ಡಿಜಿಟಲ್ ಕನ್ನಡ ಟೀಮ್:
ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿ.ಎಸ್ ಯಡಿಯೂರಪ್ಪ ಅವರಿಗೂ ಸಂಪುಟ ಸಂಕಷ್ಟ ಎದುರಾಗುವ ಎಲ್ಲಾ ಲಕ್ಷಗಳು ಕಾಣಿಸಿಕೊಂಡಿವೆ. ನಿನ್ನೆ ಸೋಮವಾರ ರಾತ್ರಿ ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ 20 ಕ್ಕೂ ಹೆಚ್ಚು ಅತೃಪ್ತ ನಾಯಕರು ಸಭೆ ಸೇರಿ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆದಿರುವ ಸಭೆ ಬಗ್ಗೆ ಸಿಎಂ ಯಡಿಯೂರಪ್ಪ ಕಂಗಾಲಾಗಿದ್ದು, ಗುಪ್ತಚರ ಇಲಾಖೆ ಮುಖ್ಯಸ್ಥರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅತೃಪ್ತರ ಸಭೆ ಬಗ್ಗೆ ಮಾಹಿತಿ ಇರಲಿಲ್ವಾ..? ಸಭೆ ಬಗ್ಗೆ ಮೊದಲೇ ಮಾಹಿತಿ ಕೊಟ್ಟಿದ್ರೆ ಸಭೆ ನಡೆಯುವುದನ್ನು ತಡೆಯಬಹುದಿತ್ತು. ಬಜೆಟ್ ಅಧಿವೇಶನ ನಡೆಯುವ ಸಮಯದಲ್ಲಿ ವಿಪಕ್ಷಗಳ ಬಾಯಿಗೆ ಆಹಾರ ಕೊಟ್ಟಂತಾಯಿತು. ಮುಂದಾದರೂ ಭಿನ್ನಮತೀಯ ಚಟುವಟಿಕೆಯ ಮೇಲೆ ಒಂದು ಕಣ್ಣಿಡಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಸಭೆ ಬಗ್ಗೆ ಹೈಕಮಾಂಡ್ಗೆ ಗೊತ್ತಿತ್ತು..! ಸಿಎಂಗೆ ಗೊತ್ತಿಲ್ಲ..!
ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಅಷ್ಟಕಷ್ಟೆ ಎನ್ನುವಂತಿರುವ ಸಿಎಂ ಯಡಿಯೂರಪ್ಪ ಅವರಿಗೆ ಭಿನ್ನಮತೀಯ ಶಾಸಕರು, ನಾಯಕರ ಸಭೆ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ದೆಹಲಿಯಲ್ಲಿ ಕುಳಿತ ಬಿಜೆಪಿ ಹೈಕಮಾಂಡ್ ನಾಯಕರಿಗೆ ಸಭೆ ಬಗ್ಗೆ ಮಾಹಿತಿ ಇತ್ತು ಎನ್ನಲಾಗಿದೆ. ಶೆಟ್ಟರ್ ನೇತೃತ್ವದಲ್ಲಿ ಭಿನ್ನಮತೀಯರು ಸಭೆ ಸೇರುತ್ತಿರುವ ಬಗ್ಗೆ ಸಂತೋಷ್ ಹಾಗು ಪ್ರಹ್ಲಾದ್ ಜೋಷಿಗೆ ಸಭೆಗೆ ಮೊದಲೆ ಮಾಹಿತಿ ಕೊಡಲಾಗಿತ್ತು. ಸಭೆಯ ನಂತರವೂ ಶೆಟ್ಟರ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ
ಸಂಪುಟ ರಚನೆ ಬಗ್ಗೆ ಮೂಲ ಬಿಜೆಪಿ ಶಾಸಕರಲ್ಲಿ ಅಸಮಾಧಾನ ಇದೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವುದು ಸೂಕ್ತ. ಇಲ್ಲದಿದ್ದರೆ ಕೆಲ ಶಾಸಕರು ಕೈಬಿಟ್ಟುಹೋಗುವ ಸಾಧ್ಯತೆ ಇದೆ ಎನ್ನುವ ಮಾತನ್ನು ಶೆಟ್ಟರ್ ತಿಳಿಸಿದ್ದಾರೆ ಎನ್ನಲಾಗ್ತಿದೆ. ಅದರಲ್ಲೂ ಸಚಿವ ಸ್ಥಾನ ಸಿಗದೆ ಕೋಪಿಸಿಕೊಂಡಿದ್ದ ಉಮೇಶ್ ಕತ್ತಿ ರಾಜೀನಾಮೆ ಕೊಟ್ಟರು ಅಚ್ಚರಿಯಿಲ್ಲ ಎಂದು ಸಂತೋಷ್ಗೆ ಮಾಹಿತಿ ನೀಡಿದ್ದಾರಂತೆ.
ಇಷ್ಟೆಲ್ಲಾ ಬೆಳವಣಿಗೆ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಶೆಟ್ಟರ್, ಅತೃಪ್ತ ನಾಯಕರ ಸಭೆಯಲ್ಲ. ಅಭಿವೃದ್ಧಿ ಕೆಲಸಗಳಿಗೆ ಸೇರಿದ್ದೆವು. ಕೆಲವರು ತಮ್ಮ ಕ್ಷೇತ್ರದಲ್ಲಿನ ಕೆಲಸದ ಬಗ್ಗೆ ಚರ್ಚಿಸಲು ಬಂದಿದ್ದರು. ಕಚೇರಿಗೆ ಬರುವಂತೆ ಹೇಳಿ ಕಳುಹಿಸಿದ್ದೇನೆ ಎಂದು ತೇಪೆ ಹಾಕುವ ಕೆಲಸ ಮಾಡಿದ್ದಾರೆ. ಆದರೆ ಬೆಳಗ್ಗೆ 11 ಗಂಟೆಗೆ ಶಾಸಕ ಉಮೇಶ್ ಕತ್ತಿ ಸುದ್ದಿಗೋಷ್ಟಿ ಕರೆದಿದ್ದಾರೆ. ಈ ಸುದ್ದಿ ಗೋಷ್ಟಿಯಲ್ಲಿ ಬಂಡಾಯದ ಬಾವುಟ ಹಾರಿಸ್ತಾರಾ..? ಇಲ್ಲ ಸೀಕ್ರೆಟ್ ಸಭೆ ಬಗ್ಗೆ ಮುಚ್ಚಿಡುವ ತಂತ್ರಗಾರಿಕೆಯನ್ನು ಮಾಡ್ತಾರಾ ಎನ್ನುವ ಕುತೂಹಲ ಮೂಡಿಸಿದೆ. ಒಟ್ಟಾರೆ ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರಿಗೆ ಸಂಪುಟ ಸಂಕಟ ಎದುರಾಗಿರೋದು ಮಾತ್ರ ಸುಳ್ಳಲ್ಲ.