ಬಿಎಸ್ ವೈ ಉತ್ತರಾಧಿಕಾರಿಯಾಗಲು ಬಿಜೆಪಿಯಲ್ಲಿ ಪೈಪೋಟಿ!

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಹುದ್ದೆ ಯಾರಿಗೆ ಬೇಡ ಹೇಳಿ..? ಯಾರನ್ನೂ ಕರೆದು ಮುಖ್ಯಮಂತ್ರಿ ಆಗ್ತೀರ ಎಂದರೆ ಥಟ್ ಅಂತಾ ಒಪ್ಪಿಗೆ ಕೊಡ್ತಾರೆ. ಇಂತಹ ಸ್ಥಾನವನ್ನು ಬಿ.ಎಸ್ ಯಡಿಯೂರಪ್ಪ ಸಾಕಷ್ಟು ಹೋರಾಟಗಳ ಮೂಲಕ ಪಡೆದುಕೊಂಡ್ರು. ಇದೀಗ ಮುಂದಿನ ಮೂರು ವರ್ಷಗಳ ಕಾಲ ಬಿ.ಎಸ್ ಯಡಿಯೂರಪ್ಪ ಪ್ರಶ್ನಾತೀತ ಮುಖ್ಯಮಂತ್ರಿ ಎನ್ನುವ ಮಾತುಗಳೂ ಕೇಳಿ ಬಂದಿವೆ. ಆದರೆ ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿ ಅವಧಿ ಮುಕ್ತಾಯವಾದ ಬಳಿಕ ಬಿಜೆಪಿಯಲ್ಲಿ ಯಾರು ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಆ ಪ್ರಶ್ನೆಗೆ ಈಗಾಗಲೇ ಅಲ್ಲಲ್ಲಿ ಉತ್ತರ ಸಿಗುವುದಕ್ಕೆ ಪ್ರಾರಂಭವಾಗಿದೆ.

ಸಚಿವ ಸ್ಥಾನ ಸಿಗದ ಕಾರಣಕ್ಕೆ ಇತ್ತೀಚಿಗಷ್ಟೇ ಸಿಎಂ ಯಡಿಯೂರಪ್ಪ ಮೇಲೆ ಗರಂ ಆಗಿದ್ದ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ನಾನು ಮುಂದೊಂದು‌ ದಿನ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗ್ತೀನಿ ಎಂದು ಸ್ವಂತ ಭವಿಷ್ಯ ನುಡಿದಿದ್ದರು. ಇದೀಗ ಸಚಿವ ಸಿ.ಟಿ ರವಿ ಕೂಡ ಮುಖ್ಯಮಂತ್ರಿ ಆಸೆಯನ್ನು ಜನರ ಎದುರೇ ಬಹಿರಂಗ ಮಾಡಿದ್ದಾರೆ. ಮೈಸೂರಿನಲ್ಲಿ ನಿನ್ನೆಯಿಂದ ಆರಂಭವಾದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಸಚಿವ ಸಿ.ಟಿ ರವಿ, ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆಯನ್ನು ಬಿಚ್ಚಿಟ್ಟರು.

ಬಹುರೂಪಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಮುಖ್ಯಮಂತ್ರಿ ಚಂದ್ರು ಅವರನ್ನು ಹಾಸ್ಯ ಮಾಡುತ್ತ, ಮುಖ್ಯಮಂತ್ರಿ ಚಂದ್ರು ಅವರು ಶಾಶ್ವತ ಮುಖ್ಯಮಂತ್ರಿಗಳಾಗಿದ್ದಾರೆ. ನಮಗೂ ಶಾಶ್ವತವಾಗಿ ಮಾಜಿ ಮುಖ್ಯಮಂತ್ರಿ ಎಂದು ಕರೆಸಿಕೊಳ್ಳುವ ಹಾಗೆ ಮಾಡಿ. ನೀವಂತು ಶಾಶ್ವತ ಸಿಎಂ ಆಗಿದ್ದಿರಿ. ನನಗೂ ಒಮ್ಮೆ ಮಾಜಿ ಎನ್ನಿಸಿಕೊಳ್ಳುವ ಅವಕಾಶ ನೀಡಿ ಎಂದು ಮುಖ್ಯಮಂತ್ರಿ ಚಂದ್ರುಗೆ ಮನವಿ ಮಾಡಿದ್ರು. ಸಿ.ಟಿ ರವಿ ಮಾತಿಗೆ ದನಿಗೂಡಿಸಿದ ಸಂಸದ ಪ್ರತಾಪ್ ಸಿಂಹ. ಆಸೆ ಇದ್ದೋರು ರಾಜಕೀಯಕ್ಕೆ ಬರಲು ಸಾಧ್ಯ.‌ ರಾಜಕೀಯದಲ್ಲಿ ಆಸೆ ಪಡೋದು ಸಾಮಾನ್ಯ. ಸಿಎಂ ಆಗೋ ನಿಮ್ಮ ಆಸೆ ಈಡೇರಲಿ ಎಂದು ಸಿ.ಟಿ.ರವಿಗೆ ಶುಭ ಕೋರಿದ್ದಾರೆ.

