಕ ಹಾಗೂ ಆರ್ಥಿಕ ವಿಚಾರಗಳು ಚುನಾವಣೆ ಸಂದರ್ಭದಲ್ಲಿ ಸಂಪೂರ್ಣವಾಗಿ ಮರೆಯಾದವು. ಇದು ಬಿಜೆಪಿ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಲು ನೆರವಾಯಿತು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ದುರ್ಘಟನೆ ನಡೆದು ಒಂದು ವರ್ಷವಾದರೂ, ಈ ದಾಳಿ ವಿಚಾರದಲ್ಲಿ ಆದ ಗುಪ್ತಚರ ಇಲಾಖೆ ವೈಫಲ್ಯ? ಭದ್ರತಾ ವೈಫಲ್ಯ ವಿಚಾರವಾಗಿ ಎದ್ದಿದ್ದ ಪ್ರಶ್ನೆಗಳಿಗೆ ಇನ್ನು ಕೂಡ ಉತ್ತರ ಸಿಕ್ಕಿಲ್ಲ. ವಿಶ್ವದ ಪ್ರಮುಖ ಮಿಲಿಟರಿ ಪ್ರದೇಶಗಳಲ್ಲಿ ಒಂದಾದ ಈ ಪ್ರದೇಶದಲ್ಲಿ 80 ಕೆ.ಜಿ ಆರ್ ಡಿಎಕ್ಸ್ ಸ್ಫೋಟಕ ಗಡಿ ದಾಟಿ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಇನ್ನು ಯಾರು ಕೂಡ ಉತ್ತರ ನೀಡಿಲ್ಲ. ಈ ಕುರಿತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಬದಲು ಈ ವಿಚಾರದಲ್ಲಿ ರಾಜಕೀಯ ವಾಕ್ಸಮರ ನಡೆಯುತ್ತಿರೋದು ದೇಶದ ಪಾಲಿಗೆ ದುರ್ದೈವದ ಸಂಗತಿ.

ಈ ಮಧ್ಯೆ ಈ ಪ್ರಶ್ನೆಗಳ ವಿಚಾರವಾಗಿ ಉತ್ತರ ನೀಡಬೇಕಾಗಿರುವ ಬಿಜೆಪಿ, ಉತ್ತರ ನೀಡುವ ಜವಾಬ್ದಾರಿ ಮರೆತು ಕಾಂಗ್ರೆಸ್ ವಿರುದ್ಧದ ವಾಗ್ದಾಳಿ ಮಾಡುವತ್ತ ಹೆಚ್ಚು ಗಮನ ಹರಿಸಿದೆ. ರಾಹುಲ್ ಗಾಂಧಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ‘ದಾಳಿಯಿಂದ ಯಾರಿಗೆ ಲಾಭ ಎಂದು ಕೇಳುವ ರಾಹುಲ್ ಗಾಂಧಿ, ಲಾಭದ ಹೊರತಾಗಿ ಬೇರೆ ಏನನ್ನೂ ಯೋಚಿಸುವುದಿಲ್ಲ. ಈ ಗಾಂಧಿ ಕುಟುಂಬ ಲಾಭದ ಹೊರತಾಗಿ ಬೇರೆ ಏನನ್ನೂ ನೋಡುವುದಿಲ್ಲ. ಅವರು ಕೇವಲ ಬೌದ್ಧಿಕವಾಗಿ ಮಾತ್ರವಲ್ಲ ಅವರ ಮನಸ್ಸು ಕೂಡ ಭ್ರಷ್ಟವಾಗಿದೆ’ ಎಂದರು.

Leave a Reply