ಪರಿಷತ್‌ ಫೈಟ್‌ನಲ್ಲಿ ಸವದಿಗೆ ಗೆಲುವು, ಜೆಡಿಎಸ್‌ನಲ್ಲಿ ಬಂಡಾಯ..!

ಡಿಜಿಟಲ್ ಕನ್ನಡ ಟೀಮ್:

ವಿಧಾನಪರಿಷತ್‌ನ ಸದಸ್ಯರಾಗಿದ್ದ ರಿಜ್ವಾನ್‌ ಅರ್ಷದ್‌ ಶಾಸಕರಾಗಿ ಆಯ್ಕೆಯಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ ಜಯಭೇರಿ ಬಾರಿಸಿದ್ದಾರೆ.

ಬಿಜೆಪಿಯಲ್ಲಿ ಶಾಸಕ ರಾಮದಾಸ್ ಹೊರತುಪಡಿಸಿ ಉಳಿದ ೧೧೬ ಶಾಸಕರು ಮತದಾನ ಮಾಡಿದ್ದಾರೆ. ಅನಾರೋಗ್ಯ ಕಾರಣದಿಂದ ಶಾಸಕ ರಾಮದಾಸ್ ಮತದಾನಕ್ಕೆ ಹಾಜರಾಗಿಲ್ಲ. ಬಿಜೆಪಿ ಶಾಸಕರಲ್ಲದೆ ಪಕ್ಷೇತರ ಶಾಸಕರಾದ ಶರತ್ ಬಚ್ಚೇಗೌಡ, ಎನ್. ನಾಗೇಶ್‌, ಬಿಎಸ್‌ಪಿಯ ಎನ್. ಮಹೇಶ್‌, ಜೆಡಿಎಸ್‌ನ ಜಿ.ಟಿ ದೇವೇಗೌಡ ಹಕ್ಕು ಚಲಾವಣೆ ಮಾಡಿದ್ದಾರೆ. ಒಟ್ಟು 120 ಮತಗಳಲ್ಲಿ 7 ಮತಗಳು ಅಸಿಂಧು ಆಗಿದ್ದು, 113 ಮತ ಪಡೆದ ಲಕ್ಷ್ಮಣ ಸವದಿ ಜಯಗಳಿಸಿದ್ದಾರೆ.

ಬೆಳಗ್ಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ನಡೀತು. ಸಭೆಯಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಪರಿಷತ್‌ ಚುನಾವಣೆಯಲ್ಲಿ ಭಾಗಿಯಾಗುವುದು ಬೇಡ ಎಂಬ ಸಂದೇಶ ರವಾನಿಸಿದ್ರು. ಮತದಾನದಿಂದ ಜೆಡಿಎಸ್‌ ದೂರ ಉಳಿದರೂ ಜೆಡಿಎಸ್‌ ಶಾಸಕ ಜಿ.ಟಿ ದೇವೇಗೌಡ ಮಾತ್ರ ಪರಿಷತ್‌ ಚುನಾವಣೆಯಲ್ಲಿ ಹಕ್ಕು ಚಲಾಯಿಸಿದ್ರು. ಮತದಾನದ ಬಳಿಕ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ಜಿ.ಟಿ ದೇವೇಗೌಡ, ಲಕ್ಷ್ಮಣ ಸವದಿಗೆ ಮತ ಚಲಾಯಿಸಿದ ಬಗ್ಗೆ ತಿಳಿಸಿದ್ರು. ಈ ವೇಳೆ ಸಿಎಂ ಕೂಡ ಧನ್ಯವಾದ ಹೇಳಿದ್ರು.

ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ನಾನು ಮತದಾನ ಮಾಡಿದ್ದೇನೆ. ಜೆಡಿಎಸ್ ಯಾರಿಗೂ ಬೆಂಬಲ ಕೊಟ್ಟಿಲ್ಲ ಅನ್ನೋ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನಾನು ವೋಟ್ ಮಾಡಿದ್ದೇನೆ. ಒಬ್ಬ ಸಹಕಾರಿ ನಾಯಕ, ರೈತ ನಾಯಕ ಡಿಸಿಎಂಗೆ ಮತ ಹಾಕಿದ್ದೇನೆ. ಸಹಕಾರಿ ನಾಯಕ, ರೈತ ಲಕ್ಷ್ಮಣ ಸವದಿಗೆ ಮತ ಹಾಕಿದ್ದೀನಿ. ಇಂತಹವರಿಗೆ ವೋಟ್ ಮಾಡಿ ಎಂದು ಪಕ್ಷ ನನಗೆ ಹೇಳಿಲ್ಲ. ವಿಪ್ ಕೂಡ ಜಾರಿ ಮಾಡಿಲ್ಲ. ಪಕ್ಷದಿಂದ ನನಗೆ ಯಾವ ಸೂಚನೆಯೂ ಬಂದಿರಲಿಲ್ಲ ಎಂದಿದ್ದಾರೆ.