ನಿನ್ನೆ ಹೇಳಿಕೆ ಬಗ್ಗೆ ಇಂದು ಸ್ಪಷ್ಟನೆ ಕೊಟ್ಟಿರುವ ಸಚಿವ ಸಿ.ಟಿ ರವಿ, ಮುಖ್ಯಮಂತ್ರಿ ಚಂದ್ರು ಇದ್ದ ಕಾರಣ ಆ ಮಾತನ್ನು ಹೇಳಿದ್ದೇನೆ. ಮುಖ್ಯಮಂತ್ರಿ ಚಂದ್ರು ಅವರಿಗೆ ಅವಿಶ್ವಾಸದ ಕಾಟ ಇಲ್ಲ, ಅವರು ಶಾಶ್ವತ ಮುಖ್ಯಮಂತ್ರಿ ಈ ಕಾರಣಕ್ಕೆ ನಾನು ಆ ಮಾತನ್ನು ಹೇಳಿದೆ. ಆದ್ರೆ ಭಗವಂತನ ಇಚ್ಚೆ ಏನಿದೆಯೋ ಗೊತ್ತಿಲ್ಲ. ನಾನು ಪಕ್ಷ ನಿಷ್ಠೆ ಇಟ್ಟುಕೊಂಡವನು. ಇದನ್ನು ಯಾರು ಪ್ರಶ್ನೆ ಮಾಡುವ ವಿಚಾರ ಇಲ್ಲ. ಕೆಲವರಿಗೆ ಗಾಡ್ ಫಾದರ್ ಇದ್ದಾರೆ. ಆದ್ರೆ ನನಗೆ ಗಾಡೇ ಫಾದರ್. ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪರೇ ಮುಖ್ಯಮಂತ್ರಿ. ಅದಾದ ಮೇಲೆ ಏನಾಗುತ್ತೆ ಗೊತ್ತಿಲ್ಲ. ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ ಉಪಮುಖ್ಯಮಂತ್ರಿಯಾಗ್ತಾರೆ ಎಂದು ಯಾರಿಗೆ ಗೊತ್ತಿತ್ತು. ಯಾವ ಜ್ಯೋತಿಷಿಯೂ ಹೇಳಿರಲಿಲ್ಲ ಎಂದು ತೂಗುಯ್ಯಲೆಗೆ ಹೇಳಿಕೆ ರವಾನಿಸಿದ್ರು.

ಬಿ.ಎಸ್ ಯಡಿಯೂರಪ್ಪ ಅವರ ಅವಧಿ ಮುಗಿದ ಮೇಲೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎನ್ನುವ ಚರ್ಚೆಗೆ ಉಮೇಶ್ ಕತ್ತಿ ಟವೆಲ್ ಹಾಕಿದ್ದಾರೆ. ಸಿಎಂ ಪುತ್ರ ವಿಜಯೇಂದ್ರ ಕೂಡ ಭಾರೀ ಲೆಕ್ಕಾಚಾರ ಹಾಕಿಕೊಂಡು ವೇದಿಕೆ ಸಜ್ಜು ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ನ ಸಂತೋಶ್ ಅವರೇ ಮುಖ್ಯಮಂತ್ರಿ ಆಗ್ತಾರೆ ಎನ್ನುವ ಮಾತುಗಳೂ ಇವೆ. ಇದರ ನಡುವೆ‌ ಸಿ.ಟಿ ರವಿ ಹೇಳಿಕೆ ಮತ್ತೋರ್ವ ಅಭ್ಯರ್ಥಿಯನ್ನು ಹುಟ್ಟುಹಾಕಿದೆ. ಒಟ್ಟಾರೆ ಮುಖ್ಯಮಂತ್ರಿ ಪಟ್ಟಕ್ಕೆ ಬಿಜೆಪಿಯಲ್ಲಿ ಮಾತ್ರ ಫೈಟ್ ಶುರುವಾದಂತೆ ಕಾಣಿಸುತ್ತಿದೆ. ಅದೇ ಕಾರಣಕ್ಕೆ ಇಂದು ನಾನು ಪಕ್ಷದ ಕಾರ್ಯಕರ್ತ ಎನ್ನುವ ಹೇಳಿಕೆ ನೀಡಿರುವುದು ಎಂಬ ಮಾತುಗಳೂ ಕೇಳಿ ಬರುತ್ತಿವೆ.

Leave a Reply