ಪರಿಷತ್ ಚುನಾವಣೆಯಲ್ಲಿ ಜಿ.ಟಿ ದೇವೇಗೌಡ ಬಿಜೆಪಿಗೆ ಮತ ಹಾಕಿರುವ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್‌ ಪಕ್ಷ ಮತದಾನದಲ್ಲಿ ಭಾಗವಹಿಸಲ್ಲ ಎಂಬ ಸಂದೇಶ ಕೊಟ್ಟ ಹಿನ್ನೆಲೆಯಲ್ಲಿ ಜೆಡಿಎಸ್‌ ಕೂಡ ಅದೇ ನಿಲುವು ಕೈಗೊಳ್ಳಬೇಕಾಯ್ತು. ಆದರೆ ಜಿ.ಟಿ ದೇವೇಗೌಡ ಮತದಾನ ಮಾಡಿದ್ದು ನನಗೆ ಗೊತ್ತಿಲ್ಲ. ಈಗ ಅವರು ನಮ್ಮಲ್ಲಿ ಇದ್ದಾರಾ..? ಅವರು ಹಲವಾರು ಹೇಳಿಕೆಗಳನ್ನ ಕೊಟ್ಟುಕೊಂಡಿದ್ದಾರೆ. ಇಲ್ಲಿರುತತಾರೋ ಎಲ್ಲಿರುತ್ತಾರೋ ಎಂಬುದನ್ನು ಕಾದು ನೋಡೋಣ. ಮತದಾನದಲ್ಲಿ ಭಾಗಿವಹಿಸೋದು ಬೇಡ ಎಂದು ಶಾಸಕಾಂಗ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೆವು ಎಂದಿದ್ದಾರೆ. ಶಾಸಕಾಂಗ ಪಕ್ಷಕ್ಕೆ ಅಗೌರವ ಕೊಟ್ಟಿರೋದು ಅವರಿಗೆ ಬಿಟ್ಟಿದ್ದು ಎಂದಿದ್ದಾರೆ.

ಜಿ.ಟಿ ದೇವೇಗೌಡ ಇಲ್ಲಿದ್ದಾರೋ ಅಲ್ಲಿದ್ದಾರೆ ಗೊತ್ತಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಶಾಸಕ ಜಿ.ಟಿ ದೇವೇಗೌಡ, ನಾನು ಸದ್ಯಕ್ಕೆ ಜೆಡಿಎಸ್ ಪಕ್ಷದಿಂದ ಶಾಸಕನಾಗಿದ್ದೇನೆ. ಮತ ಹಾಕುವ ವಿಚಾರದಲ್ಲಿ ಯಾವ ನಿರ್ದೇಶನವನ್ನು ನೀಡಿರಲಿಲ್ಲ. ವಿಧಾನಸೌದದಲ್ಲಿ ಚುನಾವಣೆ ನಡೆಯುತ್ತಿದೆ. ಒಬ್ಬ ಶಾಸಕನಾಗಿ ಮತವನ್ನ ವ್ಯರ್ಥ ಮಾಡಬಾರದು ಎನ್ನುವ ಕಾರಣಕ್ಕೆ ಹಕ್ಕು ಚಲಾಯಿಸಿದ್ದೇನೆ. ನಾನು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕನಾಗಿ ಕ್ಷೇತ್ರದಲ್ಲಿ ಇದ್ದೀನಿ. ಪಕ್ಷಕ್ಕೆ ಅಗೌರವ ತರುವ ರೀತಿಯಲ್ಲಿ ನಾನು ನಡೆದುಕೊಂಡಿಲ್ಲ ಎಂದಿದ್ದಾರೆ. ಜಿ.ಟಿ ದೇವೇಗೌಡರ ಮಾತಿಗೆ ಮತ್ತೆ ಕುಮಾರಸ್ವಾಮಿ ಟಾಂಗ್‌ ಕೊಟ್ಟಿದ್ದಾರೆ.

ಜಿ.ಟಿ ದೇವೇಗೌಡರ ಬಗ್ಗೆ ನಾನು ಚರ್ಚೆ ಮಾಡಲ್ಲ. ಶಾಸಕಾಂಗ ಪಕ್ಷದ ಸಭೆ ಇದೆ ಎಂಬ ಸಂದೇಶ ಹೋಗಿತ್ತು. ಆದರೂ ಬೇರೆಯದ್ದೇ ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ. ಜಿ.ಟಿ ದೇವೇಗೌಡ ನಮ್ಮ ಪಕ್ಷಕ್ಕೆ ಬಂದ್ರು.. ಹೋದ್ರು.. ಮುಂದೆ ಎಲ್ಲೋಗ್ತಾರೋ ನೋಡೋಣ..! ನಾವು ಬಾಗಿಲು ಹಾಕಿಕೊಂಡು ಕೂತಿಲ್ಲ. ಯಾರು ಹೋದ್ರೂ ಜನತಾದಳ ಮುಳುಗಿ ಹೋಗಲ್ಲ. ಈಗಾಗಲೇ ಹಿಂದೆ ಹೋದವರ ಕಥೆ ಗೊತ್ತು ಅಲ್ವಾ..? ಎಂದು ವಿಶ್ವನಾಥ್‌ ಸೋಲಿನ ಬಗ್ಗೆ ಪರೋಕ್ಷವಾಗಿ ಹಳ್ಳಿಹಕ್ಕಿಗೂ ಕುಟುಕಿದ್ದಾರೆ. ಒಟ್ಟಾರೆ 113 ಮತಗಳನ್ನು ಪಡೆದ ಲಕ್ಷ್ಮಣ ಸವದಿ ಜಯಭೇರಿ ಬಾರಿಸಿದ್ದಾರೆ. ಪರಿಷತ್‌ ಚುನಾವಣೆ ಜೆಡಿಎಸ್‌ನೊಳಗೆ ಬಿರುಗಾಳಿಯನ್ನೂ ಎಬ್ಬಿಸಿದೆ ಎಂದರೆ ತಪ್ಪಲ್ಲ.

Leave a Reply